ಶಕ್ತಿನಗರ: ನರೇಗಾ ಯೋಜನೆಯಡಿ ಬೂದು ಮುಕ್ತ ಗ್ರಾಮ ಯೋಜನೆಗೆ ರಾಯಚೂರು ತಾಲ್ಲೂಕಿನ ಎರಡು ಗ್ರಾಮಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಕೆಲಸ ಆರಂಭಿಸಲಾಗಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ರಾಜ್ಯದ ಗ್ರಾಮೀಣಾ ಪ್ರದೇಶದಲ್ಲಿ ಮಣ್ಣು ಮತ್ತು ಅಂತರ್ಜಲ ಮಾಲಿನ್ಯ ತಡೆಗಟ್ಟಲು ಪ್ರಥಮ ಹಂತದಲ್ಲಿ ರಾಯಚೂರು ತಾಲ್ಲೂಕಿನ ಚಂದ್ರಬಂಡ ಗ್ರಾಮ ಪಂಚಾಯಿತಿಯ ಕಟ್ಲೇಟ್ಕೂರು ಗ್ರಾಮ ಮತ್ತು ಪೂರತಿಪ್ಲಿ ಗ್ರಾಮ ಪಂಚಾಯತಿಯ ಆಲ್ಕೂರು ಗ್ರಾಮವನ್ನು ಗುರುತಿಸಿ ಕೆಲಸ ಮಾಡಲಾಗುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಪಾತ್ರೆ ತೊಳೆದ, ಬಟ್ಟೆ ತೊಳೆದ ಮತ್ತು ಸ್ನಾನ ಮಾಡಿದ ನೀರನ್ನು ಬೂದು ನೀರೆಂದು ಕರೆಯುತ್ತಾರೆ. ಈ ನೀರು ಹಾನಿಕಾರಕ ಬ್ಯಾಕ್ಟೀರಿಯಾ ಹೊಂದಿದ್ದು, ಇದನ್ನು ಕೆರೆ, ಕುಂಟೆ ಮತ್ತು ಅಂತರ್ಜಲಕ್ಕೆ ಬಿಡುವುದರಿಂದ ಮಣ್ಣು ಮತ್ತು ಅಂತರ್ಜಲ ಕಲುಷಿತವಾಗುತ್ತಿದೆ. ಇದುವರೆಗೂ ಬೂದು ನೀರು ನಿರ್ವಹಣೆ ಮತ್ತು ಬಳಕೆಗೆ ಕೇಂದ್ರಿಕೃತ ನೀತಿ ಚೌಕಟ್ಟು ಹೊಂದಿಲ್ಲ. ಈ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ರಾಜ್ಯದ ಗ್ರಾಮೀಣಾ ಪ್ರದೇಶದಲ್ಲಿ ಬೂದು ನೀರು ನಿರ್ವಹಣಾ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ.
ಕಟ್ಲಟ್ಕೂರು ಗ್ರಾಮದಲ್ಲಿ 2672 ಜನಸಂಖ್ಯೆಯ 509 ಮನೆಗಳಿದ್ದು ಹಾಗೂ ಪೂರತಿಪ್ಲಿ ಗ್ರಾಮ ಪಂಚಾಯತಿಯ ಅಲ್ಕೂರು ಗ್ರಾಮದಲ್ಲಿ 1428 ಜನಸಂಖ್ಯೆಯ 642 ಮನೆಗಳಿವೆ. ಈ ಎರಡು ಗ್ರಾಮಗಳಲ್ಲಿ ಕನಿಷ್ಠ 60 ರಿಂದ 70 ಪ್ರತಿಶತ ತ್ಯಾಜ್ಯ ನೀರು ಒಂದೇ ಕಡೆಗೆ ಹರಿದು ಬರುತ್ತಿದೆ. ಇದನ್ನು ತಡೆಯಲು ಸಿಸಿ ಚರಂಡಿ, ಸೆಪ್ಟಿಕ್ ಟ್ಯಾಂಕ್, ಬಚ್ಚಲು ಇಂಗುಗುಂಡಿ ಮತ್ತು ಸಮುದಾಯ ಇಂಗುಗುಂಡಿ ರಚನೆಗೆ ಯೋಜನೆ ಸಿದ್ಧಪಡಿಸಲಾಗಿದೆ. ಇಲ್ಲದೇ ಚರಂಡಿ ವ್ಯವಸ್ಥೆ ಇಲ್ಲದಿರುವ ಕಡೆ ವ್ಯಯಕ್ತಿಕ ಬಚ್ಚಲು ಇಂಗುಗುಂಡಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಕಟ್ಲೇಟ್ಕೂರು ಗ್ರಾಮದಲ್ಲಿ 200 ಇಂಗುಗುಂಡಿ ಹಾಗೂ ಆಲ್ಕೂರು ಗ್ರಾಮದಲ್ಲಿ 30 ಇಂಗುಗುಂಡಿ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.
ಬೂದು ನೀರು ನಿರ್ವಹಣೆ ಯೋಜನೆಯು ವಿಭಿನ್ನಾವಾಗಿದ್ದು ಅನುಷ್ಠಾನ ಪ್ರಕ್ರಿಯೆ ನಡೆಯುತ್ತಿದೆ. ಈ ಎರಡು ಗ್ರಾಮಗಳಲ್ಲಿ ಇಂಗುಗುಡಿ ನಿರ್ಮಿಸಿಕೊಳ್ಳಲು ಮನೆ ಮನೆಗೆ ಮಾಹಿತಿ ಒದಗಿಸಿ ಹಾಗೂ ಬೂದು ನೀರು ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದುಚಂದ್ರಶೇಖರ ಪವಾರ್ ತಾ.ಪಂ ಇಒ
ಮೇಲಾಧಿಕಾರಿಗಳ ನಿರ್ದೇಶನದಂತೆ ನರೇಗಾ ಯೋಜನೆಯಡಿ ಸರ್ಕಾರದ ಹೊಸ ಯೋಜನೆ ಅನುಷ್ಠಾನ ಮಾಡಲು ಎಲ್ಲಾ ಸಿದ್ದತೆ ಮಾಡಲಾಗುತ್ತಿದೆಎಡಿ ಹನುಮಂತ ನರೇಗಾ ತಾ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.