ಕಳೆಗಟ್ಟಿದ ರಾಯಚೂರು ನವರಾತ್ರಿ ಉತ್ಸವ
ವಿವಿಧ ದೇವಸ್ಥಾನಗಳಲ್ಲಿ ಪೂಜೆ; ಅಂಬ ಭವಾನಿಯ ದೇವಿಯ ಪ್ರತಿಷ್ಠಾಪನೆ
Published 7 ಅಕ್ಟೋಬರ್ 2024, 4:44 IST Last Updated 7 ಅಕ್ಟೋಬರ್ 2024, 4:44 IST ರಾಯಚೂರಿನ ಭಂಗಿಕುಂಟಾ (ಬ್ರೇಸ್ತವಾರಪೇಟೆ) ಭವಾನಿ ವೃತ್ತದಲ್ಲಿ ವೀರಶೈವ ಗೌಳಿ ಸಮಾಜದ ವತಿಯಿಂದ ಶರನ್ನವರಾತ್ರಿಯ ಅಂಗವಾಗಿ ಅಂಬಾ ಭವಾನಿ ಹಾಗೂ ಘಟಸ್ಥಾಪನಾ ಪ್ರತಿಷ್ಠಾಪನೆ ಪ್ರಯುಕ್ತ ದೀಪಾಲಂಕಾರ ಮಾಡಲಾಯಿತು.
ರಾಯಚೂರು: ನವರಾತ್ರಿಯ ಪ್ರಯುಕ್ತ ನಗರ ಸೇರಿ ಜಿಲ್ಲೆಯಲ್ಲಿ ಪ್ರಮುಖ ದೇಗುಲಗಳಲ್ಲಿ ದೇವಿಯ ಮೂರ್ತಿಗಳಿಗೆ ವಿಶೇಷ ಅಲಂಕಾರ, ಅನ್ನ ಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ನೃತ್ಯ ಸ್ಪರ್ಧೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕಳೆಗಟ್ಟಿವೆ.
ನವರಾತ್ರೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ: ನವರಾತ್ರಿ ಉತ್ಸವದ ಅಂಗವಾಗಿ ನಗರದ ಮುನ್ನೂರುಕಾಪು ಸಮಾಜದ ವತಿಯಿಂದ ಅಕ್ಟೋಬರ್ 3ರಿಂದ 11ರ ವರೆಗೆ ನಗರದ ಗದ್ವಾಲ್ ರಸ್ತೆಯಲ್ಲಿ ಮಾತಾ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ.
53ನೇ ನವರಾತ್ರಿ: ನಗರದ ಬ್ರೇಸ್ತವಾರಪೇಟೆಯಲ್ಲಿನ ಉಪ್ಪಾರವಾಡಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12 ವರೆಗೆ 53ನೇ ನವರಾತ್ರಿ ಉತ್ಸವ ಆಯೋಜಿಸಲಾಗಿದೆ.
ಶನಿವಾರ ಆಂಜನೇಯ ವಾಹನೋತ್ಸವ ಅಂಗವಾಗಿ ಬೆಳಗ್ಗೆ ಸುಪ್ರಭಾತ ಸೇವೆ, ಧ್ವಜಾರೋಹಣ ಕಾರ್ಯಕ್ರಮ, ಸಂಕಲ್ಪ ಸೇವೆ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ಹಾಗೂ ಸಂಜೆ 7 ಗಂಟೆಗೆ ಹನುಮಾನ ಚಾಲಿಸ ಪಾರಾಯಣ, ಆಂಜನೇಯ ವಾಹನದ ಪಲ್ಲಕ್ಕಿ ಉತ್ಸವ, ತೊಟ್ಟಿಲ ಸೇವೆ, ಸಂಗೀತ ಸೇವೆ, ನರ್ತನ ಸೇವೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ಸಮಿತಿಯ ಸದಸ್ಯರು, ಬಡಾವಣೆಯ ಯುವಕರು ಉಪಸ್ಥಿತರಿದ್ದರು.
ಗೌಳಿ ಸಮಾಜದಿಂದ ಅಂಬಾ ಭವಾನಿಯ ಘಟಸ್ಥಾಪನೆ: ನಗರದ ವೀರಶೈವ ಗೌಳಿ ಸಮಾಜದ ವತಿಯಿಂದ ಶರನ್ನವರಾತ್ರಿಯ ಅಂಗವಾಗಿ ಭಂಗಿಕುಂಟಾ (ಬ್ರೇಸ್ತವಾರಪೇಟೆ) ಭವಾನಿ ವೃತ್ತದಲ್ಲಿ ಅಂಬಾ ಭವಾನಿ ಹಾಗೂ ಘಟಸ್ಥಾಪನಾ ಪ್ರತಿಷ್ಠಾಪನೆ ಮಾಡಲಾಗಿದೆ. ಸಮಾಜದಿಂದ ಕಳೆದ 41 ವರ್ಷದಿಂದ ನವರಾತ್ರಿ ಆಚರಣೆ ಮಾಡಲಾಗುತ್ತಿದೆ.
