ADVERTISEMENT

ರಾಯಚೂರು | ಕೊನೆ ಭಾಗಕ್ಕಿಲ್ಲ ನೀರು; ತೀರದ ಗೋಳಾಟ

ಚಂದ್ರಕಾಂತ ಮಸಾನಿ
Published 6 ನವೆಂಬರ್ 2023, 6:55 IST
Last Updated 6 ನವೆಂಬರ್ 2023, 6:55 IST
ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿ ವ್ಯಾಪ್ತಿಯ 17 ಮತ್ತು 18ನೇ ವಿತರಣಾ ಕಾಲುವೆಯ ಕೊನೆಯ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದು
ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿ ವ್ಯಾಪ್ತಿಯ 17 ಮತ್ತು 18ನೇ ವಿತರಣಾ ಕಾಲುವೆಯ ಕೊನೆಯ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದು   

ರಾಯಚೂರು: ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಜಿಲ್ಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಿಸಲಾಗಿದೆ. ಆದರೆ, ಕಾಲುವೆ ಕೊನೆಯ ಅಂಚಿನ ರೈತರ ಗೋಳಾಟ ಇಂದಿಗೂ ತಪ್ಪಿಲ್ಲ. ಕೊನೆಯ ಭಾಗದವರೆಗೂ ನೀರು ಬಾರದೆ ರೈತರು ನಷ್ಟಕ್ಕೆ ಅನುಭವಿಸುತ್ತಿದ್ದಾರೆ. ಅಕ್ರಮ ಕಾಲುವೆ ಮೇಲ್ಭಾಗದ ರೈತರನ್ನು ಶ್ರೀಮಂತಗೊಳಿಸಿದರೆ, ಕಾಲುವೆ ಅಂಚಿನ ಪ್ರದೇಶ ರೈತರನ್ನು ಬಡತನಕ್ಕೆ ತಳ್ಳಿದೆ.

ಅಕ್ರಮ ನೀರಾವರಿಗೆ ಕಡಿವಾಣ ಹಾಕಿ ಕೊನೆ ಭಾಗದ ರೈತರಿಗೆ ನೀರು ಕೊಡುವ ನಿರ್ಧಾರ ಯಾವ ಸರ್ಕಾರದಿಂದಲೂ ಆಗಿಲ್ಲ.

ರಾಯಚೂರು ತಾಲ್ಲೂಕಿನಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ನೀರಾವರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಬೆಳೆ ಒಣಗುತ್ತಿರುವುದರಿಂದ ರೈತರು ಟ್ಯಾಂಕರ್‌ ನೀರು ಖರೀದಿಸಿ ಬೆಳೆ ಉಳಿಸಿಕೊಳ್ಳವಂತಹ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಏತ ನೀರಾವರಿ ಯೋಜನೆಗಳೂ ನನೆಗುದಿಗೆ ಬಿದ್ದಿರುವ ಕಾರಣ ರೈತರ ಸಂಕಷ್ಟ ಹೇಳತೀರದಾಗಿದೆ.

ADVERTISEMENT

ಕಾಲುವೆ ನೀರು ನಿರ್ವಹಣೆಗೆ ಸಿಬ್ಬಂದಿ ಕೊರತೆ

ಮಾನ್ವಿ: ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ಹಾಗೂ ತಾಲ್ಲೂಕಿನ ಜಲಸಂಪನ್ಮೂಲ ಕಚೇರಿಗಳಲ್ಲಿ 27 ಎಂಜಿನಿಯ‌ರ್ ಹುದ್ದೆಗಳ ನೇಮಕ ಆಗದಿರುವುದು ನೀರು ‌ನಿರ್ವಹಣೆ ಹಾಗೂ ಕಾಲುವೆ ನೀರಿನ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.

ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಕೊನೆ ಭಾಗಕ್ಕೆ ಒಳಪಡುವ ಮೈಲ್ 70ರಿಂದ 104ರವರೆಗೆ 20 ವಿತರಣಾ ಕಾಲುವೆಗಳ ನೀರು ನಿರ್ವಹಣೆಯ ಜವಾಬ್ದಾರಿಯನ್ನು ಸಿರವಾರ ‌ಮುಖ್ಯ ವಿಭಾಗದ ಕಚೇರಿ ಹೊಂದಿದೆ.

