ಚಂದ್ರಕಾಂತ ಮಸಾನಿ/ ಬಾವಸಲಿ
ರಾಯಚೂರು: ಕೃಷಿ ಉತ್ಪನ್ನ ಹಾಗೂ ಮಾರುಕಟ್ಟೆಯಿಂದಾಗಿ ದೇಶದ ಗಮನ ಸೆಳೆದಿರುವ ರಾಯಚೂರು ಜಿಲ್ಲೆ ಅದಕ್ಕೆ ಪೂರಕವಾದ ಅಂಶಗಳಿಗೆ ಒತ್ತುಕೊಡದ ಕಾರಣ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಆರ್ಥಿಕತೆ ಮತ್ತು ವ್ಯಾಪಾರದ ಹಿತದೃಷ್ಟಿಯಿಂದ ಹಾಗೂ ಜಿಲ್ಲೆಯಲ್ಲಿ ದಟ್ಟಣೆ ಕಡಿಮೆ ಮಾಡಲು ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಬೇಕು ಎನ್ನುವ ಲಾರಿ ಚಾಲಕರ, ಮಾಲೀಕರ ಹಾಗೂ ವರ್ತಕರ ಬೇಡಿಕೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ಸ್ಪಂದಿಸುತ್ತಿಲ್ಲ.
ರಾಯಚೂರಿನಲ್ಲಿ ಗೂಡ್ಸ್ ಹಾಗೂ ಇತರೆ ಭಾರಿ ಗಾತ್ರದ ವಾಹನಗಳ ನಿಲುಗಡೆಗೆ ಪ್ರತ್ಯೇಕವಾದ ಟ್ರಕ್ ಟರ್ಮಿನಲ್ ಇರದ ಕಾರಣ ಸಾರ್ವಜನಿಕ ಪ್ರದೇಶ ಹಾಗೂ ರಸ್ತೆ ಬದಿಗಳಲ್ಲಿ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಟ್ರಕ್ ಟರ್ಮಿನಲ್‌ಗಳು ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ವ್ಯಾಪ್ತಿಗೆ ಬರುತ್ತವೆ. ಟರ್ಮಿನಲ್‌ಗಳಿಗೆ ಜಿಲ್ಲಾ ಕೇಂದ್ರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳೇ ಅದಕ್ಕೆ ಮೇಲುಸ್ತುವಾರಿಯಾಗಿರುತ್ತಾರೆ. ಇಲ್ಲಿ ಬೇಡಿಕೆ ಇದ್ದರೂ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳಿಸಿರುವ ಮಾಹಿತಿಯೇ ಇಲ್ಲಿಯ ಅಧಿಕಾರಿಗಳಿಗಿಲ್ಲ.
ಏಕೆ ಬೇಕು ಟ್ರಕ್ ಟರ್ಮಿನಲ್?
ಆಂಧ್ರಪ್ರದೇಶ ಹಾಗೂ ತೆಲಂಗಾಣದ ನಗರಗಳಿಗೆ ರಾಯಚೂರು ಸಂಪರ್ಕ ಕೇಂದ್ರವಾಗಿದೆ. ಜಿಲ್ಲೆಗೆ ನಿತ್ಯ ಸಾವಿರಾರು ಲಾರಿಗಳು ಬಂದು ಹೋಗುತ್ತವೆ. ಲಾರಿಗಳ ನಿಲುಗಡೆಗೆ ಸದ್ಯಕ್ಕೆ ಯಾವುದೇ ವ್ಯವಸ್ಥೆಯಿಲ್ಲ.
ರಾಯಚೂರು ನಗರದಿಂದ ಭತ್ತ, ಹತ್ತಿ ಸೇರಿದಂತೆ ಅನೇಕ ಕೃಷಿ ಉತ್ಪನ್ನ ಹಾಗೂ ಕೈಗಾರಿಕಾ ಸರಕುಗಳನ್ನು ಸಾಗಿಸುವ ಲಾರಿಗಳು ಮತ್ತು ಹೊರಗಿನಿಂದ ಬರುವ ಲಾರಿಗಳು ತಂಗುವುದಕ್ಕೆ ಜಿಲ್ಲಾ ಕೇಂದ್ರದಲ್ಲಿ ಸರಿಯಾದ ಜಾಗವಿಲ್ಲ.
