ರಾಯಚೂರು: ಜಿಲ್ಲೆಯಲ್ಲಿ ಕಳೆದ ವರ್ಷ ಮಳೆಯೇ ಸುರಿಯಲಿಲ್ಲ. ಅರಣ್ಯ ಇಲಾಖೆಗೆ ಬರವೇ ಒಂದು ಸವಾಲಾಗಿ ಪರಿಣಮಿಸಿತು. ಆದರೆ, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಬರವನ್ನು ಸಮರ್ಥವಾಗಿ ನಿಭಾಯಿಸಿ ನರ್ಸರಿಗಳಲ್ಲೇ ದೊಡ್ಡ ಸಸಿಗಳನ್ನು ಬೆಳೆಸಿ ಅರಣ್ಯೀಕರಣಗೊಳಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಪ್ರಸಕ್ತ ವರ್ಷ ಜಿಲ್ಲೆಗೆ ಮುಂಗಾರು ಪ್ರವೇಶ ಮಾಡುವ ಮೊದಲೇ ಮಳೆ ಸುರಿದೆ. ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ಈ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು ವಿಶ್ವವಿದ್ಯಾಲಯಗಳ ಆವರಣ, ಕೆಎಸ್‌ಸಿಎ ಕ್ರೀಡಾಂಗಣ, ವೈಟಿಪಿಎಸ್ ಆವರಣದಲ್ಲಿ ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡುತ್ತಿರುವ ಕಾರಣ ಅವು ಸಮೃದ್ಧವಾಗಿ ಬೆಳೆಯುತ್ತಿವೆ.
ಮಂತ್ರಾಲಯ ರಸ್ತೆಯಲ್ಲಿರುವ ರಾಯಚೂರು ವಿಶ್ವವಿದ್ಯಾಲಯ, ಕೆೆೆೆಎಸ್‌ಸಿಎ ಕ್ರೀಡಾಂಗಣ ಹಾಗೂ ಯರಮರಸ್‌ನ ವೈಟಿಪಿಎಸ್ ಆವರಣದಲ್ಲಿ ತಲೆ ಎತ್ತರಕ್ಕೆ ಬೆಳೆದು ನಿಂತಿವೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆವರಣದಲ್ಲಿ ಆಗಲೇ ಮರಗಳು ಬೃಹದಾಕಾರವಾಗಿ ಬೆಳೆದು ಹಸಿರಿನ ಹೊದಿಕೆ ಹಾಕಿವೆ. ಬಿಸಿಲೂರಿನ ಜನರಿಗೆ ನೆರಳನ್ನೂ ಕೊಡುತ್ತಿವೆ.
ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಸರ್ಕಾರಿ ಜಮೀನು, ಶಾಲಾ–ಕಾಲೇಜು, ಸಂಸ್ಥೆಗಳು ಮತ್ತು ರಸ್ತೆಬದಿ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಲಾಗಿದೆ. ಜಿಲ್ಲೆಯ 7 ತಾಲ್ಲೂಕುಗಳಲ್ಲೂ ಒಟ್ಟು 7 ಸಸ್ಯಕ್ಷೇತ್ರಗಳಿವೆ. ಇಲ್ಲಿ ಉತ್ತಮವಾದ ಸಸಿಗಳನ್ನೇ ಬೆಳೆಸಿ ಪೋಷಣೆ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ನೆಡುತೋಪು ನಿರ್ಮಾಣಕ್ಕಾಗಿ ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು 2 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ ವಿಭಾಗದಲ್ಲಿ 1045 ಹೆಕ್ಟೇರ್ ಸರ್ಕಾರಿ ಜಾಗದಲ್ಲಿ ನೆಡುತೋಪು ಬೆಳೆಸಲಾಗಿದೆ. ಅಂದಾಜು 2.10 ಲಕ್ಷ ಸಸಿಗಳನ್ನು ನಾಟಿ ಮಾಡಿ ನೆಡುತೋಪು ನಿರ್ಮಿಸಲಾಗಿದೆ. ಸುಡು ಬಿಸಿಲಿನ ಮಧ್ಯೆಯೂ ಗಿಡಗಳು ಉತ್ತಮವಾಗಿ ಬೆಳೆದಿವೆ. ಸರಾಸರಿ ಶೇಕಡ 70ರಿಂದ 75ರಷ್ಟು ಸಸಿಗಳು ಬದುಕಿ ಉಳಿದಿವೆ.
