ADVERTISEMENT

ಮೋದಿ ಸರ್ಕಾರ ಎಷ್ಟು ದಿನ ಇರುತ್ತದೆಯೋ ಗ್ಯಾರಂಟಿ ಇಲ್ಲ: ತಾಹೀರ್ ಹುಸೇನ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 16:14 IST
Last Updated 24 ಜೂನ್ 2024, 16:14 IST
ಸಿಂಧನೂರಿನ ಇಖ್ರಾ ಶಾಲೆಯಲ್ಲಿ ಭಾನುವಾರ ನಡೆದ ವೆಲ್ಪೇರ್ ಪಾರ್ಟಿಯ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ವೆಲ್ಪೇರ್ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ತಾಹೀರ್ ಹುಸೇನ್ ವಕೀಲ ಮಾತನಾಡಿದರು
ಸಿಂಧನೂರಿನ ಇಖ್ರಾ ಶಾಲೆಯಲ್ಲಿ ಭಾನುವಾರ ನಡೆದ ವೆಲ್ಪೇರ್ ಪಾರ್ಟಿಯ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ವೆಲ್ಪೇರ್ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ತಾಹೀರ್ ಹುಸೇನ್ ವಕೀಲ ಮಾತನಾಡಿದರು   

ಸಿಂಧನೂರು: ಸರ್ವಾಧಿಕಾರಿಯಂತೆ ವರ್ತಿಸಿದ ಬಿಜೆಪಿಗೆ ದೇಶದ ಜನತೆ ತಕ್ಕಪಾಠ ಕಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದು, ಪ್ರಸ್ತುತ ಮೋದಿ ನೇತೃತ್ವದಲ್ಲಿ ಒಂಟಿ ಕಾಲಿನ ಸರ್ಕಾರವಿದ್ದು, ಎಷ್ಟು ದಿನ ಇರುತ್ತದೆಯೋ ಗ್ಯಾರಂಟಿ ಇಲ್ಲ ಎಂದು ವೆಲ್ಪೇರ್ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ತಾಹೀರ್ ಹುಸೇನ್ ವಕೀಲ ಟೀಕಿಸಿದರು.

ನಗರದ ಇಖ್ರಾ ಶಾಲೆಯಲ್ಲಿ ಭಾನುವಾರ ನಡೆದ ವೆಲ್ಪೇರ್ ಪಾರ್ಟಿಯ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆಗೂ ಮುನ್ನ ಸಂವಿಧಾನ ಉಳಿಯಲ್ಲ. ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಜೀವನ ನಡೆಸಲು ತೊಂದೆಯಾಗಿದೆ ಎನ್ನುವ ಚರ್ಚೆಗಳು ನಡೆದಿದ್ದವು. ದೇಶದ ಜನತೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡದೇ ಸರ್ವಾಧಿಕಾರ, ದುರಹಂಕಾರಕ್ಕೆ ಕಡಿವಾಣ ಹಾಕಿದ್ದಾರೆ. ನಿತೀಶ್‌ಕುಮಾರ ಹಾಗೂ ಚಂದ್ರಬಾಬು ನಾಯ್ಡು ಅವರು ತಮ್ಮ ಹಿತಕ್ಕಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಯಾವ ಸಂದರ್ಭದಲ್ಲಾದರೂ ಬೆಂಬಲ ವಾಪಸ್ ಪಡೆಯಬಹುದು. ಅಭದ್ರ ಸರ್ಕಾರದಿಂದ ಅಭಿವೃದ್ದಿ ನಿರೀಕ್ಷೆ ಸಾಧ್ಯವಿಲ್ಲ. ಈಗಾಗಲೇ ನೀಟ್ ಹಗರಣದ ಮೂಲಕ ಕೇಂದ್ರ ಸರ್ಕಾರ ವಿದ್ಯಾರ್ಥಿ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆಪಾದಿಸಿದರು.

ADVERTISEMENT

ರಾಜ್ಯ ಉಪಾಧ್ಯಕ್ಷ ಮೋಬಿನ್ ಅಹ್ಮದ್ ಮಾತನಾಡಿ, ಕಲಬುರ್ಗಿಯಲ್ಲಿ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್‍ನನ್ನು ನಮ್ಮ ಪಕ್ಷದ ಹೋರಾಟ ಫಲವಾಗಿ ಮತ್ತೆ ಆರಂಭವಾಗಿದೆ. ಪ್ರತಿ ಜಿಲ್ಲೆಗಳನ್ನು ಸಮಸ್ಯೆಗಳನ್ನು ಗುರುತಿಸಬೇಕಿದೆ. ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡಬೇಕಿದೆ ಎಂದರು.

ರಾಜ್ಯ ಸಮಿತಿ ಮೀಡಿಯಾ ಕಾರ್ಯದರ್ಶಿ ರಿಜ್ವಾನ್ ಅಹ್ಮದ್, ಜಿಲ್ಲಾ ಅಧ್ಯಕ್ಷ ಶೇಖ್ ಫರೀದ್, ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ಗನಿ, ಮಹಿಬೂಬ್ ಖಾನ್‍ಸಾಬ್, ತಾಲೂಕು ಅಧ್ಯಕ್ಷ ಖಾದರ್ ಸಾಬ್ ಬುಡ್ಡಣ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.