ADVERTISEMENT

ರಾಯಚೂರು | ವ್ಯಾಪಾರಕ್ಕೆ ಅಡಚಣೆ ನೆಪ: ಮತ್ತೆ 36 ಬೃಹತ್ ಮರಗಳ ಮಾರಣಹೋಮ?

ಚಂದ್ರಕಾಂತ ಮಸಾನಿ
Published 4 ನವೆಂಬರ್ 2024, 5:58 IST
Last Updated 4 ನವೆಂಬರ್ 2024, 5:58 IST
ರಾಯಚೂರಿನ ಡ್ಯಾಡಿ ಕಾಲೊನಿಯಲ್ಲಿ ಸಮೃದ್ಧವಾಗಿ ಬೆಳೆದ ಬೃಹದಾಕಾರ ಮರಗಳು
ರಾಯಚೂರಿನ ಡ್ಯಾಡಿ ಕಾಲೊನಿಯಲ್ಲಿ ಸಮೃದ್ಧವಾಗಿ ಬೆಳೆದ ಬೃಹದಾಕಾರ ಮರಗಳು   

ರಾಯಚೂರು: ಅರಣ್ಯ ಪ್ರದೇಶವೇ ಇಲ್ಲದಿರುವ ಕಾರಣ ಹಾಗೂ ಮರಗಳ ಕೊರತೆಯಿಂದ ರಾಯಚೂರು ನಗರದಲ್ಲಿ ವರ್ಷವೀಡಿ ಧಗೆ ಮುಂದುವರಿದಿರುತ್ತದೆ. ಜನರ ಗೋಳಾಟ ನೋಡಲಾಗದೇ ಪರಿಸರ ಪ್ರೇಮಿಗಳು ಹತ್ತು ವರ್ಷಗಳಿಂದ ನಗರದಲ್ಲಿ ಗಿಡ ಮರಗಳನ್ನು ಬೆಳೆಸುತ್ತಿದ್ದಾರೆ. ಆದರೆ, ನಗರದಲ್ಲಿ ವ್ಯಾಪಾರಸ್ಥರು ವ್ಯವಹಾರಕ್ಕೆ ಅಡಚಣೆಯಾಗುತ್ತಿದೆ ಎಂದು ಮರಗಳನ್ನು ತೆರವುಗೊಳಿಸುತ್ತಿದ್ದಾರೆ.

ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳೂ ಕಣ್ಣುಮುಚ್ಚಿ ಮರಗಳನ್ನು ಕಡಿದು ಹಾಕಲು ಅನುಮತಿ ಕೊಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪರಿಸರ ಪ್ರೇಮಿ ಈರಣ್ಣ ಕೋಸಗಿ ಹತ್ತು ವರ್ಷಗಳ ಹಿಂದೆ ಸಸಿ ನೆಟ್ಟು ಬೆಳೆಸಿದ ಮರಗಳನ್ನೂ ಕಡಿದು ಹಾಕಲು ಅರಣ್ಯ ಇಲಾಖೆ ಅನುಮತಿ ಕೊಟ್ಟಿದೆ.

ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿ ಮುಂದೆ ಮರಗಳು ಇರುವ ಕಾರಣ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ತಂತಿಗಳಿಗೆ ಮರದ ಕೊಂಬೆಗಳು ತಗಲುತ್ತಿವೆ. ಹೀಗಾಗಿ ಮರದ ಕೊಂಬೆ ತೆಗೆದು ಹಾಕಲು ಅನುಮತಿ ಕೊಡಬೇಕು ಎಂದು ವ್ಯಾಪಾರಸ್ಥರು ಮನವಿ ಮಾಡಿಕೊಂಡ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ವ್ಯಾಪಾರಸ್ಥರು ಅನುಮತಿಯನ್ನೇ ಆಧಾರವಾಗಿಟ್ಟುಕೊಂಡು ಟೊಂಗೆಗಳನ್ನು ತೆಗೆಸುವ ಬದಲು ಗಿಡಗಳನ್ನೇ ಬುಡ ಸಮೇತ ಕಿತ್ತು ಹಾಕಿಸಿದ್ದಾರೆ.

