ADVERTISEMENT

ಸಿಂಧನೂರು: ಅರ್ಥಿಂಗ್ ಸಮಸ್ಯೆ - ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 6:27 IST
Last Updated 29 ಮಾರ್ಚ್ 2024, 6:27 IST
ಸಿಂಧನೂರಿನ ವಾರ್ಡ್ ನಂ.19ರ ಶರಣಬಸವೇಶ್ವರ ಕಾಲೊನಿಯಲ್ಲಿ ಅರ್ಥಿಂಗ್ ಸಮಸ್ಯೆಯಿಂದ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿ ಬಂದ್ ಮಾಡಿರುವ ದೃಶ್ಯ
ಸಿಂಧನೂರಿನ ವಾರ್ಡ್ ನಂ.19ರ ಶರಣಬಸವೇಶ್ವರ ಕಾಲೊನಿಯಲ್ಲಿ ಅರ್ಥಿಂಗ್ ಸಮಸ್ಯೆಯಿಂದ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿ ಬಂದ್ ಮಾಡಿರುವ ದೃಶ್ಯ   

ಸಿಂಧನೂರು: ನಗರದ ವಾರ್ಡ್ ನಂ.19ರ ವ್ಯಾಪ್ತಿಗೊಳಪಡುವ ಶರಣಬಸವೇಶ್ವರ ಕಾಲೊನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ.

ಇಲ್ಲಿನ ಕೆಎಂಎಫ್ ಕಚೇರಿಯ ಪಕ್ಕದಲ್ಲಿ ಕಳೆದ 10 ವರ್ಷಗಳ ಹಿಂದೆ ಮಲ್ಲಿಕಾರ್ಜುನ ಪಾಟೀಲ್ ಅವರು ನಗರಸಭೆ ಸದಸ್ಯರಾಗಿದ್ದ ಅವಧಿಯಲ್ಲಿ ಈ ಮಹಿಳಾ ಶೌಚಾಲಯ ನಿರ್ಮಿಸಲಾಗಿತ್ತು. ಇದರ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಪೌರ ಕಾರ್ಮಿಕ ಮಹಿಳೆಯೊಬ್ಬರಿಗೆ ವಹಿಸಿಕೊಟ್ಟು, ಪಕ್ಕದಲ್ಲಿಯೇ ವಾಸಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಎರಡು ವರ್ಷಗಳಿಂದ ಶೌಚಾಲಯದಲ್ಲಿ ವಿದ್ಯುತ್‌ (ಅರ್ಥಿಂಗ್) ಸಮಸ್ಯೆ ಕಾಡುತ್ತಿದೆ. ಶೌಚಕ್ಕೆ ತೆರಳಿದ್ದ ಮಹಿಳೆಯರಿಗೆ ಮತ್ತು ಇದರ ನಿರ್ವಹಣೆ ಮಾಡುವ ಪೌರ ಕಾರ್ಮಿಕ ಸಿಬ್ಬಂದಿಗೂ ಆಗಾಗ್ಗೆ ವಿದ್ಯುತ್ ಹೊಡೆಯುತ್ತಿರುವದರಿಂದ ಶೌಚಾಲಯ ಬಂದ್ ಮಾಡುವುದು, ಕೆಲ ದಿನಗಳ ನಂತರ ಓಪನ್ ಮಾಡುವುದು ಸರ್ವೆಸಾಮಾನ್ಯವಾಗಿದೆ.

ADVERTISEMENT

ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ವಾರ್ಡ್ ನಂ.19ರ ಶರಣಬಸವೇಶ್ವರ ಕಾಲೊನಿ, ರಾಮಕಿಶೋರ ಕಾಲೊನಿ, ವಾರ್ಡ್ ನಂ.20 ಹಾಗೂ ವಾರ್ಡ್ ನಂ.23ರ ಮಹಿಬೂಬಿಯಾ ಕಾಲೊನಿಯ ಮಹಿಳೆಯರಿಗೆ ಶೌಚಕ್ಕೆ ಹೋಗುವುದಕ್ಕೆ ತೀವ್ರ ತೊಂದರೆಯಾಗಿದೆ. ಸತ್ಯಗಾರ್ಡನ್, ಕೊಡದ ಫ್ಯಾಕ್ಟರಿ, ಪಿವಿಆರ್ ಕಾಂಪ್ಲೆಕ್ಸ್ ಬಳಿ ಬೆಳೆದು ನಿಂತಿದ್ದ ಜಾಲಿಗಿಡ, ಮುಳ್ಳುಕಂಟಿಗಳ ಪೊದೆಗಳತ್ತ ಮಹಿಳೆಯರು ಬಹಿರ್ದೆಸೆಗೆ ತೆರಳುತ್ತಿದ್ದರು. ಆದರೆ ಜಾಲಿಗಿಡಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ನಿವೇಶನಗಳಿಗೆ ವಿನ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಬಹಿರ್ದೆಸೆಗೆ ಎತ್ತ ಹೋಗಬೇಕೆಂಬುದೇ ಮಹಿಳೆಯರಿಗೆ ದೊಡ್ಡ ಚಿಂತೆಯಾಗಿದೆ.

