ADVERTISEMENT

ಕವಿತಾಳ | ಬಸಾಪುರಕ್ಕೆ ಕಲುಷಿತ ನೀರು ಪೂರೈಕೆ; ಗ್ರಾಮಸ್ಥರಲ್ಲಿ ಆತಂಕ

ನೀರು ಪೂರೈಸುವ ಪೈಪ್‌ ದುರಸ್ತಿಗೆ ನಿರ್ಲಕ್ಷ: ಆರೋಪ

ಎಸ್.ಮಂಜುನಾಥಬಳ್ಳಾರಿ
Published 5 ಜುಲೈ 2024, 6:06 IST
Last Updated 5 ಜುಲೈ 2024, 6:06 IST
ಕವಿತಾಳ ಸಮೀಪದ ಬಸಾಪುರ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಪೈಪ್‌ ಹೊಡೆದು ಕೆಸರು ಉಂಟಾಗಿರುವುದು
ಕವಿತಾಳ ಸಮೀಪದ ಬಸಾಪುರ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಪೈಪ್‌ ಹೊಡೆದು ಕೆಸರು ಉಂಟಾಗಿರುವುದು   

ಕವಿತಾಳ: ಸಮೀಪದ ಬಸಾಪುರ ಗ್ರಾಮದ ಕುಡಿಯುವ ನೀರಿನ ಕೆರೆಯಿಂದ ಪೂರೈಸುವ ನೀರು ಕಲುಷಿತಗೊಂಡಿದ್ದು, ಗ್ರಾಮಸ್ಥರು ರೋಗ ಹರಡುವ ಆತಂಕ ವ್ಯಕ್ತಪಡಿಸಿದ್ದಾರೆ.

ಮಸ್ಕಿ ತಾಲ್ಲೂಕಿನ ವಟಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಕೆರೆಯಿಂದ ಗೂಗೆಬಾಳ, ತೋರಣದಿನ್ನಿ, ತಾಯಮ್ಮ ಕ್ಯಾಂಪ್‌, ಗಾಳಿದುರ್ಗಮ್ಮ ಕ್ಯಾಂಪ್‌ ಮತ್ತು ತೋರಣದಿನ್ನಿ ಕ್ರಾಸ್‌ಗೆ ನೀರು ಪೂರೈಸಲಾಗುತ್ತಿದೆ. ಕೆರೆಯಿಂದ ನೀರು ಪೂರೈಸುವ ಮುಖ್ಯ ಪೈಪ್‌ ಹಳ್ಳದಲ್ಲಿ ಹಾದು ಹೋಗಿದ್ದು, ಅಲ್ಲಲ್ಲಿ ಪೈಪ್‌ ಹೊಡೆದ ಪರಿಣಾಮ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎನ್ನುವುದು ಗ್ರಾಮಸ್ಥರ ಆರೋಪ.

‘ಪೈಪ್‌ ಹೊಡೆದ ಜಾಗದಲ್ಲಿ ನೀರು ನಿಂತು ಕೆಸರು ಉಂಟಾಗಿದೆ. ಅದರಲ್ಲಿ ಎಮ್ಮೆಗಳು ಬಿದ್ದು ಉರುಳಾಡುತ್ತವೆ. ಗುಂಡಿಯಲ್ಲಿ ನಿಂತ ನೀರನ್ನು ಕ್ರಿಮಿನಾಶಕ ಸಿಂಪಡಿಸಲು ಬಳಸುವ ರೈತರು ಅದರಲ್ಲಿಯೇ ಕ್ರಿಮಿನಾಶಕ ಡಬ್ಬಾಗಳನ್ನು ತೊಳೆಯುತ್ತಿದ್ದಾರೆ. ಈ ರೀತಿ ಗಲೀಜು ಒಳಗೊಂಡ ನೀರನ್ನು ಗ್ರಾಮಗಳಿಗೆ ಪೂರೈಸಲಾಗುತ್ತಿದೆ. ಮಣ್ಣು, ಕಸ, ಕಡ್ಡಿ ಸೇರಿದಂತೆ ಗಬ್ಬು ವಾಸನೆ ಬೀರುವ ಗಲೀಜು ನೀರು ಬಳಕೆಗೂ ಯೋಗ್ಯವಾಗಿಲ್ಲ’ ಎಂದು ಗ್ರಾಮದ ರಮೇಶ, ಬಸವರಾಜ ಪೊಲೀಸ್‌ ಪಾಟೀಲ ಮತ್ತು ಅರಳಪ್ಪ ನಾಯಕ ಹೇಳಿದರು.

ADVERTISEMENT

ಪೈಪ್‌ ದುರಸ್ತಿ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಮದ ವ್ಯಕ್ತಿಯೊಬ್ಬರು ಆಡಿಯೋ ಸಂದೇಶ ಮಾಡಿ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಕವಿತಾಳ ಸಮೀಪದ ಬಸಾಪುರ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಪೈಪ್‌ ಹೊಡೆದು ಗಲೀಜು ಉಂಟಾಗಿರುವುದು
ಕವಿತಾಳ ಸಮೀಪದ ಬಸಾಪುರ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಪೈಪ್‌ ಹೊಡೆದು ಗಲೀಜು ಉಂಟಾಗಿರುವುದು.
ಕವಿತಾಳ ಸಮೀಪದ ಬಸಾಪುರ ಗ್ರಾಮಕ್ಕೆ ಪೂರೈಸಲಾದ ಕೆರೆ ನೀರು ಹಳದಿ ಬಣ್ಣಕ್ಕೆ ತಿರುಗಿದೆ
ಒಂದು ವರ್ಷದಿಂದ ಈ ಸಮಸ್ಯೆ ಇದೆ. ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಈಚೆಗೆ ಮತ್ತೊಂದು ಕಡೆ ಪೈಪ್‌ ಒಡೆದು ಸಮಸ್ಯೆ ಹೆಚ್ಚಾಗಿದೆ.
-ರಮೇಶ ಭೋವಿ, ಬಸಾಪುರ ನಿವಾಸಿ
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಪೈಪ್‌ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು
-ಉಮೇಶ, ಇಒ ಮಸ್ಕಿ ತಾಲ್ಲೂಕು ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.