ರಾಯಚೂರು: ಕಳೆದ ನಾಲ್ಕು ತಿಂಗಳಿನಿಂದ ನಗರಸಭೆಯು ಬಾಕಿ ಉಳಿಸಿಕೊಂಡಿರುವ ಪೌರಕಾರ್ಮಿಕರ ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಪೌರ ಸೇವೆ ನೌಕರರ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಪೌರಾಯುಕ್ತರಿಗೆ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗುತ್ತಿಲ್ಲ. ಎಲ್ಲರೂ ಬಡವರಿದ್ದು, ಕುಟುಂಬವನ್ನು ನಿರ್ವಹಣೆ ಮಾಡುವುದು ದುಸ್ತರವಾಗಿ ಮಾರ್ಪಟ್ಟಿದೆ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ವೇತನಕ್ಕಾಗಿ ನಗರಸಭೆಗೆ ಪ್ರತಿದಿನ ಅಲೆದಾಡುವ ಪರಿಸ್ಥಿತಿಯನ್ನು ಕೊನೆಗಾಣಿಸಬೇಕು. ನಗರಸಭೆಯಲ್ಲಿರುವ 280 ಗುತ್ತಿಗೆ ಪೌರಕಾರ್ಮಿಕರ ಬದುಕು ಬೀದಿ ಪಾಲಾಗಿದೆ. ದುಡಿಯುವ ಶಕ್ತಿಯನ್ನು ಕಳೆದು, ದುಡಿಸಿಕೊಳ್ಳುವ ಪ್ರವೃತ್ತಿಯನ್ನು ಅಧಿಕಾರಿಗಳು ನಿಲ್ಲಿಸಬೇಕು. ಪೌರಕಾರ್ಮಿಕರಿಗೆ ಶಕ್ತಿಕೊಟ್ಟು ಕೆಲಸ ಪಡೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪೌರಕಾರ್ಮಿಕರ ಬಾಕಿ ವೇತನ ಪಾವತಿಗೆ ಸಂಬಂಧಿಸಿದಂತೆ ವಕೀಲ ಎಸ್. ಮಾರೆಪ್ಪ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಚರ್ಚಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಕೂಡಲೇ ವೇತನ ಪಾವತಿಗೆ ಕ್ರಮ ವಹಿಸುವುದಕ್ಕೆ ನಗರಸಭೆ ಪೌರಾಯುಕ್ತಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಉರುಕುಂದಪ್ಪ, ಆರ್. ಹನುಮಂತು, ಮಹೇಶ, ಬೂದೆಪ್ಪ, ರವಿ, ಮುತ್ತಣ್ಣ, ಮಹಾದೇವಮ್ಮ, ಪದ್ಮ, ಶಾಂತಮ್ಮ, ಈರಮ್ಮ, ಜಮುಲಮ್ಮ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.