ADVERTISEMENT

ರಾಯಚೂರು | ರೈತರು, ವ್ಯಾಪಾರಸ್ಥರಿಂದ ರಸ್ತೆ ಬದಿ ತರಕಾರಿ ಮಾರಾಟ

ತರಕಾರಿ ಸಗಟು ವ್ಯಾಪಾರಕ್ಕೆ ಸರಿಯಾದ ವ್ಯವಸ್ಥೆಯೇ ಇಲ್ಲ

ಚಂದ್ರಕಾಂತ ಮಸಾನಿ
Published 20 ಮೇ 2024, 5:19 IST
Last Updated 20 ಮೇ 2024, 5:19 IST
ರಾಯಚೂರಿನ ಕೆರೆಯ ಪಕ್ಕದಲ್ಲಿ ಖಾಸಗಿ ಜಾಗದಲ್ಲಿ ನಡೆಯುತ್ತಿರುವ ಮಾರುಕಟ್ಟೆ / ಚಿತ್ರಗಳು– ಶ್ರೀನಿವಾಸ ಇನಾಮದಾರ್
ರಾಯಚೂರಿನ ಕೆರೆಯ ಪಕ್ಕದಲ್ಲಿ ಖಾಸಗಿ ಜಾಗದಲ್ಲಿ ನಡೆಯುತ್ತಿರುವ ಮಾರುಕಟ್ಟೆ / ಚಿತ್ರಗಳು– ಶ್ರೀನಿವಾಸ ಇನಾಮದಾರ್   

ರಾಯಚೂರು: ಜಿಲ್ಲಾ ಕೇಂದ್ರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಏಷ್ಯಾದಲ್ಲೇ ದೊಡ್ಡದು ಎಂದು ಚುನಾಯಿತ ಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಭಾಷಣಗಳಲ್ಲಿ ಬಡಾಯಿ ಕೊಚ್ಚಿಕೊಂಡರೂ ತರಕಾರಿ ಸಗಟು ವ್ಯಾಪಾರಕ್ಕೆ ನಗರದಲ್ಲಿ ಸರಿಯಾದ ವ್ಯವಸ್ಥೆಯೇ ಇಲ್ಲ.

ನಗರದಲ್ಲಿರುವ ಉಸ್ಮಾನಿಯಾ ತರಕಾರಿ ಮಾರುಕಟ್ಟೆ 1905ರಲ್ಲೇ ಆರಂಭವಾಗಿದೆ. ನಗರ ಬೃಹದಾಕಾರದಲ್ಲಿ ಬೆಳೆದ ನಂತರ ವ್ಯಾಪಾರ ವಿಸ್ತರಣೆಗೆ ಜಾಗ ಸಾಲುತ್ತಿಲ್ಲ. ಹಳೆಯ ವ್ಯಾಪಾರಿಗಳು ಅಲ್ಲಿನ ಸ್ಥಳಗಳನ್ನು ಆಕ್ರಮಿಸಿಕೊಂಡಿದ್ದಾರೆ. ಹೊರಗಿನಿಂದ ಬಂದ ರೈತರಿಗೆ ಇಲ್ಲಿ ಮುಕ್ತವಾಗಿ ಮಾರಾಟ ಮಾಡಲು ಅವಕಾಶ ದೊರಕುತ್ತಿಲ್ಲ.

ಜಾಗ ಇಲ್ಲದ್ದಕ್ಕೆ ಸಣ್ಣ ರೈತರು ಹಾಗೂ ತರಕಾರಿ ಮಾರಾಟಗಾರರು ಮೊದಲು ಎಂ. ವೀರಣ್ಣ ವೃತ್ತದಲ್ಲಿ ಬೆಳಿಗ್ಗೆ ತರಕಾರಿ ಮಾರಾಟ ಮಾಡುತ್ತಿದ್ದರು. ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ದಟ್ಟಣೆಯಾದ ನಂತರ ಅದನ್ನು ಆಕಾಶವಾಣಿ ಕಚೇರಿ ಕಡೆಗೆ ಹೋಗವ ಮಾರ್ಗದಲ್ಲಿ ಮಾವಿನ ಕೆರೆಯ ದಡದಲ್ಲಿರುವ ಖಾಸಗಿ ಜಾಗಕ್ಕೆ ಮಾರುಕಟ್ಟೆ ಸ್ಥಳಾಂತರಿಸಲಾಗಿದೆ.