ಸಿರವಾರ ಮುಖ್ಯ ವಿಭಾಗದ ವ್ಯಾಪ್ತಿಯಲ್ಲಿ ಸಿರವಾರ, ಕವಿತಾಳ, ಮಾನ್ವಿ ಹಾಗೂ ಹಿರೇಕೊಟ್ನೆಕಲ್  ಉಪ ವಿಭಾಗದ ಕಚೇರಿಗಳು ಇವೆ. ಈ ಉಪ ವಿಭಾಗಗಳ ‌ಕಚೇರಿಗಳಲ್ಲಿ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ತಾಂತ್ರಿಕ ಸಹಾಯಕ ಸೇರಿದಂತೆ 27 ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ಹೀಗಾಗಿ ಕಾಲುವೆಗಳ ಸ್ವಚ್ಛತೆ, ಅಭಿವೃದ್ಧಿ, ನೀರು‌ ತಲುಪಿಸುವ ಕಾರ್ಯ ಸಮರ್ಪಕವಾಗಿಲ್ಲ.

ವಿತರಣಾ ಕಾಲುವೆ ಸಂಖ್ಯೆ 76  ವ್ಯಾಪ್ತಿಯಲ್ಲಿ ಕಾಲುವೆ ಸ್ವಚ್ಛತೆಗೆ ಅಧಿಕಾರಿಗಳು ‌ನಿರ್ಲಕ್ಷ್ಯ ವಹಿಸಿರುವ ಕಾರಣ ಕಾಲುವೆಗೆ ನೀರು ಬರುತ್ತಿಲ್ಲ ಎನ್ನುವುದು ರೈತರ ದೂರು.

ಕೊನೆಯ ಭಾಗಕ್ಕೆ ಸಮರ್ಪಕ ಕಾಲುವೆ ನೀರಿಗಾಗಿ ರೈತರು ಪ್ರತಿ ವರ್ಷ ಹೋರಾಟ ನಡೆಸುವುದು ಮಾನ್ವಿ ಹಾಗೂ ಸಿರವಾರ ತಾಲ್ಲೂಕಿನಲ್ಲಿ ಸಾಮಾನ್ಯ ಸಂಗತಿಯಾಗಿದೆ.


ಕೊನೆಯ ಭಾಗದ ರೈತರಿಗೆ ತಲುಪದ ನೀರು

ದೇವದುರ್ಗ: ದೇವದುರ್ಗ ತಾಲ್ಲೂಕಿನಲ್ಲಿ ಕೃಷ್ಣಾ ಬಲದಂಡೆ ಯೋಜನೆಯ 14, 15, 16 ಮತ್ತು 17ನೇ ವಿತರಣಾ ಕಾಲುವೆಗಳಲ್ಲಿ ಹರಿಯುವ ನೀರು ಕೊನೆಯ ಭಾಗದ ರೈತರಿಗೆ ತಲುಪುತ್ತಿಲ್ಲ.

ಅವೈಜ್ಞಾನಿಕ ವಾರ ಬಂದಿ ಪದ್ಧತಿಯಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪಲು ಕನಿಷ್ಠ 7ರಿಂದ 8 ದಿನವಾಗುತ್ತದೆ. ಅಷ್ಟರಲ್ಲಿ ನೀರು ಬಂದ್ ಮಾಡಿಬಿಡುತ್ತಾರೆ. ಗಬ್ಬೂರು ಹೋಬಳಿ ವ್ಯಾಪ್ತಿಯಲ್ಲಿ ಹರಿದು ರಾಯಚೂರು ಗ್ರಾಮೀಣ ಪ್ರದೇಶದ ಹಳ್ಳಿ ಸೇರುವ 18 ನೇ ವಿತರಣಾ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುವಷ್ಟರಲ್ಲಿ ಗೇಟ್ ಬಂದ್ ಮಾಡುತ್ತಾರೆ. ಇದರಿಂದ ರೈತ-ರೈತರ ನಡುವೆ ಸಂಘರ್ಷಗಳಿಗೆ ದಾರಿ ಮಾಡಿಕೊಡುತ್ತಿದೆ.

ಸಕಾಲಕ್ಕೆ ನೀರು ಬಿಡದ ಕಾರಣ ಭತ್ತ ಮತ್ತು ಮೆಣಸಿನಕಾಯಿಗೆ ಇಳುವರಿ ಕಡಿಮೆಯಾಗುತ್ತದೆ ಎಂದು ಬುದಿನಾಳ ಗ್ರಾಮದ ರೈತ ದೇವೇಂದ್ರ ಆತಂಕ ವ್ಯಕ್ತಪಡಿಸುತ್ತಾರೆ.

