ಸಿಂಧನೂರು: ಮುಂಗಾರು-ಹಿಂಗಾರು ಮಳೆ ಕೊರತೆಯ ನಡುವೆಯೂ ಬಿಳಿಜೋಳವು ಬರಕ್ಕೆ ಸಡ್ಡು ಹೊಡೆದಿದೆ. ತಾಲ್ಲೂಕಿನ ತುಂಗಭದ್ರಾ ನದಿ ಸಾಲಿನ ಹಳ್ಳಿಗಳು ಸೇರಿದಂತೆ ಗಡಿ ಭಾಗದ ಹಳ್ಳದ ವ್ಯಾಪ್ತಿಯ ಹಲವು ಗ್ರಾಮಗಳ ರೈತರ ಆತಂಕ ದೂರ ಮಾಡಿದೆ.
ತಾಲ್ಲೂಕಿನ ವಿವಿಧ ವಿತರಣಾ ಕಾಲುವೆಗಳ ಕೊನೆ ಭಾಗದಲ್ಲಿ ಬರುವ ಜಮೀನುಗಳಿಗೆ ಪ್ರತಿ ಹಂಗಾಮಿನಲ್ಲಿಯೂ ನೀರಿನ ಕೊರತೆ ಕಾಡುವುದು ಸಾಮಾನ್ಯ. ಈ ಬಾರಿಯೂ ಅಂತಹ ಪರಿಸ್ಥಿತಿ ಉದ್ಭವಿಸಿದ ಸಂದರ್ಭದಲ್ಲಿ ಮೇಲ್ಭಾಗದ ರೈತರ ಮನವೊಲಿಸಿ ಕೆಳ ಭಾಗದ ಕಾಲುವೆಗಳಿಗೆ ನೀರು ಹರಿಸಿದ್ದರಿಂದ ರೈತರಿಗೆ ಅನುಕೂಲವಾಗಿದ್ದು, ಹೈಬ್ರಿಡ್ ಜೋಳ ಹುಲುಸಾಗಿ ಬೆಳೆದಿದೆ.
ಉದ್ಬಾಳ, ಗೋಮರ್ಸಿ, ಮಾಡಶಿರವಾರ, ಬೆಳಗುರ್ಕಿ, ಅಲಬನೂರು, ಹರೇಟನೂರು, ಬಾದರ್ಲಿ, ಗಿಣಿವಾರ ಗ್ರಾಮಗಳ ವ್ಯಾಪ್ತಿಯಲ್ಲಿ ತನೆಯೊಡೆದ ಬಿಳಿಜೋಳ ತೊನೆದಾಡುತ್ತಿದ್ದು, ಹಳ್ಳದ ದಂಡೆಯ ಹಳ್ಳಿಗಳೆಂದೇ ಹೆಸರಾಗಿರುವ ಬನ್ನಿಗನೂರು, ರಾಮತ್ನಾಳ, ದಿದ್ದಿಗಿ, ಯಾಪಲಪರ್ವಿ, ವಲ್ಕಂದಿನ್ನಿ, ರಾಗಲಪರ್ವಿ, ಧುಮತಿ, ಹೆಡಗಿನಾಳ ಗ್ರಾಮಗಳ ಭಾಗದಲ್ಲಿ ಇಳುವರಿಯ ನಿರೀಕ್ಷೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಜೋಳಕ್ಕೆ ಉತ್ತಮ ಬೆಲೆ ಇದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
‘ಮುಂಗಾರಿನಲ್ಲಿ ಸಕಾಲಕ್ಕೆ ಮಳೆ ಬಾರದ ಕಾರಣ ಉಳುಮೆ ಮಾಡಲೇ ಇಲ್ಲ. ಸೆಪ್ಟೆಂಬರ್‌ನಲ್ಲಿ ಮಳೆ ಬಂದ ಕಾರಣ ಜೋಳ ಬಿತ್ತನೆ ಮಾಡಿದ್ದೆವು. ಒಂದೂವರೆ ತಿಂಗಳ ಬೆಳೆ ಇದ್ದಾಗ ಮಳೆ ಹೋಯಿತು. ಕಾಲುವೆಗೆ ನೀರೂ ಇಲ್ಲದಂಗಾಯಿತು. ಬೆಳೆ ಬಾಡಿ ನಿಂತಿತ್ತು. ಈ ವರ್ಷ ಜೋಳದ ಬೆಳೆಯೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೆವು. ಆ ಸಮಯದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಮೇಲ್ಭಾಗದ ರೈತರ ಮನವೊಲಿಸಿ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ನಮ್ಮ ಜಮೀನುಗಳಿಗೆ ನೀರು ತಲುಪಿಸಿದರು. ಆದ್ದರಿಂದ ಜೋಳ ಉತ್ತಮವಾಗಿ ಬೆಳೆದಿದೆ’ ಎಂದು ಯಾಪಲಪರ್ವಿ ಗ್ರಾಮದ ಅರುಣಕುಮಾರ ನಾಯಕ ಹೇಳುತ್ತಾರೆ.