ನಗರದ ವೀರಶೈವ ಕಲ್ಯಾಣ ಮಂಟಪ, ಮನ್ಸಲಾಪುರ ರಸ್ತೆ, ಎಪಿಎಂಸಿ ರಸ್ತೆ ಹಾಗೂ ವಿವಿಧ ಬಡಾವಣೆ ರಸ್ತೆಗಳು ಮತ್ತು ಮುಖ್ಯರಸ್ತೆಗಳ ಬದಿಯಲ್ಲಿ ಲಾರಿಗಳು ನಿಲುಗಡೆಯಾಗುತ್ತವೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೂ ತೊಡಕಾಗಿದೆ.
ನಗರದಲ್ಲಿ 200ಕ್ಕೂ ಅಧಿಕ ಹತ್ತಿ ಜಿನ್ನಿಂಗ್ ಮಿಲ್‌ಗಳು, ರೈಸ್ ಮಿಲ್‌ಗಳು ಇವೆ. ಪಡಿತರ ಸಾಗಣೆ, ಹಾರುಬೂದಿ ಸಾಗಣೆಯ ನೂರಾರು ಲಾರಿಗಳು ನಗರದಲ್ಲಿ ನಿಲುಗಡೆಯಾಗುತ್ತಿವೆ. ಜಡಚರ್ಲಾ–ಹಗರಿ ರಾಷ್ಟ್ರೀಯ ಹೆದ್ದಾರಿ ಹಾಗೂ ಎರಡು ರಾಜ್ಯ ಹೆದ್ದಾರಿಗಳುದ್ದಕ್ಕೂ ಲಾರಿಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ರಸ್ತೆ ಅಪಘಾತಗಳೂ ಆಗಾಗ ಸಂಭವಿಸುತ್ತವೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ವಿಶಾಲವಾದ ಜಾಗದಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸಿದರೆ, ಲಾರಿಗಳ ಚಾಲಕರು ಮತ್ತು ಸಹಾಯಕರು ಲಾರಿಗಳೊಂದಿಗೆ ತಂಗಬಹುದು.
‘ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಲಾರಿ ಸೇರಿದಂತೆ ಅನೇಕ ಸರಕು ಸಾಗಣೆ ವಾಹನಗಳು ಇವೆ. ಟ್ರಕ್ ಟರ್ಮಿನಲ್ ಸಮಿತಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸದಸ್ಯರು ಮಾತ್ರ ಆಗಿರುತ್ತಾರೆ. ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮ ಈ ವಿಷಯದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ’ ಎಂದು ಟ್ರಕ್ ಟರ್ಮಿನಲ್‌ನ ಜಿಲ್ಲಾ ಮಟ್ಟದ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ ಕಾಟೋಕರ್ ಹೇಳುತ್ತಾರೆ.
ರಾಜಕಾರಣಿಗಳಿಂದ ದೊರೆತಿದ್ದು ಕೇವಲ ಭರವಸೆ
ರಾಯಚೂರಿನಲ್ಲಿ ಟ್ರಕ್ ಟರ್ಮಿನಲ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಲಾರಿ ಮಾಲೀಕರ ಸಂಘವು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್.ಬೋಸರಾಜು, ನಗರ ಶಾಸಕ ಡಾ. ಶಿವರಾಜ ಪಾಟೀಲ ಹಾಗೂ ಬಿಜೆಪಿ, ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಹುತೇಕ ಸಚಿವರಿಗೆ ಮನವಿ ಕೊಟ್ಟು ಒತ್ತಾಯಿಸಲಾಗಿದೆ. ಆದರೆ ಯೋಜನೆ ಅನುಷ್ಠಾನಕ್ಕೆ ಯಾವ ಸರ್ಕಾರವೂ ಮನಸ್ಸು ಮಾಡಿಲ್ಲ ಎನ್ನವುದು ಲಾರಿ ಮಾಲೀಕರ ಅಳಲು.