ರೈತರ ಮತ್ತು ವಿವಿಧ ರೈತಪರ ಸಂಘಟನೆಯ ಮುಖಂಡರು ಆಲಮಟ್ಟಿ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ರಸ್ತೆ ತಡೆದು ಹೋರಾಟ ಮಾಡಿದ್ದಾರೆ. ಕಳೆದ ಜುಲೈನಲ್ಲಿ ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಗೂ ಈ ಭಾಗದ ರೈತರು ಮನವಿ ಪತ್ರ ಸಲ್ಲಿಸಿದ್ದರು. ಸರ್ಕಾರ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಜಲಾಶಯದಲ್ಲಿ ಅಗತ್ಯಕ್ಕೆ ಅನುಗುಣವಾಗಿ ನೀರಿದ್ದರೂ ಯಾಕೆ ವಾರ ಬಂದಿ ಪದ್ದತಿ ಅನುಸರಿಸುತ್ತಾರೆ ಎಂದು ತಿಳಿದು ಬರುತ್ತಿಲ್ಲ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ್ ಪಾಟೀಲ ಇಂಗಳದಾಳ.

ವಾರಬಂದಿ ಬದಲಿಗೆ ವಾರದಲ್ಲಿ ಆರು ದಿನ ಮಾತ್ರ ಬಂದ್ ಮಾಡಿ 24 ದಿನ ಕಾಲುವೆಗೆ ನೀರು ಹರಿಸಿದರೆ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತದೆ. ಲಿಂಗಸುಗೂರು ಮತ್ತು ದೇವದುರ್ಗದ ಶಾಸಕರು ನೀರಾವರಿ ಸಚಿವರ ಮೇಲೆ ಒತ್ತಡ ಹೇರಿ ವಾರ ಬಂದಿಯ ದಿನಗಳನ್ನು ಕಡಿತಗೊಳಿಸಿ ಹೆಚ್ಚುವರಿ ನೀರು ಬಿಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಾರೆ.

ಸಂಕಷ್ಟದಲ್ಲಿ ರೈತರು

ಸಿರವಾರ: ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗದ 92 ನೇ ವಿತರಣಾ ಉಪ ಕಾಲುವೆಗಳಿಗೆ ಸಮರ್ಪಕ ನೀರು ಹರಿಯದ ಕಾರಣ ಬೆಳೆದ ಭತ್ತ ಒಣಗುತ್ತಿದೆ. ಅಣೆಕಟ್ಟಿನಲ್ಲಿ ಸಮರ್ಪಕ ನೀರು ಸಂಗ್ರಹ ಇರಲಿ ಇಲ್ಲದಿರಲಿ ಮೇಲ್ಭಾಗದ ಅಕ್ರಮ ನೀರಾವರಿಯಿಂದಾಗಿ ಕೊನೆಯ ಭಾಗಕ್ಕೆ ಪ್ರತಿ ಬಾರಿಯೂ ಪ್ರತಿಭಟನೆ ಮಾಡಿಯೇ ನೀರು ಪಡೆಯುವ ಸ್ಥಿತಿ ಇದೆ.

ಹೋರಾಟ ಮಾಡಿದಾಗ ಮಾತ್ರ ಎರಡು ದಿನ ಉಪ ಕಾಲುವೆಗಳಿಗೆ ನೀರು ಹರಿಸಿ ನಂತರ ಮತ್ತೆ ನೀರು ಕಾಣೆಯಾಗುವುದು ಸಾಮಾನ್ಯವಾಗಿದೆ ಎಂದು ಭಾಗ್ಯನಗರ ಕ್ಯಾಂಪ್‌ನ ರೈತ ರೇವಣಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸುತ್ತಾರೆ

ಕಾಮಗಾರಿ ಅಪೂರ್ಣ, ನೀರಾವರಿ ಸೌಲಭ್ಯ ಮರೀಚಿಕೆ

ಕವಿತಾಳ: ಸೈದಾಪುರ, ಗುಡದಿನ್ನಿ ಮತ್ತು ಮಲ್ಲಟ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 9ಎ ಕಾಲುವೆ ಕಾಮಗಾರಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದು ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

