ರಾಯಚೂರು: ಅಕ್ರಮ ಮದ್ಯ ಮಾರಾಟ ನಿಷೇಧಿಸಲು ಹೈಕೋರ್ಟ್ ಆದೇಶ ಅನುಷ್ಠಾನ ಮಾಡಬೇಕು ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯಿಂದ ಮಹಿಳೆಯರು ನಗರದಲ್ಲಿ ರಾಜ್ಯಮಟ್ಟದ ಹಗಲಿರುಳು ಧರಣಿ ಮುಂದುವರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದ ಪ್ರವೇಶ ದ್ವಾರದಲ್ಲಿ ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಮನವಿ ಪಡೆದರು.
ಅಕ್ರಮ ಮದ್ಯ ಮಾರಾಟ ಎಲ್ಲೆಲ್ಲಿ ನಡೆಯುತ್ತಿದೆ ಎನ್ನುವ ಮಾಹಿತಿ ನೀಡಿದರೆ ಅಬಕಾರಿ ಪೊಲೀಸರನ್ನು ಕಳುಹಿಸಲಾಗುವುದು. ಆದರೂ ಅಕ್ರಮ ಸ್ಥಗಿತವಾಗಿಲ್ಲ ಎನ್ನುವ ಅನುಮಾನ ಇದ್ದರೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮಾಹಿತಿ ಕೊಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವ ಬಗ್ಗೆ ಮಹಿಳಾ ನಿಯೋಗದೊಂದಿಗೆ ಚರ್ಚಿಸುವುದಕ್ಕೆ ಮುಖ್ಯಮಂತ್ರಿ ಅವರಿಂದ ಸಮಯಾವಕಾಶ ಕೊಡಿಸಬೇಕು ಎಂದು ಧರಣಿ ನಿರತರು ಬೇಡಿಕೆ ಇಟ್ಟರು.
'ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯೊಂದಿಗೆ ಮತನಾಡಿ ತಿಳಿಸಲಾಗುವುದು' ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯೆ ನೀಡಿದರು.
'ಧರಣಿ ಇಲ್ಲಿಗೆ ಸ್ಥಗಿತ ಆಗುವುದಿಲ್ಲ. ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗೆ ಕಳವಳವಿಲ್ಲ. ಬಿಸಿಲು, ಚಳಿ ಲೆಕ್ಕಿಸದೆ ಧರಣಿ ನಡೆಸುತ್ತಿರುವ ಮಹಿಳೆಯರ ಬಗ್ಗೆ ಕಾಳಜಿ ಇದ್ದಂತಿಲ್ಲ. ಕಾದು ನೋಡುತ್ತೇವೆ. ಸಿಎಂ ಭೇಟಿಗೆ ಅವಕಾಶ ಮಾಡಿಕೊಡುವವರೆಗೆ ಧರಣಿ ಮುಂದುವರಿಸಲಾಗುವುದು ' ಸಂಘಟನೆಯ ರಾಜ್ಯ ಸಂಚಾಲಕಿ ಸ್ವರ್ಣಾ ಭಟ್ 'ಪ್ರಜಾವಾಣಿ'ಗೆ ತಿಳಿಸಿದರು.
ಇದನ್ನೂ ನೋಡಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.