‘ರಾಯಚೂರಿನ ಯರಮರಸ್ ಕ್ಯಾಂಪ್ ಅಥವಾ ಹೊಸ ಹತ್ತಿ ಮಾರುಕಟ್ಟೆ ಬಳಿ ಜಾಗ ಗುರುತಿಸಬೇಕು. ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ನಗರದ ಸರ್ವೆ ನಂಬರ್ 83 ಮತ್ತು 93ರ 15 ಎಕರೆ ಜಮೀನು ಮಂಜೂರು ಮಾಡಬೇಕು. ಇದರಿಂದ ಲಾರಿ ಮಾಲೀಕರಿಗೆ ಅನುಕೂಲವಾಗುತ್ತದೆ. ವಾಹನ ಸಂಚಾರಕ್ಕೆ ಆಗುತ್ತಿರುವ ಕಿರಿಕಿರಿ ತಪ್ಪುತ್ತದೆ’ ಎನ್ನುವುದು ಲಾರಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಹಸನ್ ಅವರ ಒತ್ತಾಯ
‘ಟ್ರಕ್ ಟರ್ಮಿನಲ್ ಇಲ್ಲದ ಕಾರಣ ಲಾರಿಗಳನ್ನು ರಸ್ತೆ ಬದಿ ನಿಲ್ಲಿಸುವುದು ಅನಿವಾರ್ಯವಾಗಿದೆ. ವಾಹನ ಸಂಚಾರಕ್ಕೆ ಹಾಗೂ ಲಾರಿ ಮಾಲೀಕರಿಗೂ ಸಮಸ್ಯೆಯಾಗುತ್ತಿದೆ. ಅನೇಕ ಸಂದರ್ಭದಲ್ಲಿ ಪೊಲೀಸರ ಕೆಂಗಣ್ಣಿಗೂ ಗುರಿಯಾಗಬೇಕಾಗಿದೆ. ಟ್ರಕ್ ಟರ್ಮಿನಲ್ ಸ್ಥಾಪಿಸಿದರೆ ವಾಣಿಜ್ಯ ವಹಿವಾಟು ಸುಗಮವಾಗಿ ನಡೆಸುವುದಕ್ಕೆ ಅನುಕೂಲವಾಗುತ್ತದೆ’ ಎಂದು ಲಾರಿ ಮಾಲೀಕ ಸೈಯದ್ ಶರೀಫ್ ಹೇಳುತ್ತಾರೆ.
ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿಮಿಟೆಡ್‌ನ ಅಧ್ಯಕ್ಷ ಡಿ.ಎಸ್.ವೀರಯ್ಯ ಅವರು 2021ರ ಮಾರ್ಚ್ 8ರಂದು ಕಲಬುರಗಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ‘ನಗರಗಳಲ್ಲಿನ ಸಂಚಾರ ಒತ್ತಡ ಕಡಿಮೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ಎಲ್ಲ ಮೂಲಸೌಕರ್ಯಗಳೊಂದಿಗೆ ಟ್ರಕ್ ಟರ್ಮಿನಲ್‌ಗಳನ್ನು ನಿರ್ಮಿಸಲಾಗುವುದು. ಕಂಪನಿಯ ಆರ್ಥಿಕ ಸ್ಥಿತಿ ಪರಿಗಣಿಸಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಟ್ರಕ್ ಟರ್ಮಿನಲ್ ಕಟ್ಟಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು: ಎಂದು ಹೇಳಿದ್ದರು. ಆದರೆ, ಯೋಜನೆ ಕಾರ್ಯಗತಗೊಳ್ಳಲೇ ಇಲ್ಲ.
ಟರ್ಮಿನಲ್‌ನಿಂದ ವರ್ತಕರಿಗೂ ಅನುಕೂಲ
ನಗರದಲ್ಲಿ ಅನೇಕ ವರ್ಷಗಳಿಂದ ಟ್ರಕ್ ಟರ್ಮಿನಲ್ ನಿರ್ಮಾಣದ ಬೇಡಿಕೆ ಇದೆ. ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ ಈಚೆಗೆ ಸಚಿವ ಎನ್.ಎಸ್.ಬೋಸರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಲಾಗಿದೆ ಎಂದು ರಾಯಚೂರು ಜಿಲ್ಲಾ ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಲಕ್ಷ್ಮಿರೆಡ್ಡಿ ಹೇಳುತ್ತಾರೆ.
ನೆರೆಯ ಆಂದ್ರಪ್ರದೇಶ ತೆಲಂಗಾಣದ ರೈತರು ವರ್ತಕರು ಇಲ್ಲಿ ಭತ್ತ ಮಾರಾಟಕ್ಕೆ ತರುತ್ತಾರೆ. ಕಳೆದ ಬಾರಿ ಎಪಿಎಂಸಿಯಲ್ಲಿ 60 ಸಾವಿರ ಚೀಲಕ್ಕೆ ಜಾಗದ ಕೊರತೆಯಾಗಿ ಸಮಸ್ಯೆಯಾಗಿತ್ತು. ವಿಶಾಲವಾದ ಟ್ರಕ್ ಟರ್ಮಿನಲ್ ಮಾಡಿದರೆ ಅಲ್ಲಿಯೇ ತುರ್ತು ಸಂದರ್ಭದಲ್ಲಿ ವ್ಯಾಪಾರ ಮಾಡಿಕೊಳ್ಳಬಹುದು. ವರ್ತಕರಿಗೆ ರೈತರಿಗೂ ಅನುಕೂಲ ಹಾಗೂ ಟ್ರಾಫಿಕ್ ಸಮಸ್ಯೆಯೂ ಇರುವುದಿಲ್ಲ.
