ರಾಯಚೂರು: ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಹಾಗೂ ರೈತ ಮಾರುಕಟ್ಟೆ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸುಗಮಗೊಳಿಸಲು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪೊಲೀಸರು ಕೈಗೊಂಡಿದ್ದ ಕ್ರಮಗಳು ಆರಂಭದಲ್ಲಿ ಪಾಲನೆಯಾಗಿದ್ದವು. ಈಗ ಮಾರುಕಟ್ಟೆ ಮತ್ತೆ ಅವ್ಯವಸ್ಥೆಯತ್ತ ಸಾಗುತ್ತಿದೆ!
ತರಕಾರಿ ಖರೀದಿಗಾಗಿ ಬರುವವರ ವಾಹನಗಳು ಮತ್ತು ಮಾರುಕಟ್ಟೆಗೆ ತರಕಾರಿ ಹೊತ್ತು ತರುವ ವಾಹನಗಳ ದಟ್ಟಣೆಯಿಂದಾಗಿ ಪಾದಚಾರಿಗಳು ಸಂಕಷ್ಟ ಅನುಭವಿಸುವ ಸ್ಥಿತಿ ಪ್ರತಿದಿನ ಬೆಳಿಗ್ಗೆ ಕಾಣುತ್ತದೆ. ಮಹಾವೀರ ಚೌಕ್ ಕಡೆಯಿಂದ ರೈತ ಮಾರುಕಟ್ಟೆಗೆ ಬರುವ ಲಾರಿ, ಟಾಟಾ ಏಸ್, ಆಪೆ ವಾಹನಗಳು ಮತ್ತೆ ಅದೇ ಮಾರ್ಗದಲ್ಲಿ ಮರಳಬೇಕಾಗಿದೆ. ಇನ್ನೊಂದು ಕಡೆ, ತಿನ್ ಕಂದಿಲ್ ಮಾರ್ಗದಿಂದ ರೈತ ಮಾರುಕಟ್ಟೆ ಸಂಪರ್ಕಿಸುವ ರಸ್ತೆ ಇಕ್ಕಟ್ಟಾಗಿರುವುದು ಈ ಸಮಸ್ಯೆಗೆ ಕಾರಣ.
ರೈತ ಮಾರುಕಟ್ಟೆ ಎದುರು ಸಾರ್ವಜನಿಕರು ಬೈಕ್‌ಗಳನ್ನು ಅಡ್ಡಾದಿಡ್ಡಿ ನಿಲುಗಡೆ ಮಾಡುತ್ತಿದ್ದು, ಸುಗಮ ನಿಯಂತ್ರಣವಿಲ್ಲ. ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಮುಂಭಾಗ ಕೂಡಾ ಬೆಳಿಗ್ಗೆ ಎರಡೂ ಮಗ್ಗಲುಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು ಸಂಚಾರ ದಟ್ಟಣೆಗೆ ಆಸ್ಪದವಾಗಿದೆ. ಸಂಚಾರಿ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ ಆರಂಭದಲ್ಲಿ ವಾಹನಗಳನ್ನು ನಿಯಂತ್ರಿಸಿದ್ದರು. ಆದರೆ, ಈಗ ನಿಯಂತ್ರಣ ತಪ್ಪಿದ್ದು ಅವ್ಯವಸ್ಥೆ ಮರಳುತ್ತಿದೆ.
ರೈತ ಮಾರುಕಟ್ಟೆಯಲ್ಲಿ ತ್ಯಾಜ್ಯ ವಿಲೇವಾರಿಗೆ ನಿರ್ದಿಷ್ಟ ಜಾಗಗಳನ್ನು ಗುರುತಿಸಿಲ್ಲ. ವಾಹನಗಳ ನಿಲುಗಡೆ ತಾಣವೆಲ್ಲವೂ ತಿಪ್ಪೇಯಂತಾಗಿದೆ. ತಿಪ್ಪೆಯಲ್ಲಿ ಬೀಳುವ ಹಸಿರು ಕಸವನ್ನು ಅರಸಿಕೊಂಡು ಬಿಡಾಡಿ ದನಗಳು ಮುಗಿಬೀಳುತ್ತಿವೆ. ಮಾರುಕಟ್ಟೆಯಲ್ಲಿ ಸಾರ್ವಜನಿಕ ಮೂತ್ರಾಲಯ ಮತ್ತು ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಈ ತಿಪ್ಪೆ ತ್ಯಾಜ್ಯದಲ್ಲಿಯೇ ಜನರು ಮೂತ್ರ ಮಾಡುತ್ತಿದ್ದಾರೆ. ಶುಚಿತ್ವ ಕಾಪಾಡುವುದಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ರೈತ ಮಾರುಕಟ್ಟೆ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಿದ್ದರೂ, ಉದ್ದೇಶ ಈಡೇರುತ್ತಿಲ್ಲ.
ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿಗಾಗಿ ಎರಡು ಸಂಘಟನೆಳಿವೆ. ಎರಡೂ ಸಂಘಟನೆಗಳ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು ಕೂಡಾ ಮಾರುಕಟ್ಟೆ ವ್ಯವಸ್ಥೆ ಹದಗೆಡುವುದಕ್ಕೆ ಕಾರಣವಾಗುತ್ತಿದೆ. ಒಂದು ಸಂಘಟನೆಯ ಪದಾಧಿಕಾರಿಗಳು ‘ಬೇಕು’ ಎಂದರೆ, ಇನ್ನೊಂದು ಸಂಘಟನೆ ’ಬೇಡ’ ಎಂದು ವಾದಿಸುತ್ತದೆ. ಈ ಮುಸುಕಿನ ಗುದ್ದಾಟ ಬಹಳ ವರ್ಷಗಳಿಂದ ಮುಂದುವರಿದುಕೊಂಡು ಬರುತ್ತಿದೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಇದೀಗ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಮಾರುಕಟ್ಟೆ ನಿಯಂತ್ರಣಕ್ಕಾಗಿ ಮುಂಬರುವ ದಿನಗಳಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಯೋಜಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.