2006ರಲ್ಲಿ ಆರಂಭವಾದ 9ಎ ವಡವಟ್ಟಿ ಶಾಖಾ ಕಾಲುವೆ ಕಾಮಗಾರಿ ಬಹುತೇಕ ಪೂರ್ಣಗೊಂಡು ಮೂರು ವರ್ಷಗಳಿಂದ ಕಲಂಗೇರಿ ಗ್ರಾಮದ ವರೆಗೆ ನೀರು ಹರಿಸಲಾಗಿದೆ. ಕಾಲುವೆ ನಿರ್ಮಾಣ ಸ್ಥಳದಲ್ಲಿ ಅಧಿಕ ಸಾಮರ್ಥ್ಯದ ವಿದ್ಯುತ್‍ ತಂತಿ ಹಾಯ್ದು ಹೋಗಿರುವುದು, ಅರಣ್ಯ ಇಲಾಖೆ ಜಾಗದಲ್ಲಿ ಕಾಲುವೆ ನಿರ್ಮಾಣ ಮಾಡುತ್ತಿರುವುದು ಮತ್ತು ರೈತರಿಗೆ ಭೂ ಪರಿಹಾರ ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ಅಲ್ಲಲ್ಲಿ ಕಾಮಗಾರಿ ಸ್ಥಗಿತವಾಗಿ ನೀರಾವರಿ ಸೌಲಭ್ಯ ಮರಿಚೀಕೆಯಾಗಿದೆ.

‘ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು’ ಎಂದು ದುರುಗಪ್ಪ ಹಿಂದಿನಮನಿ, ಬಸಪ್ಪ ಕಲಂಗೇರಿ, ನಾಗಪ್ಪ ಛಲವಾದಿ ಮತ್ತು ವೆಂಕಟೇಶ ಆಗ್ರಹಿಸುತ್ತಾರೆ.

‘ಜಮೀನಿನಲ್ಲಿ ಕಾಲುವೆ ಹಾಯ್ದು ಹೋಗಿದ್ದು ಸೂಕ್ತ ಪರಿಹಾರ ನೀಡಿಲ್ಲ ಮತ್ತು ನೀರು ಹರಿಸದ ಕಾರಣ ಗಿಡಗಳು ಬೆಳೆದು ಕಾಲುವೆ ಹಾಳಾಗಿದೆ. ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಬೇಕು ಮತ್ತು ಪರಿಹಾರ ಹಣ ಬಿಡುಗಡೆ ಮಾಡಬೇಕು’ ಎಂದು ರೈತರಾದ ತಿಮ್ಮಣ್ಣ ಯಾದವ, ದಾವಲ್‌ಸಾಬ್ ಅನ್ವರಿ ಮನವಿ ಮಾಡುತ್ತಾರೆ.

ಕೋಟ್ಯಂತರ ಹಣ ಖರ್ಚಾದರೂ ನೀರು ಬಂದಿಲ್ಲ

ಲಿಂಗಸುಗೂರು: ರೈತರ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಾದ ನಾರಾಯಣಪುರ ಬಲದಂಡೆ ನಾಲೆ ಮತ್ತು ರಾಂಪೂರ ಏತ ನೀರಾವರಿ ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆ ವ್ಯಾಪ್ತಿ ಕಾಲುವೆಗಳ ನಿರ್ವಹಣೆ ಸಮಸ್ಯೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಕಡದರಗಡ್ಡಿ, ಜಲದುರ್ಗ, ಗುಂತಗೋಳ, ಅಂಕನಾಳ–ಉಪನಾಳ, ವ್ಯಾಕರನಾಳ ಸೇರಿದಂತೆ ಕೆರೆ
ನೀರಾವರಿ ಯೋಜನೆಗಳು ಭಾಗಶಃ ವಿಫಲಗೊಂಡಿವೆ. ಯೋಜನೆಗಳ ಹೆಸರಲ್ಲಿ ಕೋಟ್ಯಂತರ ಹಣ ಖರ್ಚು ಆಗಿದ್ದರೂ ಹನಿ ನೀರು ಬಂದಿಲ್ಲ.

ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಆರಂಭದಿಂದ ಇಂದಿನವರೆಗೂ ತಾಲ್ಲೂಕಿನ ಕೆಲ ನೀರಾವರಿ ಪ್ರದೇಶಗಳ ಜಮೀನಿಗೆ ನೀರು ತಲುಪಿಲ್ಲ. ರಾಂಪೂರ ಏತ ನೀರಾವರಿ ಯೋಜನೆಯೇ ಸ್ಥಿತಿಯೂ ಹೀಗೆ ಇದೆ.