‘ಪ್ರಸಕ್ತ ವರ್ಷ ಜೂನ್ ಆರಂಭದಲ್ಲಿಯೇ 185 ಹೆಕ್ಟೇರ್‌ನಲ್ಲಿ 52 ಸಾವಿರ ಸಸಿಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ. ರಾಯಚೂರು ತಾಲ್ಲೂಕಿನ ವ್ಯಾಪ್ತಿಯ ಯರಗೇರಾ, ರಾಯಚೂರು ವಿಶ್ವವಿದ್ಯಾಲಯ ಆವರಣ, ಕ್ರಿಕೆಟ್ ಸ್ಟೇಡಿಯಂ ಆವರಣ, ವೈಟಿಪಿಎಸ್ ಆವರಣ, ಆರ್‌ಟಿಪಿಎಸ್ ಆವರಣ, ಮಸ್ಕಿ ತಾಲ್ಲೂಕಿನ ಗುಂಡಾ, ಮಾನ್ವಿ ತಾಲ್ಲೂಕಿನ ನೀರಮಾನ್ವಿ ಮತ್ತು ದೇವದುರ್ಗ ತಾಲ್ಲೂಕಿನ ಗೋವಿಂದಪಲ್ಲಿ ವ್ಯಾಪ್ತಿಯಲ್ಲಿ ಸುಮಾರು 104 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ನಿರ್ಮಾಣ ಮಾಡಲಾಗಿದೆ‘ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸುರೇಶಬಾಬು ತಿಳಿಸಿದರು.
‘ಮೊದಲು ಚಿಕ್ಕ ಚಿಕ್ಕ ಸಸಿಗಳನ್ನು ನೆಡುತ್ತಿದ್ದ ಕಾರಣ ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ಅವು ಒಣಗಿ ಬಿಡುತ್ತಿದ್ದವು. ಹೀಗಾಗಿ ನಾವು ಹೊಸ ಪ್ರಯೋಗ ಮಾಡಿ ಕನಿಷ್ಠ 7 ಅಡಿ ಬೆಳೆದ ದೊಡ್ಡಗಿಡಗಳನ್ನೇ ನೆಡಲು ಶುರು ಮಾಡಿದೆವು. ಗಿಡದ ಸುತ್ತಲೂ ಇಂಗು ಗುಂಡಿ ನಿರ್ಮಿಸಲಾಯಿತು. ಮಳೆ ಬಂದಾಗಲೆಲ್ಲ ಅದರಲ್ಲಿ ಸಹಜವಾಗಿ ನೀರು ಸಂಗ್ರಹವಾಗುತ್ತಿದೆ. ಗಿಡಗಳಿಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿದೆ‘ ಎಂದು ವಿವರಿಸಿದರು.
‘ಜೂನ್ ಆರಂಭದಲ್ಲೇ ದೊಡ್ಡ ಗಿಡಗಳನ್ನು ಬೆಳೆಸಿರುವ ಕಾರಣ ಆರು ತಿಂಗಳ ವೇಳೆಗೆ ಗಿಡಗಳ ಬೇರು ನೆಲದಲ್ಲಿ ಆಳವಾಗಿ ಇಳಿಯುತ್ತಿವೆ. ಬೇಸಿಗೆಯಲ್ಲಿ ಒಂದೆರಡು ಬಾರಿ ನೀರು ಕೊಟ್ಟರೆ ಸಾಕು. ಅವು ಬದುಕುತ್ತವೆ‘ ಎಂದು ಹೇಳಿದರು.
‘ತೋಟಗಾರಿಕೆ ಮರಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ. ಕಾಡು ಮರಳಿಗೆ ನೀರಿಲ್ಲದೇ ದೀರ್ಘಕಾಲದವರೆಗೆ ಸಹಿಸಿಕೊಳ್ಳುವ ಶಕ್ತಿ ಇರುತ್ತದೆ. ತಂಪಾದ ವಾತಾವರಣವೂ ಅವುಗಳ ಬೆಳವಣಿಗೆಗೆ ಪೂರಕವಾಗಿರುತ್ತದೆ’ ಎಂದು ತಿಳಿಸಿದರು.