ಮಳೆಯ ಕೊರತೆ, ಕಾಲುವೆಗೆ ನೀರು ತಡವಾಗಿ ಬಂತು. ಹೀಗಾಗಿ ಪಂಪ್‍ಸೆಟ್‍ನಿಂದ ನೀರು ಹರಿಸಿದ್ದರಿಂದ ಉತ್ತಮವಾಗಿ ಜೋಳದ ಬೆಳೆ ಬಂದಿದೆ. ನಮ್ಮ ಪುಣ್ಯಕ್ಕೆ ಪ್ರತಿ ಕ್ವಿಂಟಲ್ ಜೋಳ ₹3500 ಬೆಲೆ ಬಂದಿರುವುದು ಸಂತಸ ತಂದಿದೆವಿರುಪಣ್ಣ ಕುಂಬಾರ ರಾಗಲಪರ್ವಿ ರೈತ
ಹಿರೇಹಳ್ಳಕ್ಕೆ 10 ವರ್ಷಗಳಿಂದ ಪಂಪ್‍ಸೆಟ್ ಅಳವಡಿಸಿದ್ದೇನೆ. ಪ್ರತಿ ವರ್ಷ ಜೋಳ ಬೆಳೆಯುತ್ತಿದ್ದೇವೆ. ಈ ವರ್ಷ ಅತಿಹೆಚ್ಚು ಇಳುವರಿ ಬರುವ ನಿರೀಕ್ಷೆಯಿದೆ. ಧಾರಣೆಯು ಅತಿಹೆಚ್ಚು ಬಂದಿದೆ. ಮಳೆ ಇಲ್ಲದ ಕಾರಣ ಕೆಲವರ ಬೆಳೆ ಒಣಗಿ ಹೋಗಿರುವ ನೋವಿದೆಹಂಪಯ್ಯ ರಾಮಯ್ಯ ಬಾದರ್ಲಿ ರೈತ
ಈ ಬಾರಿ ನೀರಿಲ್ಲದೇ ರೈತರು ತುಂಬಾ ತೊಂದರೆ ಅನುಭವಿಸಿದರು. ಜೊತೆಗೆ ನೀರು ಹರಿಸುವಂತೆ ಬೀದಿಗಿಳಿದು ಹೋರಾಟ ಮಾಡಿದರು. ಇದರಿಂದ ಎಚ್ಚೆತ್ತು ಮೇಲ್ಭಾಗದ ರೈತರನ್ನು ಮನವೊಲಿಸಿ ನಮಗೆ ನೀರು ತಲುಪಿಸಲು ಶಾಸಕ ಹಂಪನಗೌಡ ಬಾದರ್ಲಿ ಅವರು ಪ್ರಯತ್ನ ಮಾಡಿದ್ದಾರೆಮಲ್ಲಯ್ಯ ನಾಯಕ ಬಾದರ್ಲಿ ರೈತ
ಕಳೆದ ವರ್ಷ ಜೋಳದ ದರ ರೂ.2800 ರಿಂದ ರೂ.3 ಸಾವಿರ ವರೆಗೆ ಇತ್ತು. ಈ ವರ್ಷ ಇನ್ನೂ ರಾಶಿಯೇ ಆಗಿಲ್ಲ. ಪ್ರತಿ ಕ್ವಿಂಟಲ್‍ಗೆ ರೂ.3600 ಕ್ಕಿಂತ ಹೆಚ್ಚಿನ ದರ ಕೊಡುವುದಾಗಿ ವ್ಯಾಪಾರಸ್ಥರು ರೈತರ ಮನೆಗೆ ಅಲೆದಾಡುತ್ತಿದ್ದಾರೆ. ಇದು ನಿಜಕ್ಕೂ ಜೋಳ ಬೆಳೆದ ರೈತರಿಗೆ ಸುವರ್ಣ ಅವಕಾಶದೇವೇಂದ್ರಪ್ಪ ಯಾಪಲಪರ್ವಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.