ರಾಮನಗರ: ಕನ್ನಡದ ಸುಪ್ರಸಿದ್ದ ಸಾಹಿತಿ ಡಾ.ಜಿ.ಪಿ. ರಾಜರತ್ನಂ ಅವರ ಜನಿಸಿ ಇಂದಿಗೆ (ಡಿ.5 2014) 106 ವರ್ಷಗಳು ತುಂಬುತ್ತವೆ.
ಇವರು ಜನಿಸಿದ್ದು 1908ರ ಡಿ.5ರಂದು. ಅಂದು ಕ್ಲೋಸ್ಪೇಟೆ ಎಂದು ಕರೆಯಲ್ಪಡುತ್ತಿದ್ದ ರಾಮನಗರದಲ್ಲಿ.
ರಾಮನಗರದಲ್ಲಿ ಜನಿಸಿ ನಾಡಿನಾದ್ಯಂತ ಸಾಹಿತ್ಯದ ಕಂಪು ಬೀರಿದ ರಾಜರತ್ನಂ ಅವರನ್ನು ರಾಮನಗರದ ಜನತೆಯೆ ಮರೆಯುತ್ತಿದ್ದಾರೆ.
ಜಿ.ಪಿ. ಎಂದರೆ ಗುಂಡ್ಲುಪಂಡಿತ. ರಾಜರತ್ನಂ ಅವರ ವಂಶಸ್ಥರಾದ ಹಿರಿಯರೊಬ್ಬರು ಹಿಂದೆ ತಮಿಳುನಾಡಿನಿಂದ ಬಂದು ಗುಂಡ್ಲು ಎಂಬ ಊರಿನಲ್ಲಿ ಆಯುರ್ವೇದ ಪಂಡಿತರಾಗಿದ್ದರು. ಅವರನ್ನು ಜನ ಗುಂಡ್ಲುಪಂಡಿತ ಎಂಬುದಾಗಿ ಕರೆಯುತ್ತಿದ್ದರು. ಅದೇ ಹೆಸರು ರಾಜರತ್ನಂ ಅವರ ಹೆಸರಿಗೆ ಜಿ.ಪಿ. ಎನ್ನುವ ಸಂಕ್ಷಿಪ್ತ ರೂಪದಲ್ಲಿ ಸೇರಿಕೊಂಡಿತೆಂದೂ ತಿಳಿದು ಬರುತ್ತದೆ. ಆದ್ದರಿಂದಲೇ ಇವರು ಗುಂಡ್ಲು ಪಂಡಿತ ರಾಜರತ್ನಂ ಆಗಿದ್ದಾರೆ.
ರಾಜರತ್ನಂ ಅವರ ಮಾತೃಭಾಷೆ ತಮಿಳು. ಆದರೆ ಕನ್ನಡ ಪರಿಚಾರಿಕೆಗಾಗಿ ಇವರು ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿದ್ದರು. ಇವರಿಗೆ ಕನ್ನಡದ ಬಗ್ಗೆ ಇದ್ದ ಅಭಿಮಾನ ಅಪಾರ.
ಕನ್ನಡದ ಬಗ್ಗೆ ಅಸದೃಶ ಅಭಿಮಾನ ಇರಿಸಿಕೊಂಡಿದ್ದ ರಾಜರತ್ನಂ ಅವರು ಇಂಗ್ಲಿಷ್, ಹಿಂದಿ, ಸಂಸ್ಕೃತ, ತೆಲುಗು, ಪಾಳಿ, ಪ್ರಾಕೃತ ಭಾಷೆಗಳಲ್ಲಿಯೂ ಪಾಂಡಿತ್ಯ ಪಡೆದಿದ್ದರು.
ರಾಜರತ್ನಂ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಸೃಜನಶೀಲ ಕೃತಿಗಳೆಂದರೆ ರತ್ನನ ಪದಗಳು, ನಾಗನ ಪದಗಳು. ಸೃಜನಶೀಲ ಸಾಹಿತ್ಯ ರಚನೆಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಸಾಹಿತ್ಯ ಪರಿಚಾರಕರಾಗಿ ಕನ್ನಡ ಪುಸ್ತಕಗಳನ್ನು ಹೊತ್ತು ನಾಡಿನ ಮೂಲೆ ಮೂಲೆಗೂ ತಲುಪಿಸುವ ಮಹತ್ವದ ಕೆಲಸ ಮಾಡಿದ್ದಾರೆ.
ರಾಜರತ್ನಂ. ಬೌದ್ಧಧರ್ಮ, ಜೈನಧರ್ಮ, ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ಅಂತಃಸತ್ವವನ್ನು ಅತ್ಯಂತ ಸರಳವಾಗಿ, ಪರಿಣಾಮಕಾರಿಯಾಗಿ ಸಹೃದಯ ಸಮೂಹಕ್ಕೆ ಅರ್ಥ ಮಾಡಿಸುವ ನಿಟ್ಟಿನಲ್ಲೂ ಸಕ್ರಿಯವಾಗಿ ದುಡಿದಿದ್ದಾರೆ. ಕಾದಂಬರಿ ಪ್ರಕಾರವೊಂದನ್ನು ಹೊರತುಪಡಿಸಿ ಕಾವ್ಯ, ನಾಟಕ, ಕಥೆ, ವಿಮರ್ಶೆ, ಶಿಶುಸಾಹಿತ್ಯ, ಧಾರ್ಮಿಕ ಸಾಹಿತ್ಯ, ವಿಚಾರ ಸಾಹಿತ್ಯ ಮೊದಲಾದ ಎಲ್ಲ ಪ್ರಾಕಾರಗಳಲ್ಲೂ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯಿಕ ದುಡಿಮೆ ಮಾಡಿದ್ದಾರೆ.
ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಒತ್ತಾಯ: ಡಾ. ಜಿ.ಪಿ. ರಾಜರತ್ನಂ ಕನ್ನಡ ಸಾರಸ್ವತ ಲೋಕ ಕಂಡಂತಹ ಒಬ್ಬ ಅನನ್ಯ ಸಾಹಿತಿ.
ಕಾವ್ಯ, ನಾಟಕ, ಕಥೆ, ಮಕ್ಕಳ ಸಾಹಿತ್ಯ, ಬೌದ್ಧ ಸಾಹಿತ್ಯ, ಜೈನ ಸಾಹಿತ್ಯ, ಇಸ್ಲಾಂ ಸಾಹಿತ್ಯ - ಹೀಗೆ ಬಹುಮುಖಿ ನೆಲೆಯಲ್ಲಿ ರಾಜರತ್ನಂ ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ, ತಮ್ಮನ್ನು ತಾವು ‘ಸಾಹಿತ್ಯ ಪರಿಚಾರಕ’ ಎಂದು ಕರೆದುಕೊಂಡು, ಅದರಂತೆಯೇ ಸಾಹಿತ್ಯ ಸೇವೆಗೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು ರಾಜರತ್ನಂ.
ಪಿ. ಲಂಕೇಶ್, ಕೆ.ಎಸ್. ನಿಸಾರ್ ಅಹಮದ್ ಮೊದಲಾದ ಹಲವು ಸುಪ್ರಸಿದ್ಧ ಸಾಹಿತಿಗಳನ್ನು ಪ್ರೋತ್ಸಾಹಿಸಿ ಅವರನ್ನು ಬೆಳಕಿಗೆ ತಂದ ಶ್ರೇಯಸ್ಸೂ ರಾಜರತ್ನಂ ಅವರಿಗೆ ಸಲ್ಲುತ್ತದೆ ಎಂದು ‘‘ಡಾ.ಜಿ.ಪಿ. ರಾಜರತ್ನ ಅವರ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆಯ ನೆಲೆಗಳು’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿರುವ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಎಲ್.ಸಿ. ರಾಜು ತಿಳಿಸಿದರು.
ಇಂತಹ ಅಪೂರ್ವ ಸಾಹಿತಿ ಜನಿಸಿದ್ದು ರಾಮನಗರದಲ್ಲಿ ಎಂಬುದು ಒಂದು ಅಭಿಮಾನದ ಸಂಗತಿ. ಇಂದು ರಾಮನಗರವು ಜಿಲ್ಲಾ ಕೇಂದ್ರವಾಗಿ ರೂಪುಗೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇಷ್ಟಾದರೂ, ಕನ್ನಡ ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವ ರಾಜರತ್ನಂ ಅವರ ಹೆಸರಿನಲ್ಲಿ ಒಂದಾದರೂ ಸ್ಮಾರಕ ರಾಮನಗರದಲ್ಲಿ ಇಲ್ಲದಿರುವುದೊಂದು ವಿಪರ್ಯಾಸ. ರಾಮನಗರದ ಛತ್ರದ ಬೀದಿಯಲ್ಲಿ ‘ಜಿ.ಪಿ. ರಾಜರತ್ನಂ ವೃತ್ತ’ ಎಂಬ ಬರಹವಿರುವ ಧ್ವಜಸ್ತಂಭವೊಂದನ್ನು ಹೊರತುಪಡಿಸಿ ರಾಜರತ್ನಂ ಅವರ ಹೆಸರಿನ ಯಾವುದೇ ಕುರುಹು ರಾಮನಗರದಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರ ಜನ್ಮದಿನದ ಈ ಸಂದರ್ಭದಲ್ಲಿಯಾದರೂ ಅಪ್ಪಟ ಕನ್ನಡಾಭಿಮಾನಿ ರಾಜರತ್ನಂ ಅವರ ಹೆಸರಿನಲ್ಲಿ ‘ಡಾ. ಜಿ.ಪಿ. ರಾಜರತ್ನಂ ಕನ್ನಡ ಸಾಂಸ್ಕೃತಿಕ ಭವನ’ವನ್ನು ರಾಮನಗರದಲ್ಲಿ ನಿರ್ಮಿಸಲು ಜಿಲ್ಲಾಡಳಿತ ಮನಸ್ಸು ಮಾಡಬೇಕು. ಆ ಮೂಲಕ ಕನ್ನಡ ನಾಡಿನ ಅಪೂರ್ವ ಸಾಹಿತಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.