‘ನಗರದಲ್ಲಿ ಜಾಗದ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿರುವ ಮಾಹಿತಿ ಇದೆ. ಜಿಲ್ಲಾಡಳಿತ ಸೂಕ್ತ ಕಡೆ ಜಾಗ ಗುರುತಿಸಿ ಸ್ವಾಧೀನ ಪಡಿಸಿಕೊಂಡು ಸಮಸ್ಯೆಗೆ ಮುಕ್ತಿ ಹಾಡಬೇಕು’ ಎಂದು ಲಕ್ಷ್ಮಿರೆಡ್ಡಿ ಮನವಿ ಮಾಡುತ್ತಾರೆ. ‘ಟ್ರಕ್ ಟರ್ಮಿನಲ್ ನಿರ್ಮಾಣ ಸಂಬಂಧ ಈಗಾಗಲೇ ಸಭೆ ನಡೆಸಲಾಗಿದೆ. ನಗರದಲ್ಲಿ ಎರಡು ಕಡೆ ಟರ್ಮಿನಲ್‌ಗೆ 10 ಎಕರೆ ಜಾಗವನ್ನೂ ಗುರುತಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆದರೆ ಜಿಲ್ಲಾಡಳಿತ ತನ್ನ ಪ್ರಕ್ರಿಯೆ ಆರಂಭಿಸಲಿದೆ’ ಎಂದು ಟ್ರಕ್ ಟರ್ಮಿನಲ್‌ನ ಜಿಲ್ಲಾ ಮಟ್ಟದ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳುತ್ತಾರೆ.
ಲಾರಿಗಳ ದುರಸ್ತಿ ನಿರ್ವಹಣೆ
ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಟ್ರಕ್ಕಿಂಗ್ ಕಂಪನಿಗಳಿಗೆ ಟರ್ಮಿನಲ್‌ಗಳಾಗಿ ಇಲ್ಲಿಯ ಟ್ರಕ್ ಟರ್ಮಿನಲ್ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಟ್ರಾನ್ಸ್‌ಪೋರ್ಟ್ ಕಂಪನಿಗಳು ಕಡ್ಡಾಯ ದಾಖಲೆಗಳನ್ನು ನಿರ್ವಹಿಸಬಹುದು ಮತ್ತು ಅವರ ಟ್ರ್ಯಾಕಿಂಗ್ ಉಪಕರಣಗಳನ್ನು ಇರಿಸಲು ಅವಕಾಶ ಇರುತ್ತದೆ. ಚಾಲಕರಿಗೆ ವಿಶ್ರಾಂತಿ ಪಡೆಯಲು ತಾತ್ಕಾಲಿಕವಾಗಿ ಸರಕುಗಳನ್ನು ಸಂಗ್ರಹಿಸಲು ಕಾರ್ಯಾಚರಣೆ ರೂಪಿಸಲು ಹಾಗೂ ವಾಹನಗಳ ಅಗತ್ಯ ನಿರ್ವಹಣೆ ದುರಸ್ತಿ ಕಾರ್ಯ ಮಾಡಿಕೊಳ್ಳಲು ಅನುಕೂಲವಾಗಲಿದೆ.
ಲಾರಿ ಹಾಗೂ ಟ್ರಕ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಹತ್ವದ್ದಾಗಿದೆ. ಲಾರಿಗಳಿಗೆ ಅಂಟಿದ ರಸ್ತೆಯ ಮಣ್ಣು ತೈಲ ಪದರಗಳು ಮತ್ತು ಅವಶೇಷಗಳನ್ನು ತೆಗೆದುಹಾಕಲು ತೊಳೆಯುವ ಸೌಲಭ್ಯ ದೊರಕಲಿದೆ. ಟ್ರಕ್ ಟರ್ಮಿನಲ್‌ಗಳು ಭದ್ರತಾ ಫೆನ್ಸಿಂಗ್ ಕಣ್ಗಾವಲು ಕ್ಯಾಮೆರಾಗಳು ಮತ್ತು ಕಳ್ಳತನ ವಿದ್ವಂಸಕ ಮತ್ತು ಇತರ ಅನಪೇಕ್ಷಿತ ಘಟನೆಗಳನ್ನು ತಡೆಯಲು ಗಾರ್ಡ್‌ಗಳನ್ನು ಹೊಂದಿರುತ್ತವೆ. ಇಲ್ಲಿ ಲಾರಿಗಳನ್ನು ನಿಲುಗಡೆ ಮಾಡುವುದು ಸಹ ಹೆಚ್ಚು ಸುರಕ್ಷಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.