ಹೊಸಕೋಟೆ: ಹಣ, ಉಡುಗೊರೆ ಪಡೆದು ಮತ ಹಾಕುವುದಾಗಿ ಹೇಳಿ ಆಣೆ ಪ್ರಮಾಣ ಮಾಡಿದ್ದ ಮುಸ್ಲಿಂ ಸಮುದಾಯ ನನಗೆ ಮೋಸ ಮಾಡಿದೆ ಎಂದು ಆರೋಪಿಸಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರ ವಿರುದ್ಧ ಮುಸ್ಲಿಂ ಪೋರಂ ಶುಕ್ರವಾರ ಪ್ರತಿಭಟನೆ ನಡೆಸಿತು.
ತಾಲ್ಲೂಕು ಮುಸ್ಲಿಂ ಪೋರಂನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್-2 ತಹಶೀಲ್ದಾರ್ ಪ್ರಭಾಕರ್ ಅವರಿಗೆ ಮನವಿ ಸಲ್ಲಿಸಿದರು.
2018ರಲ್ಲಿ ಎಂಟಿಬಿ ನಾಗರಾಜ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಸ್ಥಾನ ಅಲಂಕರಿಸಿದ್ದರು. ಮಂತ್ರಿ ಸ್ಥಾನ ಕೊಟ್ಟ ಕಾಂಗ್ರೆಸ್‌ಗೆ ನಾಗರಾಜ್ ಅವರು ಏನು ಕೊಡುಗೆ ನೀಡಲಿಲ್ಲ. ಬದಲಿಗೆ ಪಕ್ಷ ದ್ರೋಹ ಬಗೆದರು. ಅವರನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಕಳುಹಿಸಿದ ಹೊಸಕೋಟೆ ಕ್ಷೇತ್ರದ ಜನತೆಗೆ ಮೋಸ ಮಾಡಿ ರಾತ್ರೋ ರಾತ್ರಿ ಬಾಂಬೆಗೆ ಓಡಿ ಹೋಗಿ ಪಕ್ಷಕ್ಕೆ ದ್ರೋಹ ಮಾಡಿದರು. ಇದು ಕ್ಷೇತ್ರದ ಜನತೆಗೆ ಮಾಡಿದ ಮೋಸ ಅಲ್ಲವೇ ಎಂದು ಪ್ರತಿಭಟನಿರತರು ಪ್ರಶ್ನಿಸಿದರು.
ಮುಖಂಡ ಅಬ್ದುಲ್ ಕದೀರ್ ಮಾತನಾಡಿ, ಸರ್ವ ಧರ್ಮದ ಹಿತ ಕಾಯುವವರು ಎಂದು ನಂಬಿ ಎಂಟಿಬಿ ಅವರನ್ನು ನಂಬಿ ತಾಲ್ಲೂಕಿನ ಜನತೆ ಮತ ಹಾಕಿ ಗೆಲ್ಲಿಸಿದ್ದರು. ಆದರೆ ಅವರು ನಂಬಿಕೆ ದ್ರೋಹ ಮಾಡಿದರು. ಈಗ ಮುಸ್ಲಿಂರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಮತ್ತೊಬ್ಬ ಮುಖಂಡ ಡಾ.ಸೈಯದ್ ಮುಜಮಿಲ್ ಮಾತನಾಡಿ, ಎಂಟಿಬಿ ನಾಗರಾಜ್ ಅವರ ಹೇಳಿಕೆ ಇಡೀ ಮುಸ್ಲಿಂ ಸಮುದಾಯದ ಜನರ ಭಾವನೆಗೆ ಧಕ್ಕೆ ತಂದಿದೆ. ಅವರು ಬಹಿರಂಗವಾಗಿ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ವಕ್ತಾರ ಗಪಾರ್ ಬೇಗ್ ಅವರು ಮಾತನಾಡಿದರು.
ಚಾಂದ್‌ಪಾಷ, ಇಂತಿಯಾಜ್ ಪಾಷ, ಶಂಸೀರ್, ಸಮೀರ್, ಅಯಾಜ್, ನಿಸಾರ್ ಅಹಮದ್, ಸೈಯದ್ ನವಾಜ್, ಇರ್ಷಾದ್ ಅಹಮದ್, ಆಖಿಲ್ ಅಹಮದ್, ಏಜಾಜ್, ಅಪ್ಸರ್ ಪಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.