ADVERTISEMENT

ತುರ್ವಿಹಾಳ ಪಟ್ಟಣ ಪಂಚಾಯಿತಿ: ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ, ಮನವೊಲಿಕೆ ಕಸರತ್ತು

ತುರ್ವಿಹಾಳ ಪ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ

ಮಲ್ಲೇಶ ಬಡಿಗೇರ
Published 13 ಆಗಸ್ಟ್ 2024, 6:04 IST
Last Updated 13 ಆಗಸ್ಟ್ 2024, 6:04 IST
ತುರ್ವಿಹಾಳ ಪಟ್ಟಣ ಪಂಚಾಯಿತಿ
ತುರ್ವಿಹಾಳ ಪಟ್ಟಣ ಪಂಚಾಯಿತಿ   

ತುರ್ವಿಹಾಳ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.

ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ರಾಜಕೀಯ ನಾಯಕರ ಮನವೊಲಿಕೆ ಕಸರತ್ತು ನಡೆಸುತ್ತಿದ್ದಾರೆ.

ಪಟ್ಟಣ ಪಂಚಾಯಿತಿ ಶ್ರೀನಿವಾಸ ಕ್ಯಾಂಪ್, ಗುಂಜಳ್ಳಿ ಕ್ಯಾಂಪ್, ರಾಘವೇಂದ್ರ ಕ್ಯಾಂಪ್, ಬಸಣ್ಣ ಕ್ಯಾಂಪ್ ಅನ್ನು ಒಳಗೊಂಡಿದೆ. ಒಟ್ಟು 14 ವಾರ್ಡ್‌ಗಳನ್ನು ಹೊಂದಿದೆ. ಕಾಂಗ್ರೆಸ್-9, ಬಿಜೆಪಿ-2 ಹಾಗೂ ಮೂವರು ಪಕ್ಷೇತರರು ಗೆದ್ದಿದ್ದರು. ಮೂವರು ಪಕ್ಷೇತರ ಸದಸ್ಯರು ಹಾಗೂ ಒಬ್ಬ ಬಿಜೆಪಿ ಸದಸ್ಯ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಆದ್ದರಿಂದ ಕಾಂಗ್ರೆಸ್ ಸದಸ್ಯರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರ ಸ್ವಗ್ರಾಮದ ಪಟ್ಟಣ ಪಂಚಾಯಿತಿ ಇದಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಮೂವರ ಹೆಸರು ಮುಂಚೂಣಿಯಲ್ಲಿದೆ. ಶಾಸಕರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಭಾವಿ ಕಾಂಗ್ರೆಸ್ ಮುಖಂಡ ಮಲ್ಲನಗೌಡ ದೇವರಮನಿ ಅವರ ಮಗ, 14ನೇ ವಾರ್ಡ್‌ನ ಸದಸ್ಯ ಬಾಪುಗೌಡ ದೇವರಮನಿ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಗೆದ್ದು ನಂತರ ಕಾಂಗ್ರೆಸ್ ಸೇರಿರುವ 7ನೇ ವಾರ್ಡ್‌ನ ಸದಸ್ಯ ಶರಣಪ್ಪ ಹೊಸಗೌಡ್ರು ಅವರೂ ಅಧ್ಯಕ್ಷರಾಗುವ ಹಂಬಲ ಹೊಂದಿದ್ದಾರೆ. ಒಂದು ಅವಕಾಶ ನೀಡುವಂತೆ ಶಾಸಕರಿಗೂ ಮತ್ತು ಮುಖಂಡ ಮಲ್ಲನಗೌಡ ದೇವರಮನಿ ಅವರಿಗೂ ಮೌಖಿಕವಾಗಿ ಬೇಡಿಕೆ ಸಲ್ಲಿಸಿದ್ದಾರೆ.

ತುರ್ವಿಹಾಳ ಪಟ್ಟಣದ ಕಾಂಗ್ರೆಸ್ ಮುಖಂಡರ ಜತೆ ಉತ್ತಮ ಭಾಂದವ್ಯ ಹೊಂದಿರುವ ಕೆ.ಶ್ಯಾಮೀದ್ ಸಾಬ್ ಚೌದ್ರಿ ಅವರು 3ನೇ ವಾರ್ಡ್‌ನಿಂದ ಗೆಲುವು ಸಾಧಿಸುವ ಮೂಲಕ ಹಿರಿಯ ಸದಸ್ಯರಾಗಿದ್ದಾರೆ. ಹಿರಿಯ ಸದಸ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯದ ಕೋಟಾದಲ್ಲಿ ಅಧ್ಯಕ್ಷರಾಗುವ ಅವಕಾಶ ಪಡೆಯಲು ಹಿರಿಯರ ಅನುಗ್ರಹಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಉಪಾಧ್ಯಕ್ಷ ಸ್ಥಾನ ಎಸ್‌.ಸಿ ಮಹಿಳೆಗೆ ಮೀಸಲಾಗಿದೆ. ಗಂಗಮ್ಮ ಭೋವಿ ಅವರು ಕಾಂಗ್ರೆಸ್ ಪಕ್ಷದಿಂದ ಗೆದ್ದ ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಸದಸ್ಯೆಯಾಗಿದ್ದಾರೆ. ಅವರು ಪ್ರಬರ ಆಕಾಂಕ್ಷಿಯಾಗಿದ್ದಾರೆ. ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸೇರಿದ ಲಕ್ಷ್ಮೀ ಮಾಟೂರು ಅವರು ಆಕಾಂಕ್ಷಿಗಳಾಗಿದ್ದಾರೆ.

ಗುಟ್ಟು ಬಿಡದ ಮುಖಂಡರು: ಮುಖಂಡ ಮಲ್ಲನಗೌಡ ದೇವರಮನಿ ಹಾಗೂ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಯಾರಿಗೆ ಮಣೆ ಹಾಕುವರೋ ಅವರೇ ಮುಂದಿನ ಅಧ್ಯಕ್ಷರಾಗುತ್ತಾರೆ. ಇದು ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.