ADVERTISEMENT

‘ಎಂದಿನಂತೆ ಮರಗಳ ಪೋಷಣೆಗೆ ಬಂದಾಗ ಮರಗಳನ್ನು ಕಡಿದು ಹಾಕಿರುವುದು ಅಘಾತ ಮೂಡಿಸಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಮರ ಕಡಿದು ಹಾಕಿದ ದಿನವೇ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದೆ. ಮರ ಕಡಿದವರು ಇಲಾಖೆಯ ಅನುಮತಿ ಪಡೆದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಮರಗಳನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಪ್ರಯತ್ನ ಮಾಡುತ್ತಿಲ್ಲ‘ ಎಂದು ಈರಣ್ಣ ಕೋಸಗಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಡ್ಯಾಡಿಕಾಲೊನಿಯಲ್ಲಿ ಮೂರು ತಿಂಗಳ ಹಿಂದೆ ಅನುಮತಿ ಇಲ್ಲದೆಯೇ 20 ವರ್ಷ ಹಳೆಯ ದೊಡ್ಡ ಮರಗಳನ್ನು ಕಡಿದು ಸಾಗಿಸಲಾಗಿದೆ. ಇದೀಗ ರಸ್ತೆ ನಿರ್ಮಾಣ ಮಾಡುತ್ತಿರುವ ಕಾರಣ ಹಳೆಯದಾದ 36 ಬೃಹತ್‌ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ಕೊಟ್ಟಿದೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಡ್ಯಾಡಿ ಕಾಲೊನಿಯಲ್ಲಿ ರಸ್ತೆ ನಿರ್ಮಾಣಕ್ಕೆ ಅಡಚಣೆಯಾಗಲಿವೆ ಎನ್ನುವ ಕಾರಣಕ್ಕೆ 36 ಮರಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ನಗರಸಭೆ ತೀರ್ಮಾನಿಸಿದೆ. ಪರಿಹಾರವಾಗಿ ಅರಣ್ಯ ಇಲಾಖೆಗೆ ₹ 11 ಲಕ್ಷ ಪಾವತಿಸಲಾಗಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

‘ಡ್ಯಾಡಿ ಕಾಲೊನಿಯಲ್ಲಿ ಸರತಿ ಸಾಲಿನಲ್ಲೇ ಬೆಳೆಸಲಾಗಿದೆ. ಅವುಗಳನ್ನು ತೆರವುಗೊಳಿಸುವ ಬದಲು ರಸ್ತೆ ಬದಿಗೆ ಉಳಿಸಿಕೊಳ್ಳಬೇಕು. ಮಧ್ಯದಲ್ಲಿರುವ ಮರಗಳನ್ನು ರಸ್ತೆ ವಿಭಜಕದ ಮಾದರಿಯಲ್ಲಿ ಉಳಿಸಿಕೊಂಡರೆ ಪರಿಸರ ರಕ್ಷಣೆ ಮಾಡಿದಂತೆ ಆಗಲಿದೆ. ಜಿಲ್ಲಾ ಆಡಳಿತ ಈ ದಿಸೆಯಲ್ಲಿ ಮುತವರ್ಜಿ ವಹಿಸಬೇಕು‘ ಎಂದು ಹೈದರಾಬಾದ್‌ ಕರ್ನಾಟಕ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯಕ್ಷ ಡಾ| ರಜಾಕ್‌ ಉಸ್ತಾದ್‌,  ಮನವಿ ಮಾಡಿದ್ದಾರೆ.

ರಾಯಚೂರಿನ ಡ್ಯಾಡಿ ಕಾಲೊನಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಯುಕ್ತ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.