ADVERTISEMENT

ಮಹಿಳೆಯರು ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಟಿ ರೋಣಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 15:30 IST
Last Updated 1 ಫೆಬ್ರುವರಿ 2024, 15:30 IST
ರಾಯಚೂರಿನ ಆಶಾಪೂರು ರಸ್ತೆಯಲ್ಲಿರುವ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಯಲ್ಲಿ  ಮಹಿಳೆಯರಿಗೆ ಘನತ್ಯಾಜ್ಯ ಕಸ ವಿಲೇವಾರಿ ವಾಹನ ಚಾಲನೆ ಮಾಡುವ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಉದ್ಘಾಟಿಸಿದರು.
ರಾಯಚೂರಿನ ಆಶಾಪೂರು ರಸ್ತೆಯಲ್ಲಿರುವ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಯಲ್ಲಿ  ಮಹಿಳೆಯರಿಗೆ ಘನತ್ಯಾಜ್ಯ ಕಸ ವಿಲೇವಾರಿ ವಾಹನ ಚಾಲನೆ ಮಾಡುವ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಉದ್ಘಾಟಿಸಿದರು.   

ರಾಯಚೂರು: ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಅದರ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಸಲಹೆ ನೀಡಿದರು. 

ನಗರದ ಆಶಾಪೂರು ರಸ್ತೆಯಲ್ಲಿರುವ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸವಂರ್ಧನ ಸಂಸ್ಥೆ, ಜಿಲ್ಲಾ ಪಂಚಾಯಿತಿ  ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಘನತ್ಯಾಜ್ಯ ಕಸ ವಿಲೇವಾರಿ ವಾಹನ ಚಾಲನೆ ಮಾಡುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಹನ ಚಾಲನಾ ತರಬೇತಿಗೆ ಆಯ್ಕೆಯಾದ ಮಹಿಳೆಯರು ಎದೆಗುಂದದೇ ಯಾವುದರಲ್ಲಿಯೂ ಕಮ್ಮಿಯಿಲ್ಲ ಎಂಬಂತೆ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ವಾಹನ ಚಲಾಯಿಸಬೇಕು ಎಂದರು.

ADVERTISEMENT

ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಭದ್ರತೆ, ಸ್ವಾವಲಂಬಿ ಬದುಕು, ಸಬಲೀಕರಣಕ್ಕಾಗಿ ಸ್ವ ಸಹಾಯ ಗುಂಪಿನ ಸದಸ್ಯರಿಗೆ ವಾಹನ ಚಾಲನೆ ತರಬೇತಿ ನೀಡುವ ಮೂಲಕ ಜಿಲ್ಲಾ ಪಂಚಾಯಿತಿ ಮತ್ತೊಂದು ಮಹತ್ವದ ಹೆಜ್ಜೆಯತ್ತ ಸಾಗಿದೆ. ಈಗಾಗಲೇ 7 ತಾಲ್ಲೂನಲ್ಲಿ ಮಹಿಳೆಯರಿಗೆ ವಾಹನ ಚಾಲನೆಯ ತರಬೇತಿ ನೀಡಿ, ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆಯ ಸ್ವಚ್ಛ ವಾಹಿನಿಗಳಿಗೆ, ತರಬೇತಿ ಪಡೆದ ಮಹಿಳಾ ವಾಹನ ಚಾಲಕಿಯರನ್ನು ತೊಡಗಿಸಿಕೊಳ್ಳುವಂತೆ ಅವಕಾಶ ಕಲ್ಪಿಸಿ ಕೊಡಲಾಗಿದೆ.

ವಾಹನ ಚಾಲಕಿಯರಿಗೆ ಗ್ರಾಮ ಪಂಚಾಯಿತಿಯಿಂದ ಪುರುಷರಿಗೆ ನೀಡುವಷ್ಟು ವೇತನ ಮಹಿಳೆಯರಿಗೂ ಸಮಾನವಾಗಿ ನೀಡಲಾಗುತ್ತಿದೆ.  ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಹಂತ-ಹಂತವಾಗಿ ಚಾಲನಾ ಕಾರ್ಯಕ್ಕೆ ಶೀಘ್ರ ಅಣಿಗೊಳಿಸುವಾಗುವುದು ಎಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯ ಕಾಟೋಕರ ಮಾತನಾಡಿ, ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವ ಮೂಲಕ ರಸ್ತೆ ಅಪಘಾತ ತಡೆಗಟ್ಟಬೇಕು ಹಾಗೂ ಜೀವ ರಕ್ಷಿಸಿಕೊಳ್ಳಬೇಕು.  ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಬೇಕು ಎಂದರು.

ಎನ್.ಆರ್.ಎಲ್.ಎಂ ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ ಮಾತನಾಡಿದರು. ಇದೇ ವೇಳೆ ಸ್ವಚ್ಛತಾ ಸಖಿರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಎಸ್.ಬಿ.ಐ ಲೀಡ್ ಬ್ಯಾಂಕ್ ಮ್ಯಾನೇಜರ್ ರವಿ ಉಪ್ಪಾರ, ಆರ್.ಸೆ.ಟಿ ನಿರ್ದೇಶಕ ವಿಜಯ ಕುಮಾರ ಬಡಿಗೇರ,  ತರಬೇತುದಾರ ಅಶ್ವಿನಿ, ತಾರನಾಥ ಹಾಗೂ ಮಹಿಳೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.