ರಾಯಚೂರು: ಲೋಕಸಭೆ ಚುನಾವಣೆಯ ಮತ ಎಣಿಕೆಯು ನಗರದ ಎಲ್‌ವಿಡಿ ಹಾಗೂ ಎಸ್‌ಆರ್‌ಪಿಎಸ್ ಕಾಲೇಜಿನಲ್ಲಿ ಮೇ 23 ರಂದು ಬೆಳಿಗ್ಗೆ 8ಗಂಟೆಯಿಂದ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತವು ಸಂಪೂರ್ಣ ತಯಾರಿ ಮಾಡಿಕೊಂಡಿದೆ.
ಈ ಎರಡೂ ಕಾಲೇಜುಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅನುಮತಿ ಪತ್ರ ಪಡೆದ ಅಭ್ಯರ್ಥಿಗಳು ಹಾಗೂ ಏಜೆಂಟ್‌ಗಳು ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಅಧಿಕೃತ ಪಾಸ್ ಪಡೆದವರಿಗೆ ಮಾತ್ರ ಒಳಗಡೆ ಪ್ರವೇಶ ನೀಡಲಾಗುತ್ತದೆ. ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ, ಸ್ಪೋಟಕ, ಬೀಡಿ, ಸಿಗರೇಟ್, ಬೆಂಕಿಪೊಟ್ಟಣ ಹಾಗೂ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ.
ವಿಎಲ್ ಫಾರ್ಮಸಿ, ಎಸ್‌ಸಿಎಬಿ ಲಾ ಕಾಲೇಜು, ಯಾದವ ಸಮಾಜದ ಆವರಣ ಹಾಗೂ ಇನ್ಫೆಂಟ್ ಜೀಸಸ್ ಕಾಲೇಜಿನ ಆವರಣದಲ್ಲಿ ವಾಹನ ಪಾರ್ಕಿಂಗ್ ಮಾಡಬೇಕು. ಆರ್‌ಟಿಒ ವೃತ್ತದಿಂದ ನಗರದೊಳಗೆ ಬರುವ ಬಿಆರ್‌ಬಿ ವೃತ್ತ, ಎಂ.ಈರಣ್ಣ ವೃತ್ತ, ಅಶೋಕ ಡಿಪೋ ಮೂಲಕ ಬರಬೇಕು. ಬೋಳಮಾನದೊಡ್ಡಿ ಕಡೆಯಿಂದ ಬರುವವರು ಇನ್‍ಫೆಂಟ್ ಜೀಸಸ್ ಕಾಲೇಜ್ ರಸ್ತೆ, ವಾಸವಿ ವೃತ್ತ, ಹನುಮಾನ್ ಟಾಕೀಸ್ ವೃತ್ತ, ನೇತಾಜಿ ವೃತ್ತದ ಮೂಲಕ ಬರಬೇಕು. ನೇತಾಜಿ ವೃತ್ತದಿಂದ ಮೋಚಿವಾಡ ರಸ್ತೆ ಮೂಲಕ ಎಂ.ಈರಣ್ಣ ವೃತ್ತ, ಬಿಆರ್‌ಬಿ ಅಥವಾ ರೆಡಿಯೋ ಸ್ಟೇಷನ್ ವೃತ್ತದ ಮೂಲಕ ಆರ್‌ಟಿಒ ವೃತ್ತದ ಕಡೆಗೆ ಹೋಗಬೇಕು. ಇದಕ್ಕೆ ಜನರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.
14 ಟೇಬಲ್‌ಗಳು:
ಮತಗಳ ಎಣಿಕೆಗಾಗಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 14 ಟೇಬಲ್‌ಗಳನ್ನು ಮತ ಎಣಿಕೆಗಾಗಿ ಸಿದ್ಧಪಡಿಸಲಾಗಿದೆ. ಅಂಚೆ ಮತಪತ್ರಗಳ ಎಣಿಕೆಗಾಗಿ ಪ್ರತ್ಯೇಕ ಕೊಠಡಿ ಮತ್ತು ನಾಲ್ಕು ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ವಿಧಾನಸಭಾ ಕ್ಷೇತ್ರವಾರು ಐದು ಮತಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ, ಅಭ್ಯರ್ಥಿಗಳು ಅಥವಾ ಏಜೆಂಟರ್ ಸಮ್ಮುಖದಲ್ಲಿ ವಿವಿಪಿಎಟಿ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುವುದು.
ಮತಗಳ ಎಣಿಕೆಗಾಗಿ ಒಟ್ಟು 352 ಮೇಲ್ವಿಚಾರಕರು ಮತ್ತು ಸಹಾಯಕರನ್ನು ನೇಮಕ ಮಾಡಲಾಗಿದ್ದು, ಎಲ್ಲರಿಗೂ ಈ ಮೊದಲೇ ತರಬೇತಿ ನೀಡಲಾಗಿದೆ. 181 ಮೈಕ್ರೋ ಅಬ್ಜರ್ವರ್‌ಗಳನ್ನು ನೇಮಕ ಮಾಡಲಾಗಿದೆ.
ಚುನಾವಣೆಯಲ್ಲಿ ಒಟ್ಟು 11,15,886 ಮತದಾನವಾಗಿದೆ. ಅದರಲ್ಲಿ ಪುರುಷರು 5,70,963 ಮತ್ತು 5,44,914 ಮಹಿಳಾ ಮತದಾರರು ಹಾಗೂ 9 ಇತರೆ ಮತದಾರರು ಮತ ಚಲಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.