ಈ ಬಾರಿ ಅ.3ರಿಂದ 12ರ ವರೆಗೆ ಸಂಜೆ 6ರಿಂದ 6.30 ರ ವರೆಗೆ ಅಂಬ ಭವಾನಿಗ ಅಭಿಷೇಷ ಅರ್ಚನೆ, ಮಂಗಳಾರತಿ(ಅಲಂಕಾರ) ನಡೆಯುತ್ತಿದೆ. ಅ.3ರಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಸ್ವಾಮೀಜಿ ಸಾನಿಧ್ಯದಲ್ಲಿ ಪಲ್ಲಕ್ಕಿ ಸೇವೆ ನಡೆಯಿತು. ಅ.11ರಂಧು ದುರಗಾಷ್ಠಮಿ ದಿನ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2ರ ವರೆಗೆ ಹೋಮ, ಹವನ ಸಂಜೆ 7ರಂದು ದೀಪೋತ್ಸವ ನಡೆಯಲಿದೆ. ಪ್ರತಿನಿತ್ಯ ದೇವಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ಹಸಿರು ಉಡುಗೆ ತೊಡಿಸಿ, ವಿವಿಧ ಬಗೆಯ ಹೂವು, ಹಣ್ಣು–ಹಂಪಲಗಳಿಂದ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ. ಬೆಳಿಗ್ಗೆ 3ರಿಂದ ರಾತ್ರಿ 8ರ ವರೆಗೆ ಮಹಿಳೆಯರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಾರೆ. ನವರಾತ್ರಿಯ ಕೊನೆಯ ದಿನ ದೇವಿಗೆ ಪೂಜೆ ಸಲ್ಲಿಸಿ ಮೂರ್ತಿಯನ್ನು ಬಟ್ಟೆಯಿಂದ ಮುಚ್ಚಲಾಗುವುದು. ಅ.17ರಂದು ಶರದ ಪೂರ್ಣಿಮೆಯ ದಿನ ಬೆಳಿಗ್ಗೆ 8.ರಿಂದ 12ರ ವರೆಗೆ ಪೂಜೆ ಮಧ್ಯಾಹ್ನ 1ರಿಂದ ಸಂಜೆ 4ರ ವರೆಗೆ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಿದ್ದು ಸುಮಾರು 3 ಸಾವಿರ ಜನರಿಗೆ ಪ್ರಸಾದ ನೀಡಲಾಗುವುದು ಎಂದು ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಶಾಮ ಸುಂದರ್ ತಿಳಿಸಿದರು.
ನಗರದ ವಿವಿಧೆಡೆ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಸೋಮವಾರಪೇಟೆ ಹಿರೇಮಠ, ಪಂಚಲಿಂಗೇಶ್ವರ ದೇವಸ್ಥಾನ, ನವೋದಯ ಕಾಲೇಜಿನ ಬಳಿಯ ವೆಂಕಟೇಶ್ವರ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ.
ರಾಯಚೂರಿನ ಭಂಗಿಕುಂಟಾ (ಬ್ರೇಸ್ತವಾರಪೇಟೆ) ಭವಾನಿ ವೃತ್ತದಲ್ಲಿ ವೀರಶೈವ ಗೌಳಿ ಸಮಾಜದ ವತಿಯಿಂದ ಶರನ್ನವರಾತ್ರಿಯ ಅಂಗವಾಗಿ ಅಂಬಾ ಭವಾನಿ ಹಾಗೂ ಘಟಸ್ಥಾಪನಾ ಪ್ರತಿಷ್ಠಾಪನೆ ಮಾಡಲಾಯಿತು. ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಬ್ರೇಸ್ತವಾರಪೇಟೆಯಲ್ಲಿ ಉಪ್ಪಾರವಾಡಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ಆಂಜನೇಯ ವಾಹನೋತ್ಸವ ಅಂಗವಾಗಿ ಬೆಳಗ್ಗೆ ಸುಪ್ರಭಾತ ಸೇವೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ನಶಿಸುತ್ತಿರುವ ಸಂಸ್ಕೃತಿ ಉಳಿಸಿ: ಎ.ಪಾಪಾರೆಡ್ಡಿ