ADVERTISEMENT

ತರಕಾರಿ ಮಾರುವ ಸ್ಥಳದಲ್ಲಿ ಒಂದು ಕಡೆ ಸ್ಮಶಾನ ಇದ್ದರೆ, ಇನ್ನೊಂದು ಕಡೆ ಕರೆಯ ಹೊಲಸು ನೀರು ಗಬ್ಬು ನಾರುತ್ತಿದೆ. ಕಟ್ಟಡ ತ್ಯಾಜ್ಯವನ್ನು ಇಲ್ಲಿಯೇ ತಂದು ಸುರಿಯಲಾಗುತ್ತಿದೆ.

ರಾಯಚೂರು ತಾಲ್ಲೂಕು ಹಾಗೂ ನೆರೆಯ ಆಂಧ್ರಪ್ರದೇಶದ ಗಡಿ ಗ್ರಾಮಗಳ ರೈತರು ನಗರಕ್ಕೆ ತರಕಾರಿ ತಂದು ಮಾರಾಟ ಮಾಡಲು ಸರಿಯಾದ ಸ್ಥಳವೇ ಇಲ್ಲವಾಗಿದೆ. ರಸ್ತೆ ಬದಿಗೇ ಕುಳಿತು ಮಾರಾಟ ಮಾಡಿ ಹೋಗುತ್ತಿದ್ದಾರೆ. ಇಲ್ಲಿ ಯಾವುದೇ ತರಹದ ಸೌಲಭ್ಯಗಳೂ ಇಲ್ಲ.

ಹೊಸ ಆಯುಕ್ತರು ಬಂದ ಮೇಲೆ ನಗರಸಭೆಯ ಸ್ವಚ್ಛತಾ ಸಿಬ್ಬಂದಿ ನಿತ್ಯ ಸ್ವಚ್ಛ ಮಾಡುತ್ತಿದ್ದಾರೆ. ಆದರೆ, ಒಂದು ದಿನ ಬಿಟ್ಟರೆ ಸಾಕು ಇಲ್ಲಿ ಕಸದ ಗುಡ್ಡೆಯೇ ನಿರ್ಮಾಣವಾಗುತ್ತದೆ. ಜಿಲ್ಲಾಡಳಿತ ಹಾಗೂ ನಗರಸಭೆ ನಗರದಲ್ಲಿ ಅಚ್ಚುಕಟ್ಟಾದ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಆಸಕ್ತಿ ತೋರಿಸುತ್ತಿಲ್ಲ. ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿವೆ. ಮಠ, ಮಂದಿರಗಳು ನಿರ್ಮಾಣವಾಗಿವೆ. ಅತಿಕ್ರಮಣ ತೆರವುಗೊಳಿಸಿ ಮಾರುಕಟ್ಟೆ ನಿರ್ಮಿಸಿದರೂ ಅನುಕೂಲವಾಗಲಿದೆ. ಆದರೆ, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಿದ್ಧವಿಲ್ಲ.

ರಾಯಚೂರು ಜಿಲ್ಲೆಯಲ್ಲಿ ಜೂನ್‌ನಿಂದ ನವೆಂಬರ್‌ ವರೆಗೂ ತೋಟಗಾರಿಕೆ ಬೆಳೆ ಬೆಳೆಯುತ್ತದೆ. ತೋಟಗಾರಿಕೆ ಉತ್ಪನ್ನಗಳೂ ಮಾರುಕಟ್ಟೆಗೆ ಬರುತ್ತವೆ. ನವೆಂಬರ್‌ ನಂತರ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಿಂದ ತರಕಾರಿ ಇಲ್ಲಿಗೆ ಬರುತ್ತದೆ ಎಂದು ಇಲ್ಲಿಯ ಸಗಟು ವ್ಯಾಪಾರಸ್ಥರು ಹೇಳುತ್ತಾರೆ.

‘ತನ್ವೀರ್‌ ಸೇಠ ಅವರು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಐಡಿಎಂಪಿಎಸ್ ಲೇಔಟ್, ನಿಜಲಿಂಗಪ್ಪ ಕಾಲೊನಿ, ಜವಾಹರ ಕಾಲೊನಿಯ ಉದ್ಯಾನಗಳಲ್ಲೇ ತರಕಾರಿ ಮಾರುಕಟ್ಟೆ ನಿರ್ಮಿಸಲು ನಿರ್ಧಾರ ಮಾಡಿದ್ದರು. ಆದರೆ, ಅವರ ಯೋಜನೆ ಅನುಷ್ಟಾನಕ್ಕೆ ಬರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ರಾಯಚೂರಲ್ಲಿ ಕನಿಷ್ಠ 38 ಹಾಗೂ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತದೆ ತರಕಾರಿ ಬಹುಬೇಗ ಬಾಡುತ್ತದೆ. ಕೋಲ್ಡ್‌ಸ್ಟೋರೇಜ್‌ ಇಲ್ಲದ ಕಾರಣ ರೈತರು ಹಾಗೂ ವ್ಯಾಪಾರಸ್ಥರು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಎಪಿಎಂಸಿಯಲ್ಲಿ ತರಕಾರಿ ಹಾಗೂ ಹಣ್ಣುಗಳ ಸಂರಕ್ಷಣೆಗೆ ಕೋಲ್ಡ್‌ ಸ್ಟೋರೇಜ್‌ ನಿರ್ಮಾಣ ಮಾಡಬೇಕು‘ ಎಂದು ಮನವಿ ಮಾಡುತ್ತಾರೆ.

