ರಾಯಚೂರು: ನಗರದ ಹೊರವಲಯದ ಹತ್ತಿ ಮಾರುಕಟ್ಟೆ ಬಳಿಯ ಕೃಷ್ಣ ಮೇಲ್ದಂಡೆ ಯೋಜನೆ ದೇವದುರ್ಗ ನಿಯಮಿತ ಯೋಜನೆಯ ಚಿಕ್ಕಹೊನ್ನಕುಣಿ ವಿಭಾಗೀಯ ಕಚೇರಿಯಲ್ಲಿ ಮೂಲಸೌಕರ್ಯದ ಕೊರತೆ ಹಾಗೂ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬಾರದ ಕಾರಣ ಭೂಸ್ವಾಧೀನಕ್ಕೆ ಸಂಬಂಧಿಸಿದ ದೂರುಗಳನ್ನು ಕೊಡಲು ಬರುವ ಸಂತ್ರಸ್ತರು ತೊಂದರೆ ಅನುಭವಿಸಬೇಕಾಗಿದೆ.
ದೇವದುರ್ಗ ತಾಲ್ಲೂಕಿನ ಚಿಕ್ಕಹೊನ್ನಕುಣಿ ಕ್ಯಾಂಪ್‌ನಲ್ಲಿ ಇದ್ದ ಈ ಕಚೇರಿಯನ್ನು ಕಳೆದ ವರ್ಷ ರಾಯಚೂರಿನ ಹತ್ತಿ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ, ಅನೇಕರು ಸ್ಥಳಾಂತರಗೊಂಡ ಕಚೇರಿಯ ಮಾಹಿತಿ ಸಿಗದೇ ದೇವದುರ್ಗದಲ್ಲಿದ್ದ ಹಳೆ ಕಚೇರಿಗೆ ಹೋಗಿ ಪರದಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮತ್ತೆ ರಾಯಚೂರಿಗೆ ಬರುತ್ತಿದ್ದಾರೆ. ಆದರೆ, ಹೊಸ ಹತ್ತಿ ಮಾರುಕಟ್ಟೆಗೆ ಚಿಕ್ಕದಾದ ಕಟ್ಟಡದಲ್ಲಿ ಕಚೇರಿ ಇದೆ. ಸಾರ್ವಜನಿಕರಿಗೆ ಕುಡಿಯುವ ನೀರು, ಕೂರಲು ಆಸನಗಳಿಲ್ಲ. ಕಳೆದ 1 ತಿಂಗಳಿಂದ ಕಚೇರಿಯಲ್ಲಿ ವಿದ್ಯುತ್ ಇಲ್ಲದ ಕಾರಣ ಫ್ಯಾನ್, ಲೈಟ್ ಯಾವುದೂ ಇಲ್ಲ. ಕಚೇರಿ ದುಸ್ಥಿತಿಯ ಬಗ್ಗೆ ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ.
ವಿಳಾಸವಿಲ್ಲದ ಕಚೇರಿ: ರಾಯಚೂರಿನಲ್ಲಿರುವ ಕಚೇರಿಗೆ ನಾಮಫಲಕ ಹಾಕಿಲ್ಲ. ಇದರಿಂದ ಕಚೇರಿಗೆ ಬರುವವರ ಸಮಯ ಹಾಗೂ ಹಣ ವ್ಯರ್ಥವಾಗುತ್ತಿದೆ. ದೇವದುರ್ಗ, ಲಿಂಗಸುಗೂರು, ಮಾನ್ವಿ, ಸಿರವಾರ ಸುತ್ತಮುತ್ತಲಿನ ಗ್ರಾಮಸ್ಥರು ಕಚೇರಿ ಹುಡುಕಿಕೊಂಡು ಬಂದರೂ ಅಧಿಕಾರಿಗಳು ಸಿಗುತ್ತಿಲ್ಲ. ಹೀಗಾಗಿ ಸಂತ್ರಸ್ತರು ಮತ್ತಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕಾಯಂ ಸಿಬ್ಬಂದಿಯಿಲ್ಲ: ಕೃಷ್ಣ ಮೇಲ್ದಂಡೆ ಯೋಜನೆ ಚಿಕ್ಕಹೊನ್ನಕುಣಿ ವಿಭಾಗೀಯ ಕಚೇರಿಗೆ ಗ್ರೇಡ್–2 