ಕೂಡಲೇ ನಗರಸಭೆ ಪೌರಾಯುಕ್ತರು ಎಚ್ಚೆತ್ತುಕೊಂಡು ವಿದ್ಯುತ್‌ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿ, ಸಮರ್ಪಕವಾಗಿ ನೀರಿನ ವ್ಯವಸ್ಥೆ ಕಲ್ಪಿಸಿ, ಸುಣ್ಣ-ಬಣ್ಣ ಬಳಿದು ಶೌಚಾಲಯ ಆರಂಭ ಮಾಡಬೇಕು. ಜೊತೆಗೆ ಶೌಚಾಲಯದ ಹಿಂದೆ ಸುಣ್ಣದ ಹಳ್ಳವಿದ್ದು, ಅದರಲ್ಲಿ ಮೂಲಮೂತ್ರ, ಕಸದ ರಾಶಿ, ಚರಂಡಿ ನೀರು ಸಂಗ್ರಹವಾಗಿ ದುರ್ನಾತ ಪ್ರದೇಶವಾಗಿ ಮಾರ್ಪಟ್ಟಿದೆ. ಬೃಹತ್ಕಾರದಲ್ಲಿ ಜಾಲಿಗಿಡಗಳು ಬೆಳೆದು ನಿಂತಿವೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇದನ್ನು ಸ್ವಚ್ವಗೊಳಿಸಿ, ಅರ್ಧಕ್ಕೆ ಮಾಡಿರುವ ಚರಂಡಿಯನ್ನು ಪೂರ್ಣಗೊಳಿಸಬೇಕು ಎಂದು ನಿವಾಸಿಗಳಾದ ಚೇತನ್, ದುರುಗಪ್ಪ, ಯಮನೂರ, ಇಸ್ಮಾಯಿಲ್, ಲಕ್ಷ್ಮಿ, ರೇಣುಕಮ್ಮ, ಶಾಹೀನಾ, ಫರ್ವಿನ್ ಒತ್ತಾಯಿಸಿದ್ದಾರೆ.

ಸಿಂಧನೂರಿನ ವಾರ್ಡ್ ನಂ.19ರ ಶರಣಬಸವೇಶ್ವರ ಕಾಲೊನಿಯಲ್ಲಿರುವ ಮಹಿಳಾ ಶೌಚಾಲಯದ ಹಿಂಬದಿಯ ಸುಣ್ಣದ ಹಳ್ಳದಲ್ಲಿ ಚರಂಡಿ ನೀರು ಕಸದರಾಶಿ ಬಿದ್ದು ದುರ್ನಾತ ಪ್ರದೇಶವಾಗಿರುವುದು
‘ಅರ್ಥಿಂಗ್ ಸಮಸ್ಯೆ ನಿವಾರಣೆ ಸೇರಿದಂತೆ ಹೊಸ ನಳಗಳ ಜೋಡಣೆ, ನೀರಿನ ಸರಬರಾಜಿಗಾಗಿ ಪೈಪ್‍ಲೈನ್‍ಗಳ ಜೋಡಣೆ ಕೆಲಸಗಳನ್ನು ಮಾಡಲಾಗುತ್ತಿದೆ. ಇನ್ನೂ ಸುಣ್ಣ ಬಣ್ಣ ಬಳೆಯುವ ಕೆಲಸ ಬಾಕಿಯಿದೆ. ಒಂದು ವಾರದಲ್ಲಿ ಈ ಶೌಚಾಲಯ ಆರಂಭಿಸಲಾಗುವುದು.
-ಎಚ್.ಬಾಷಾ ಸದಸ್ಯ ನಗರಸಭೆ
ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಕುರಿತು ತಮ್ಮ ಗಮನಕ್ಕಿಲ್ಲ. ತಕ್ಷಣವೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಜೊತೆಗೆ ಅಗತ್ಯ ಮೂಲಸೌಲಭ್ಯವನ್ನು ಕಲ್ಪಿಸಲಾಗುವುದು.
- ಮಂಜುನಾಥ ಗುಂಡೂರು, ಪೌರಾಯುಕ್ತ ನಗರಸಭೆ
ನೂರಾನಿ ಮಸ್ಜೀದ್ ಹತ್ತಿರ ಆರು ತಿಂಗಳಾದರೂ ಚರಂಡಿ ತ್ಯಾಜ್ಯ ತೆಗೆದಿರಲಿಲ್ಲ. ಮೊನ್ನೆ ವಿಲೇವಾರಿ ಮಾಡಿದ್ದಾರೆ. ಈ ಶೌಚಾಲಯ ಸಮಸ್ಯೆ ನಾಲ್ಕೈದು ವರ್ಷಗಳಿಂದ ಇದೆ. ಅನೇಕ ಬಾರಿ ನಗರಸಭೆ ಅಧಿಕಾರಿಗಳ, ಸದಸ್ಯರ ಗಮನಕ್ಕೆ ತರಲಾಗಿದ್ದರೂ ತಲೆ ಕೆಡಿಸಿಕೊಂಡಿಲ್ಲ. ಈಗ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಶೌಚಕ್ಕಾಗಿ ಜಾಲಿ ಗಿಡಗಳನ್ನು ಹುಡುಕಬೇಕಾದ ದುಸ್ಥಿತಿಯಿದೆ.
-ಭೀಮಮ್ಮ ವಾರ್ಡಿನ ನಿವಾಸಿ, ಡಿ.ಎಚ್.ಕಂಬಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.