ರಾಯಚೂರಿನ ಹಳೆಯ ನಗರದಲ್ಲಿ ರಸ್ತೆ ಮೇಲೆಯೇ ತರಕಾರಿ ಮಾರಾಟ ಮಾಡುತ್ತಿರುವುದು
ರಾಯಚೂರಿನ ಹೊರವಲಯದ ಕಾಟನ್‌ ಮಾರ್ಕೇಟ್‌ನ ಎಪಿಎಂಸಿ ಉಪ ಮಾರುಕ್ಟೆಯ ‘ಡಿ‘ ಬ್ಲಾಕ್‌ನಲ್ಲಿ ಹೊರ ಜಿಲ್ಲೆಗಳಿಂದ ಬಂದ ಈರುಳ್ಳಿ ಸಂಗ್ರಹಿಸಲಾಗಿದೆ
 ರಾಯಚೂರಿನ ಹೊರವಲಯದಲ್ಲಿ ಕಾಟನ್‌ ಮಾರ್ಕೆಟ್‌ ‘ಡಿ’ ಬ್ಲಾಕ್‌ನಲ್ಲಿ ರಸ್ತೆಯನ್ನೇ ನಿರ್ಮಿಸಿಲ್ಲ
ಕೋಟ್ಯಂತರ ವ್ಯವಹಾರ ‘ತರಕಾರಿ ಸಗಟು ವ್ಯಾಪಾರಕ್ಕೆ ಅನುಕೂಲವಾಗುವಂತೆ ವ್ಯಾಪಾರಸ್ಥರು ಸೇರಿಕೊಂಡು ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದೇವೆ. 30 ಸಗಟು ವ್ಯಾಪಾರಸ್ಥರು ಹಾಗೂ 180 ಹಮಾಲರು ಕೆಲಸ ಮಾಡುತ್ತಿದ್ದಾರೆ. ಹೊರ ರಾಜ್ಯಗಳಿಂದ ತರಕಾರಿ ತರುವ ರೈತರು ಹಾಗೂ ಲಾರಿ ಚಾಲಕರಿಗೂ ಇಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ‘
ಮಹಮ್ಮದ್‌ ಇಕ್ಬಾಲ್‌, ರಾಯಚೂರು ತರಕಾರಿ ಸಗಟು ವ್ಯಾಪಾರಸ್ಥರ ಸಂಘದ ಅಧ್ಯಕ್ಷ

