ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕು ಗಬ್ಬೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡವನ್ನು ಬೇರೆ ಕಡೆಗೆ ಸ್ಥಳಾಂತರಿಸಬಾರದು. ಕೂಡಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಸ್ವಂತ ಕಟ್ಟಡದಲ್ಲಿಯೇ ಶಾಲೆ ಆರಂಭಿಸಬೇಕು ಎಂದು ದಲಿತ ಮುಖಂಡ ರಾಜಪ್ಪ ಸಿರವಾರಕರ್ ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಗೈರಾಣಿ ಭೂಮಿಯಲ್ಲಿ 8 ಎಕರೆ 17 ಗುಂಟೆ ಜಮೀನನ್ನು ವಸತಿ ಶಾಲೆ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಯು 2015 ರಲ್ಲಿಯೇ ಮಂಜೂರಿ ಮಾಡಿದ್ದಾರೆ. ವಸತಿ ಶಾಲೆ ನಿರ್ಮಾಣವೂ ಸೇರಿದಂತೆ ₹16.32 ಕೋಟಿ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಅಡಿಗಲ್ಲು ಶಿಲಾಫಲಕ ಅನಾವರಣ ಮಾಡಿದ್ದಾರೆ. ಆದರೆ, ಕಾಮಗಾರಿ ಮಾತ್ರ ನಡೆಯುತ್ತಿಲ್ಲ ಎಂದು ಹೇಳಿದರು.
ಜೆಡಿಎಸ್ ಮುಖಂಡ ಬುಡ್ಡನಗೌಡ ಅವರು ಶಾಲೆ ಸ್ಥಳಾಂತರಕ್ಕೆ ಒತ್ತಾಯಿಸಿರುವುದು ಖಂಡನೀಯ. ಅಕ್ರಮ ಸಕ್ರಮದಲ್ಲಿ ಸಾವಿತ್ರಮ್ಮ ಸೂಗರಯ್ಯ ಅವರಿಗೆ ಭೂಮಿ ಮಂಜೂರಿಯಾಗಿದೆ ಎಂದು ತಿಳಿಸಲಾಗಿದೆ. ಆದರೆ, ಶಾಲೆ ನಿರ್ಮಾಣದ ಜಮೀನಿಗೂ ಅಕ್ರಮ ಸಕ್ರಮಕ್ಕೂ ಸಂಬಂಧವಿಲ್ಲ ಎಂದರು. ದಲಿತ ವಿದ್ಯಾರ್ಥಿಗಳು ಕಲಿಯವುದಕ್ಕೆ ಆಸ್ಪದ ಆಗಬಾರದು ಎನ್ನುವ ದುರುದ್ದೇಶ ಇಟ್ಟುಕೊಂಡು ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸವನ್ನು ಬುಡ್ಡನಗೌಡ ಅವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಲೆ ಸ್ಥಳಾಂತರಕ್ಕೆ ಮುಂದಾದರೆ ದಲಿತ ಸಂಘಟನೆಗಳ ವೇದಿಕೆ ಮತ್ತು ಟಿಪ್ಪು ಸುಲ್ತಾನ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಫಾರೂಕ್‌ಗೌಡ, ಶಾಂತಕುಮಾರ ಹೊನ್ನಟಗಿ, ಮರಿಯಪ್ಪ ಮುದುಕಲ್, ಹನುಮಂತ ಗಣೇಕಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.