ನೀರಾವರಿ ಯೋಜನೆಗಳ ಮುಖ್ಯ ಕಾಲುವೆ ಹೊರತು ಪಡಿಸಿ ವಿತರಣಾ ನಾಲೆ, ಹೊಲ ಕಾಲುವೆಗಳು ಹೂಳು ತುಂಬಿ ಗಿಡಗಂಟಿಗಳು ಬೆಳೆದು ನಿಂತಿದೆ ಎಂದು ರೈತರಾದ ಶಂಕರಪ್ಪ ಗುಡದನಾಳ, ಶಿವಪ್ಪ ಕೋಠ ಹೇಳುತ್ತಾರೆ.

‘ನಾರಾಯಣಪುರ ಬಲದಂಡೆ ನಾಲೆ ಅಧುನೀಕರಣ ಕಾಮಗಾರಿ ವೈಫಲ್ಯ ಹಾಗೂ ರಾಂಪೂರ ಏತ ನೀರಾವರಿ ಯೋಜನೆ ಅನುಷ್ಠಾನ ವೈಫಲ್ಯಗಳಿಂದಾಗಿ ರೈತರು ಪರದಾಡುವಂತಾಗಿದೆ. ರೈತರ ಜಮೀನಿಗೆ ನೀರು ಹರಿಸುವುದಕ್ಕಿಂತ ಗುತ್ತಿಗೆದಾರರ ಅನುಕೂಲಕ್ಕೆ ಆದ್ಯತೆ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪುತ್ರಗೌಡ ನಂದಿಹಾಳ ಆರೋಪಿಸುತ್ತಾರೆ.

ಒಣಗುತ್ತಿರುವ ಬೆಳೆ; ನೀರಿಗಾಗಿ ನಿತ್ಯ ಪರದಾಟ

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ ವಿವಿಧ ವಿತರಣಾ ಕಾಲುವೆಯ ಕೊನೆ ಭಾಗದಲ್ಲಿರುವ ರೈತರು ನೀರಿಗಾಗಿ ಪರದಾಡುತ್ತಿರುವುದು ಸಾಮಾನ್ಯವಾಗಿದೆ.

ಎಡದಂಡೆ ನಾಲೆಯ 47ನೇ ಮೈಲ್‍ನಿಂದ 60ನೇ ಮೈಲ್‍ನವರೆಗೆ ಸಿಂಧನೂರು ತಾಲ್ಲೂಕಿನ ಜಮೀನುಗಳು ಒಳಪಟ್ಟಿವೆ. ಕಾರಟಗಿ ಉಪ ವಿಭಾಗದ ವ್ಯಾಪ್ತಿಯಲ್ಲಿ 32ನೇ ವಿತರಣಾ ಕಾಲುವೆ ಇದೆ. ಕಾರಟಗಿ ಉಪ ವಿಭಾಗದ ಅಧಿಕಾರಿಗಳೇ ನೀರಿನ ನಿರ್ವಹಣೆ ಮಾಡುತ್ತಾರೆ. 36ನೇ ವಿತರಣಾ ಕಾಲುವೆಯ ಕೊನೆಯ ಭಾಗದ ಕನ್ನಾರಿ, ಬೆಳಗುರ್ಕಿ ಗ್ರಾಮದ ರೈತರಿಗೆ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

‘ಸಾಲಗುಂದಾ, ಕನ್ನಾರಿ, ಬೂದಿವಾಳ ಕ್ಯಾಂಪ್ ರೈತರು ನೀರಿಗಾಗಿ ಕಾದಾಡುತ್ತಾ ಬಂದಿದ್ದಾರೆ. ಈ ವರ್ಷ ಮಳೆ ನಿರೀಕ್ಷೆಗಿಂತ ಕಡಿಮೆಯಾಗಿದೆ. 36 ಮತ್ತು 54ನೇ ವಿತರಣಾ ಕಾಲುವೆಗಳ ವ್ಯಾಪ್ತಿಗೊಳಪಡುವ ರೈತರ ಜಮೀನು ಈ ಬಾರಿ ನೀರು ಕಾಣದಂತಾಗಿದೆ ಎಂದು ರೈತರಾದ ಅಂಬಣ್ಣ ಹಾಗೂ ಲಿಂಗಪ್ಪ ಹೇಳುತ್ತಾರೆ.
‘ಪ್ರತಿವರ್ಷವೂ ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ‘ ಎಂದು 40ನೇ ವಿತರಣಾ ಕಾಲುವೆಗೊಳಪಡುವ 4 ಮತ್ತು 3ನೇ ಮೈಲ್ ಪರಿಸರದಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಯಾರು ಏನು ಹೇಳುತ್ತಾರೆ?