ತಹಶೀಲ್ದಾರ್, 4 ಭೂಮಾಪಕರು, ಇಬ್ಬರು ದ್ವಿತೀಯ ದರ್ಜೆ ಸಹಾಯಕರು, ಒಬ್ಬರು ಶಿರಸ್ತೇದಾರ್, 1 ಕಂಪ್ಯೂಟರ್ ಆಪರೇಟರ್ ಸೇರಿ ಒಟ್ಟು 13 ಜನ ಸಿಬ್ಬಂದಿ ಇದ್ದಾರೆ. ಕಂಪ್ಯೂಟರ್ ಆಪರೇಟರ್, ದ್ವಿತೀಯ ದರ್ಜೆ ಸಹಾಯಕ ಹಾಗೂ ಪ್ರಥಮ ದರ್ಜೆ ಸಹಾಯಕ ಸೇರಿ 4 ಜನ ಮಾತ್ರ ಕಚೇರಿಯಲ್ಲಿ ಇದ್ದಾರೆ. ಹಿರಿಯ ಅಧಿಕಾರಿಗಳು, ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಯಲ್ಲಿ ಲಭ್ಯವಿರುವುದಿಲ್ಲ. ಇಲ್ಲಿನ ಬಹುತೇಕ ಸಿಬ್ಬಂದಿಗೆ ಯಾದಗಿರಿಯ ಶಾಹಪುರದ ಕೃಷ್ಣ ಮೇಲ್ದಂಡೆ ಯೋಜನೆ ಭೀಮರಾಯನಗುಡಿ (ಭೀ.ಗುಡಿ) ಕಚೇರಿಗೆ ನಿಯೋಜನೆ ಮಾಡಿದ್ದು ವಾರದಲ್ಲಿ ಮೂರು ದಿನ ಮಾತ್ರ ಬಂದು ಹೋಗುತ್ತಾರೆ. ಅವರು ಯಾದಗಿರಿಯಿಂದ ಬರುವಷ್ಟರಲ್ಲೇ ಅರ್ಧ ಸಮಯ ಕಳೆದಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಸರಿಯಾದ ಸೇವೆ ದೊರೆಯುತ್ತಿಲ್ಲ.
ಭೂಸ್ವಾಧೀನ ಇಲ್ಲದೇ ಅವಾರ್ಡ್: ದೇವದುರ್ಗದ ಕೋತಿಗುಡ್ಡ ಸೀಮಾಂತರದ ಸರ್ವೆ ನಂಬರ್ 19/*/*ನ 35 ಗುಂಟೆ ಜಮೀನು ಇಲಾಖೆಗೆ ಸ್ವಾಧೀನವಾಗದಿದ್ದರೂ ಪಹಣಿಯಲ್ಲಿ ಸ್ವಾಧೀನವಾಗಿದೆ ಎಂದು ನಮೂದಾಗಿದೆ. ಭೂಸ್ವಾಧೀನಗೊಂಡ ಅವಾರ್ಡ್ ಪ್ರತಿ ನೀಡಿ 7 ತಿಂಗಳಿನಿಂದ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಇಲಾಖೆಯಲ್ಲಿ ಬಹಳ ಗೋಲ್‌ಮಾಲ್ ನಡೆಯುತ್ತಿದೆ ಎಂದು ಹಾಜಿಬಾಬ ಹಾಗೂ ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ಹದಿನೈದು ದಿನಗಳಿಂದ ಕಚೇರಿಯಲ್ಲಿ ವಿದ್ಯುತ್ ಇಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಈ ಕಚೇರಿ ಬೇರಡೆ ವರ್ಗಾವಣೆ ಮಾಡುವ ಪ್ರಯತ್ನಗಳು ನಡೆದಿವೆ. ಹೀಗಾಗಿ ಕಚೇರಿ ಕಟ್ಟಡದ ಮೇಲೆ ನಾಮಫಲಕ ಅಳವಡಿಸಿಲ್ಲ’ ಎಂದು ಕಚೇರಿಯ ಅಧಿಕಾರಿ ತಿಮ್ಮಪ್ಪ ಸಮಜಾಯಿಷಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.