ರಾಯಚೂರು: ಪ್ರಸ್ತುತ ಕಾಲಘಟ್ಟದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಮತ್ತು ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡುವುದು ಅತ್ಯಂತ ಅವಶ್ಯಕತೆ ಇದೆ ಎಂದು ಮಾಜಿ ಶಾಸಕ ಹಾಗೂ ಮುನ್ನೂರುಕಾಪು ಸಮಾಜದ ಮುಖಂಡ ಎ.ಪಾಪಾರೆಡ್ಡಿ ಹೇಳಿದರು. ನವರಾತ್ರಿ ಉತ್ಸವದ ಅಂಗವಾಗಿ ಭಾನುವಾರ ನಗರದ ಗದ್ವಾಲ್ ರಸ್ತೆಯಲ್ಲಿ ಮಾತಾ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ 3ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಎಲ್ಲಾ ಸಮುದಾಯದ ಜನರು ಇಂತಹ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ ಬ್ರಾಹ್ಮಣ ವೈಶ್ಯ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮುನ್ನೂರುಕಾಪು ಸಮಾಜ ಮುಂಗಾರು ಸಾಂಸ್ಕೃತಿಕ ಹಬ್ಬ ಹಾಗೂ ನವರಾತ್ರಿ ಉತ್ಸವದ ಮೂಲಕ ನಶಿಸುತ್ತಿರುವ ಗ್ರಾಮೀಣ ಕಲೆ ಸಂಸ್ಕೃತಿ ರಕ್ಷಣೆಗೆ ಮುಂದಾಗಿದೆ. ನವರಾತ್ರಿ ದಸರ ಉತ್ಸವ ಕೇವಲ ಮೈಸೂರು ಬೆಂಗಳೂರು ಭಾಗ ಸೀಮಿತ ಎಂಬ ಭಾವನೆ ತೊರೆದು ಗಡಿಭಾಗ ರಾಯಚೂರಿನಲ್ಲಿ ಮುನ್ನೂರುಕಾಪು ಸಮಾಜದಿಂದ ಕಳೆದ 24 ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೂಲಕ ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ಕುಸ್ತಿ ಇತರೆ ಗ್ರಾಮೀಣ ಕಲೆ ಮೂಲಕ ಸಾಂಸ್ಕೃತಿಕ ತಂಡಗಳಿಗೆ ವೇದಿಕೆ ಕಲ್ಪಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸೋಮವಾರಪೇಟೆ ಹಿರೇಮಠದ ಪೀಠಾಧಿಪತಿ ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎ.ಪಾಪಾರೆಡ್ಡಿ ಮತ್ತು ಬೆಲ್ಲಂ ನರಸರೆಡ್ಡಿ ಇವರಿಬ್ಬರು ಮುನ್ನೂರು ಕಾಪು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ಮುನ್ನೂರು ಕಾಪು ಸಮಾಜ ಬಲಿಷ್ಠ ಸಮಾಜವನ್ನಾಗಿ ಗುರುತಿಸಿಕೊಂಡಿದೆ. ಮುನ್ನೂರು ಕಾಪು ಸಮಾಜದಿಂದ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ಹಬ್ಬ ನವರಾತ್ರಿ ಉತ್ಸವ ಅತ್ಯಂತ ವೈಭವಕರಣದಿಂದ ಇಡೀ ರಾಜ್ಯವೇ ಜಿಲ್ಲೆಯನ್ನು ಗುರುತಿಸುವಂತೆ ಮಾಡಿದೆ ಎಂದು ಹೇಳಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಮಕೂರು ರಾತಿಕ ಸಾಗರ್ ಮತ್ತು ಎಸ್ ಎಸ್ ಆರ್ ಜಿ ಎಸ್ ಆರ್ ಕೆ ಬಿ ಎಡ್ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಮೂಲಕ ಜನರ ಮೆಚ್ಚಿಗೆಗೆ ಪಾತ್ರರಾದರು. ಧಾರ್ಮಿಕ ಮತ್ತು ಗ್ರಾಮೀಣ ಸೊಗಡಿನ ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು. ಚನ್ನಬಸವ ಹಿರೇಮಠ ಅವರು ಉಪನ್ಯಾಸ ಕಾರ್ಯಕ್ರಮ ನಡೆಸಿದರು. ಮುನ್ನೂರುಕಾಪು ಸಮಾಜದ ಹಿರಿಯ ಮುಖಂಡ ಬೆಲ್ಲಂ ನರಸರೆಡ್ಡಿ ಸಾವಿತ್ರಿ ಪುರುಷೋತ್ತಮ್ ಜಗನಾಥ್ ಕುಲಕರ್ಣಿ ರಾಳ್ಳ ತಿಮ್ಮಾರೆಡ್ಡಿ ಕೋಶರೆಡ್ಡಿ ಕುಕ್ಕಲ್ ನರಸಿಂಹಲು ವೈ ಗೋಪಾಲರೆಡ್ಡಿ ಯು. ಲಿಂಗರೆಡ್ಡಿ ನಂದಕಟ್ಟುಮನಿ ಆರ್ ಕೆ ಅಮರೇಶ ಶ್ರೀಕಾಂತ್ ವಕೀಲರುಜಗದೀಶ್ ಗುಪ್ತ ಉದಯಕುಮಾರ ಯಾದವ್ ಅರವಿ ನಾಗನಗೌಡ ಪಿ. ಶ್ರೀನಿವಾಸ್ ರೆಡ್ಡಿ ಮುನ್ನೂರು ಕಾಪು ಸಮಾಜದ ಮುಖಂಡರು ಉಪಸ್ಥಿತರಿದ್ದರು.