ADVERTISEMENT

ಬಹುತೇಕ ತರಕಾರಿ ಬೆಲೆ ಹೆಚ್ಚಳ

ಬೀನ್ಸ್ ₹240, ನುಗ್ಗೆಕಾಯಿ ₹200

ಚಂದ್ರಕಾಂತ ಮಸಾನಿ
Published 25 ಮೇ 2024, 7:42 IST
Last Updated 25 ಮೇ 2024, 7:42 IST
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಗ್ರಾಹಕರು/ ಚಿತ್ರ; ಶ್ರೀನಿವಾಸ ಇನಾಮದಾರ್
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಗ್ರಾಹಕರು/ ಚಿತ್ರ; ಶ್ರೀನಿವಾಸ ಇನಾಮದಾರ್   

ರಾಯಚೂರು: ಬೇಸಿಗೆ ಕಾರಣ ಸಹಜವಾಗಿಯೇ ಇಲ್ಲಿಯ ತರಕಾರಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಕಾಯಿಪಲ್ಲೆ ಬಂದಿದೆ. ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ.

ಬೆಳ್ಳುಳ್ಳಿ ಹಾಗೂ ಬೀನ್ಸ್ ಗ್ರಾಹಕರಿಗೆ ಬಿಸಿ ಮುಟ್ಟಿಸಿದರೆ, ಹಸಿ ಮೆಣಸಿನಕಾಯಿ ಖಾರ ಹೆಚ್ಚಿಸಿಕೊಂಡಿದೆ. ಮೆಣಸಿನಕಾಯಿ ದರ ದುಪ್ಪಟ್ಟಾಗಿದೆ. ಡೊಣಮೆಣಸಿನಕಾಯಿ, ನುಗ್ಗೆಕಾಯಿ, ಬೀನ್ಸ್ ಬೆಲೆಯಲ್ಲಿ ₹4 ಸಾವಿರ ಹೆಚ್ಚಾಗಿದೆ.

ಪ್ರತಿ ಕ್ವಿಂಟಲ್‌ಗೆ ಗಜ್ಜರಿ, ಬೀಟ್‌ರೂಟ್‌, ಟೊಮೆಟೊ, ಹಿರೇಕಾಯಿ ₹ 2 ಸಾವಿರ, ಆಲೂಗಡ್ಡೆ, ಬದನೆಕಾಯಿ, ಬೆಂಡೆಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ ₹ 1 ಸಾವಿರ ಹಾಗೂ ಈರುಳ್ಳಿ, ತೊಂಡೆಕಾಯಿ ₹ 500 ಹೆಚ್ಚಳವಾಗಿದೆ.

ADVERTISEMENT

ಬೆಳ್ಳುಳ್ಳಿ, ಎಲೆಕೋಸು, ಹೂಕೋಸು ದರ ಸ್ಥಿರವಾಗಿದೆ. ಸೌತೆಕಾಯಿ, ಸಬ್ಬಸಗಿ, ಕರಿಬೇವು, ಕೊತಂಬರಿ, ಪಾಲಕ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಕಡಿಮೆಯಾಗಿದೆ. ಮೆಂತೆ ಸೊಪ್ಪು ಮಾತ್ರ ಪ್ರತಿ ಕ್ವಿಂಟಲ್‌ಗೆ ₹ 500 ಏರಿಕೆಯಾಗಿದೆ.

ನೆರೆಯ ಆಂಧ್ರಪ್ರದೇಶ, ತೆಲಂಗಾಣದ ಜಿಲ್ಲೆಗಳಿಂದ ಹಿರೇಕಾಯಿ, ಗಜ್ಜರಿ, ಅವರೆಕಾಯಿ,  ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊ‍ಪ್ಪು, ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ ಸೊಪ್ಪು ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

ನಗರದಲ್ಲಿ ಪ್ರಖರ ಬಿಸಿಲು ಕಡಿಮೆಯಾದರೂ ಧಗೆ ಕಡಿಮೆಯಾಗಿಲ್ಲ. ಹೀಗಾಗಿ ಬೆಳಗಿನ ಜಾವದಲ್ಲೇ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿದೆ. ಬೇಸಿಗೆಯಲ್ಲಿ ನೀರಾವರಿ ಸೌಲಭ್ಯವಿರುವ ಪ್ರದೇಶದಲ್ಲಿರುವ ತರಕಾರಿ ಇಲ್ಲಿಯ ಮಾರುಕಟ್ಟೆಗೆ ಬರುತ್ತಿದ್ದು, ಬೆಲೆ ಸಹಜವಾಗಿಯೇ ಹೆಚ್ಚಿದೆ.

‘ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಸೊಪ್ಪು ಬರುತ್ತಿದೆ. ಬಹುಬೇಗ ಮಾರಾಟ ಸಹ ಆಗುತ್ತಿದೆ. ಅನೇಕ ಕಡೆ ತರಕಾರಿ ಬೆಳೆಸಲಾಗುತ್ತಿದೆ. ಎರಡು ವಾರ ತರಕಾರಿ ಬೆಲೆ ಇಳಿಯುವ ಲಕ್ಷಣಗಳು ಇಲ್ಲ. 45 ದಿನಗಳ ನಂತರ ತರಕಾರಿ ಬೆಲೆಯಲ್ಲಿ ಕಡಿಮೆಯಾಗಲಿದೆ. ಮಳೆ ಬಾರದಿದ್ದರೆ ದರ ಹೆಚ್ಚಳವಾಗಲಿದೆ’ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.