ಅರಣ್ಯ ಇಲಾಖೆಯಿಂದ ರಸ್ತೆ ಪಕ್ಕದಲ್ಲೂ ಸಸಿ ನೆಟ್ಟು ಬೆಳೆಸಲಾಗುತ್ತಿದೆ. ಕೆಲವು ರೈತರು ಹೊಲದಲ್ಲಿ ಮರದ ನೆರಳು ಬಿದ್ದರೆ ಬೆಳೆ ಚೆನ್ನಾಗಿ ಬೆಳೆಯುವುದಿಲ್ಲ ಎನ್ನುವ ತಪ್ಪು ಕಲ್ಪನೆಯಿಂದ ಕಡಿದು ಹಾಕುತ್ತಾರೆ. ದನಗಾಹಿಗಳು ಒಮ್ಮೊಮ್ಮೆ ಕಡಿದು ಜಾನುವಾರುಗಳಿಗೆ ಹಾಕುತ್ತಾರೆ. ಹೀಗಾಗಿ ನಾವು ನಿರೀಕ್ಷಿಸಿದಷ್ಟು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಗ್ರಾಮ ಪಂಚಾಯಿತಿಗಳು, ಸರ್ಕಾರಿ ಇಲಾಖೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಹ ತಮ್ಮ ಕಚೇರಿ ಆವರಣದಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವ ಹೊಣೆ ಹೊತ್ತುಕೊಂಡರೆ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಾಡು ಬೆಳೆಸುವುದು ಕಷ್ಟವೇನಿಲ್ಲ ಎಂದು ವಿವರಿಸುತ್ತಾರೆ.
ರಾಯಚೂರು ಜಿಲ್ಲೆ 8.36 ಲಕ್ಷ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಇದರಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಕೇವಲ 35,148 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಜಿಲ್ಲೆಯ ಭೌಗೋಳಿಕ ಪ್ರದೇಶದ ಶೇಕಡ 4.19ರಷ್ಟು ಮಾತ್ರ ಅರಣ್ಯ ಪ್ರದೇಶಹೊಂದಿದೆ. ಅದೂ ಸಹಿತ ಕುರುಚಲು ಗಿಡಮರಗಳಿಂದ ಕೂಡಿದೆ.
2023ನೇ ಮಳೆಗಾಲದಲ್ಲಿ ವಿವಿಧ ಯೋಜನೆಗಳಡಿ ನೆಡುತೋಪು ನಿರ್ಮಾಣ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. 150 ಹೆಕ್ಟೇರ್ ಪ್ರದೇಶದಲ್ಲಿ 3 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿತ್ತು. ರಾಯಚೂರು, ದೇವದುರ್ಗ, ಲಿಂಗಸುಗೂರು ಹಾಗೂ ಮಾನ್ವಿ ತಾಲ್ಲೂಕಿನಲ್ಲಿ ಟ್ರೀಪಾರ್ಕ್ (ಸಸ್ಯೋದ್ಯಾನ) ನಿರ್ಮಾಣ ಕಡತಗಳಲ್ಲೇ ಉಳಿದುಕೊಂಡಿದೆ.
ಸರ್ಕಾರದ ಮಟ್ಟದಲ್ಲಿ ಉತ್ತಮ ನಿರ್ಧಾರ ಕೈಗೊಂಡರೂ ಜಿಲ್ಲಾ ಮಟ್ಟದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಯೋಜನೆ ಯಶ ಕಾಣುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಪರಿಸರ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಎಷ್ಷು ಅರಣ್ಯ ಪ್ರದೇಶ ವಿಸ್ತರಣೆಯಾಗಿದೆ. ಕಳೆದ ವರ್ಷ ಎಷ್ಷು ಸಸಿಗಳನ್ನು ನೆಡಲಾಗಿದೆ. ಈ ವರ್ಷ ಎಷ್ಟು ಸಸಿಗಳನ್ನು ನೆಡಲಾಗಿದೆ ಎನ್ನುವ ಕುರಿತು ಮಾಧ್ಯಮಗಳಿಗೆ ಮಾಹಿತಿಯನ್ನೂ ಹಂಚಿಕೊಳ್ಳುತ್ತಿಲ್ಲ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ ಮಾಹಿತಿ ಕೊಡುವಂತೆ ನಿರ್ದೇಶನ ನೀಡಿದರೂ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ಸಚಿವರ ಆದೇಶಕ್ಕೆ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಜಿಲ್ಲೆಗೆ ಅಪರೂಪಕ್ಕೆ ಬಂದು ಹೋಗುತ್ತಾರೆ. ಹೀಗಾಗಿ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತವೇ ಇಲ್ಲದಂತಾಗಿದೆ. ಅಭಿವೃದ್ಧಿ ಎನ್ನುವುದು ನೆಲಕಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.