‘ಇಲ್ಲಿ ಬೆಳಗಿನ ಜಾವ 3 ಗಂಟೆಗೆ ವ್ಯವಹಾರ ಆರಂಭವಾಗುತ್ತದೆ. ಎಪಿಎಂಸಿ ಆಡಳಿತ ಮಂಡಳಿ ಉಪ ಪ್ರಾಂಗಣದಲ್ಲಿ ಒಳ್ಳೆಯ ರಸ್ತೆ ವಿದ್ಯುತ್‌ ಕಂಬ ಹಾಕಿ ಬೆಳಕಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ‘ ಎಂದು ಮನವಿ ಮಾಡಿಕೊಳ್ಳುತ್ತಾರೆ. ‘ಗಂಜ್‌ನಲ್ಲಿ ಪ್ರತಿ ತಿಂಗಳು ₹ 2ರಿಂದ 3 ಕೋಟಿ ವ್ಯವಹಾರ ನಡೆದರೆ ಉಪ ಪ್ರಾಂಗಣಗಳಲ್ಲಿ 30ರಿಂದ 40 ಲಕ್ಷ ವರೆಗೆ ವ್ಯಾಪಾರ ಆಗುತ್ತದೆ. ಮೂಲಸೌಕರ್ಯ ಒದಗಿಸಿದರೆ ಮಾರುಕಟ್ಟೆ ಇನ್ನೂ ವಿಸ್ತರಣೆಯಾಗಲಿದೆ. ಅಲ್ಲದೇ ಕರ್ನಾಟಕ ಆಂಧ್ರಪ್ರದೇಶ ಹಾಗೂ ತೆಲಂಗಾಣದ ರೈತರಿಗೂ ಅನುಕೂಲವಾಗಿದೆ‘ ಎಂದು ವಿವರಿಸುತ್ತಾರೆ. ಮಹಾರಾಷ್ಟ್ರದ ನಾಸಿಕ ಸಂಗಮನಿಂದ ಟೊಮೆಟೊ ಉತ್ತರಪ್ರದೇಶದ ಲಕ್ನೊದಿಂದ ಆಲೂಗಡ್ಡೆ ಸೋಲಾಪುರ ನಾಸಿಕ ಹಾಗೂ ಅಹಮ್ಮದ್‌ನಗರದಿಂದ ಈರುಳ್ಳಿ ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಬೇಸಿಗೆಯಲ್ಲಿ ಕೊತಂಬರಿ ರಾಯಚೂರು ತಾಲ್ಲೂಕು ಹಾಗೂ ನೆರೆಯ ಆಂಧ್ರದ ಗಡಿ ಗ್ರಾಮಗಳಿಂದ ಬದನೆಕಾಯಿ ಬೆಂಡೆಕಾಯಿ ಚೌಳೆಕಾಯಿ ಮೆಣಸಿನಕಾಯಿ ಬರುತ್ತದೆ. ತಿಂಗಳಿಗೆ ₹ 30ರಿಂದ ₹40 ಲಕ್ಷದ ವರೆಗೆ ವಹಿವಾಟು ನಡೆಯುತ್ತದೆ.

ವ್ಯಾಪಾರಸ್ಥರೇ ವ್ಯವಸ್ಥೆ ಮಾಡಿಕೊಂಡರು:
ಎಪಿಎಂಸಿಯ ‘ಎ’ ಹಾಗೂ ‘ಡಿ’ ಪ್ರಾಂಗಣದಲ್ಲಿ ತರಕಾರಿ ಹಾಗೂ ಹಣ್ಣು ಸಗಟು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿಯ ‘ಎ’ ಪ್ರಾಂಗಣದಲ್ಲಿ ವ್ಯಾಪಾರಸ್ಥರು ಸ್ವಂತ ಖರ್ಚು ಮಾಡಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಶೆಡ್‌ ಸಹ ಹಾಕಿಸಿಕೊಂಡಿದ್ದಾರೆ. ಇಲ್ಲಿ ಈರುಳ್ಳಿ ಬೆಳ್ಳುಳ್ಳಿ ಹಾಗೂ ಆಲೂಗಡ್ಡೆ ಸಗಟು ವ್ಯವಹಾರ ಮಾತ್ರ ನಡೆಯುತ್ತದೆ ಎಪಿಎಂಸಿ ಆಡಳಿತ ಮಂಡಳಿಯವರು ಪ್ರಾಂಗಣದಲ್ಲಿ ಸರಿಯಾಗಿ ರಸ್ತೆ ನಿರ್ಮಿಸಿಕೊಟ್ಟಿಲ್ಲ. ಘನತ್ಯಾಜ್ಯ ವಿಲೇವಾರಿಗೂ ಸರಿಯಾದ ವ್ಯವಸ್ಥೆ ಮಾಡಿಲ್ಲ. ರಾಯಚೂರಲ್ಲಿ ವ್ಯವಹಾರಕ್ಕೆ ಪೂರಕ ವಾತಾರಣ ಇದ್ದರೂ ಎಪಿಎಂಸಿ ಹಾಗೂ ಜಿಲ್ಲಾಡಳಿತ ಸರಿಯಾದ ಮೂಲಸೌಕರ್ಯ ಒದಗಿಸಿಕೊಡದ ಕಾರಣ ಮಾರುಕಟ್ಟೆ ವಿಸ್ತರಣೆ ಸಾಧ್ಯವಾಗುತ್ತಿಲ್ಲ.
ನಗರದಲ್ಲಿರುವ ಮಾರುಕಟ್ಟೆಗಳು ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಎಪಿಎಂಸಿ ಆವರಣದಲ್ಲಿರುವ ರೈತ ಬಜಾರ್ ಎಪಿಎಂಸಿ ಉಪ ಪ್ರಾಂಗಣ ಯರಗೇರಾದ ತರಕಾರಿ ಮಾರುಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.