ADVERTISEMENT

100ರಷ್ಟು ಪ್ರಗತಿ ಸಾಧಿಸಲು ಯತ್ನಿಸಿ: ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ

ಮಹತ್ವಾಕಾಂಕ್ಷೆ ಜಿಲ್ಲೆ: ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 15:28 IST
Last Updated 8 ಜುಲೈ 2024, 15:28 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದಡಿ ಆಯೀಜಿಸಿದ್ದ ಅಭಿಯಾನದಲ್ಲಿ ಗರ್ಭಿಣಿಯರ ಸೀಮಂತ ಕಾರ್ಯಕ್ರಮ ನಡೆಯಿತು
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದಡಿ ಆಯೀಜಿಸಿದ್ದ ಅಭಿಯಾನದಲ್ಲಿ ಗರ್ಭಿಣಿಯರ ಸೀಮಂತ ಕಾರ್ಯಕ್ರಮ ನಡೆಯಿತು   

ರಾಯಚೂರು: ‘ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದಡಿಯಲ್ಲಿ ವಿವಿಧ ಇಲಾಖೆಗಳ ಆಯ್ದ ಸೂಚ್ಯಂಕಗಳಲ್ಲಿ ಶೇಕಡ 100ರಷ್ಟು ಪ್ರಗತಿ ಸಾಧಿಸುವ ಮೂಲಕ ಉತ್ತಮ ಸಾಧನೆ ಮಾಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದಡಿ ಸೆಪ್ಟೆಂಬರ್ 30ರವರೆಗೆ ಮೂರು ತಿಂಗಳು ನಡೆಯುವ ಸಂಪೂರ್ಣ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನೀತಿ ಆಯೋಗವು ದೇಶದಲ್ಲಿ 112 ಜಿಲ್ಲೆಗಳು ಹಾಗೂ 500 ತಾಲ್ಲೂಕುಗಳನ್ನು ಗುರುತಿಸಿದೆ. ಅದರಲ್ಲಿ ರಾಯಚೂರು ಜಿಲ್ಲೆಯ ಸಿರವಾರ ಹಾಗೂ ಮಸ್ಕಿ ತಾಲ್ಲೂಕುಗಳು ಆಯ್ಕೆಯಾಗಿವೆ. ನೀತಿ ಆಯೋಗದ ಸೂಚ್ಯಂಕಗಳಾದ ಶಿಕ್ಷಣ, ಆರೋಗ್ಯ ಕೃಷಿ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು‘ ಎಂದು ಸೂಚಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಮಾತನಾಡಿ, ‘ಆಯೋಗವು ಆಶೋತ್ತರ ವಲಯಗಳಲ್ಲಿ ಅಭಿವೃದ್ಧಿಯ ಮಾನದಂಡಗಳನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ. ,ಈ ಯೋಜನೆಯಡಿ ಜಿಲ್ಲೆಗೆ ಜಿಲ್ಲಾ ಮಟ್ಟದಲ್ಲಿ 41 ಪ್ಯಾರಾ ಮೀಟರ್, ತಾಲ್ಲೂಕು ಮಟ್ಟದಲ್ಲಿ 40ಪ್ಯಾರಾಮೀಟರ್ ನಿಗದಿಪಡಿಸಲಾಗಿದೆ‘ ಎಂದು ವಿವರಿಸಿದರು.

ಗರ್ಭಿಣಿಯರಿಗೆ ಸೀಮಂತ: ನೀತಿ ಆಯೋಗದ ಕಾರ್ಯಕ್ರಮದಡಿ ಗರ್ಭಿಣಿರ ಸೀಮಂತ ಕಾರ್ಯಕ್ರಮ ನಡೆಯಿತು. . ಅರಿಷಿಣ, ಕುಂಕುಮ, ಹೂವು, ಹಣ್ಣು ಸೇರಿದಂತೆ ಇನ್ನಿತರ ವಸ್ತುವನ್ನು ಕೊಡಲಾಯಿತು. ಅಧಿಕಾರಿಗಳು ಗರ್ಭಿಣಿಯರಿಗೆ ತಾಯಿ ಕಾರ್ಡ್ ವಿತರಣೆ ಮಾಡಿದರು.

ಪಠ್ಯಪುಸ್ತಕ ವಿತರಣೆ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 2024–25ನೇ ಶೈಕ್ಷಣಿಕ ವರ್ಷದ 6ರಿಂದ 10 ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನು ವಿತರಣೆ ಮಾಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸೇರಿದಂತೆ ಇತರೆ ಇಲಾಖೆಗಳು ತಮ್ಮ-ತಮ್ಮ ಇಲಾಖೆಯಡಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು.

ಇದೇ ವೇಳೆ ವಿವಿಧ ಕರಕುಶಲ ವಸ್ತುಗಳು ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದ ನೋಡಲ್ ಅಧಿಕಾರಿ ಆಪ್ತ ಸಿಂಗ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರ ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕಾಳಪ್ಪ ಬಡಿಗೇರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್., ಸಿಡಾಕ್ ಜಂಟಿ ನಿರ್ದೇಶಕ ಜಿ.ಯು. ಹುಡೇದ ಹಾಜರಿದ್ದರು.

ಸ್ವ-ಸಹಾಯ ಗುಂಪಿನ ಮಹಿಳೆಯರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಮಹಮ್ಮದ್ ಯೂಸುಫ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.