ಕವಿತಾಳ: ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿ ಕಾಲ ಕಳೆಯುವ ಕೆಲ ಕುಟುಂಬಗಳು, ಸೂರು ಕಟ್ಟಿಕೊಳ್ಳಬೇಕೆಂಬ ನಿವಾಸಿಗಳ ಕನಸಿಗೆ ಅರಣ್ಯ ಇಲಾಖೆ ಅಡ್ಡಿ, ಅಲ್ಲಲ್ಲಿ ಜೋತುಬಿದ್ದ ವಿದ್ಯುತ್ ತಂತಿ, ಕಾಣದ ಸಮರ್ಪಕ ಚರಂಡಿ ವ್ಯವಸ್ಥೆ. ಇಂತಹ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಸಮೀಪದ ಕೊಟೆಕಲ್ ಗ್ರಾಮಸ್ಥರು.
ಅಮೀನಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟೆಕಲ್ ಗ್ರಾಮದಲ್ಲಿ ಅಂದಾಜು 2 ಸಾವಿರ ಜನ ಸಂಖ್ಯೆಯನ್ನು ಹೊಂದಿದ್ದು, 300 ಮನೆಗಳಿವೆ. ಗ್ರಾಮದ ಕೆಳಭಾಗದ ಓಣಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸದ ಕಾರಣ ಸುಮಾರು 30 ಮನೆಗಳು 200–300 ಮೀಟರ್ ದೂರದಿಂದ ಮರದ ಕಟ್ಟಿಗೆ ಮೂಲಕ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ.
ಇನ್ನೂ ಕೆಲವರು ಸಣ್ಣ ಪ್ರಮಾಣದ ಸೋಲಾರ್ ಲೈಟ್ ಅಳವಡಿಸಿಕೊಂಡಿದ್ದಾರೆ. ಕೆಲವರು ತಾತ್ಕಾಲಿಕ ಚಾರ್ಜಿಂಗ್ ಲೈಟ್ ಬಳಸುತ್ತಿದ್ದು, ಅಕ್ಕ ಪಕ್ಕದ ಮನೆಗಳಲ್ಲಿ ಚಾರ್ಜ್ ಮಾಡಿಕೊಂಡು ಬಳಸುತ್ತಿದ್ದಾರೆ. 200-300 ಮೀಟರ್ ದೂರದಿಂದ ವಿದ್ಯುತ್ ಸಂಪರ್ಕ ಪಡೆದ ಕಾರಣ ತಂತಿಗಳು ಮನೆ ಗೋಡೆಗಳು ಹಾಗೂ ಮರಗಳ ಕೆಳಗೆ ಜೋತು ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
‘ಗ್ರಾಮ ಕೆಳಭಾಗದ ಓಣಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ವಿದ್ಯುತ್ ಕಂಬಗಳನ್ನು ಅಳವಡಿಸಲು ಜೆಸ್ಕಾಂ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ’ ಎಂದು ಅಲ್ಲಿನ ನಿವಾಸಿಗಳು ದೂರಿದರು.
‘ಈಗಾಗಲೇ ಮನೆ ನಿರ್ಮಿಸಿಕೊಂಡವರು ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟುತ್ತಿದ್ದು, ಅಗತ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ. ಹೀಗಿದ್ದರೂ ಕೆಲವರಿಗೆ ಹೊಸದಾಗಿ ಮನೆ ನಿರ್ಮಿಸಿಕೊಳ್ಳಲು ಬಿಡುತ್ತಿಲ್ಲ’ ಎಂದು ಗ್ರಾಮದ ಹನುಮಂತ್ರಾಯ ಆರೋಪಿಸಿದರು.
‘ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ. ಚರಂಡಿ ಮತ್ತು ಕೆಲ ಓಣಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು. ಕೆಳ ಭಾಗದ ಓಣಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ ಮನೆಗಳಿಗೆ ಸಂಪರ್ಕ ಕಲ್ಪಿಸಬೇಕು. ಹೊಸದಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು’ ಎಂದು ಆಂಜನೇಯ ನಾಯಕ ಒತ್ತಾಯಿಸಿದರು.
‘ಈ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಗ್ರಾಮಸ್ಥರ ಬಳಿ ದಾಖಲೆಗಳಿದ್ದರೆ ಅವುಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಅರಣ್ಯ ಇಲಾಖೆ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶವಿಲ್ಲ. ಸರ್ಕಾರದ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ’ಎಂದು ವಲಯ ಅರಣ್ಯ ಅಧಿಕಾರಿ ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.