ಹುದ್ದೆಗಳು ಖಾಲಿ ಇರುವ ವರದಿಯನ್ನು ಜಲಸಂಪನ್ಮೂಲ ಇಲಾಖೆಯ ‌ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ - ರಷೀದ್‌ ಖಾನ್ ಸಹಾಯಕ ಎಂಜಿನಿಯರ್ ಮಾನ್ವಿ

ವಿತರಣಾ ಕಾಲುವೆಗಳ ಸ್ವಚ್ಛತೆ ದುರಸ್ತಿ ಹಾಗೂ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಪೂರೈಕೆಗೆ ಅಧಿಕಾರಿಗಳು ಗಮನಹರಿಸಬೇಕು - ಕೆ.ವೈ.ಬಸವರಾಜ ನಾಯಕ ಹಿರೇಕೊಟ್ನೆಕಲ್ ತಾಲ್ಲೂಕು ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಾನ್ವಿ

54(10)/ಎಲ್/2 ಕಾಲುವೆ ವ್ಯಾಪ್ತಿಯಲ್ಲಿರುವ ದಿದ್ದಿಗಿ ಜವಳಗೇರಾ ರಾಮತ್ನಾಳ 55ನೇ ವಿತರಣಾ ಕಾಲುವೆ ವ್ಯಾಪ್ತಿಯ ಭತ್ತ ಜೋಳದ ಬೆಳೆಗಳು ಒಣಗುತ್ತಿವೆ. ಇದಕ್ಕೆ ನೀರಾವರಿ ಅಧಿಕಾರಿಗಳೇ ಹೊಣೆ - ಅಮೀನ್‍ಪಾಷಾ ದಿದ್ದಿಗಿ ರೈತ ಮುಖಂಡ

ಪೂರಕ ಮಾಹಿತಿ: ಬಸವರಾಜ ಭೋಗಾವತಿ, ಮಂಜುನಾಥ ಬಳ್ಳಾರಿ, ಯಮನೇಶ ಗೌಡಗೇರಾ, ಡಿ.ಎಚ್‌.ಕಂಬಳಿ, ಬಸವರಾಜ ನಂದಿಕೋಲಮಠ, ಯಮನೇಶ ಗೌಡಗೇರಾ, ಪಿ.ಕೃಷ್ಣ ಸಿರವಾರ.

ದೇವದುರ್ಗ ತಾಲ್ಲೂಕಿನ ಇಂಗಳದಾಳ ಗ್ರಾಮದ ಕೊನೆಯ ಭಾಗದ ರೈತರ ಹೊಲಗಳಲ್ಲಿನ ಭತ್ತ ಮತ್ತು ಮೆಣಸಿನಕಾಯಿ ಬೆಳೆ ಒಣಗುತ್ತಿದೆ
ಕವಿತಾಳ ಸಮೀಪ ನಿರ್ಮಿಸಿದ 9ಎ ಕಾಲುವೆಯ ದುಃಸ್ಥಿತಿ
ಲಿಂಗಸುಗೂರು ತಾಲ್ಲೂಕಿನ ರಾಂಪೂರ ಏತ ನೀರಾವರಿ ಯೋಜನೆ ವ್ಯಾಪ್ತಿಯ ಹೂಳು ತುಂಬಿದ ವಿತರಣಾ ನಾಲೆಯೊಂದಲ್ಲಿ ಹುಲ್ಲುಕಸ ಬೆಳೆದು ನೀರು ಹರಿಯಲು ತೊಡಕಾಗಿದೆ
ಮಾನ್ವಿ ತಾಲ್ಲೂಕಿನ ತುಂಗಭದ್ರಾ ಎಡದಂಡೆ ನಾಲೆಯ ನಂ.76ನೇ ವಿತರಣಾ ಕಾಲುವೆಯ ದುಃಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.