ADVERTISEMENT

ರಾಮನಗರ ಬಳಿಯ ಜೈಪುರದ ದೇವಸ್ಥಾನದಲ್ಲಿ ಮದುವೆ ಊಟ ಸೇವಿಸಿ 22 ಮಂದಿ ಅಸ್ವಸ್ಥ

ಚನ್ನಪಟ್ಟಣ ಶಾದಿ ಮಹಲ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಘಟನೆ

​ಪ್ರಜಾವಾಣಿ ವಾರ್ತೆ
Published 6 ಮೇ 2024, 15:50 IST
Last Updated 6 ಮೇ 2024, 15:50 IST
<div class="paragraphs"><p>ರಾಮನಗರ ಬಳಿಯ ಜೈಪುರದ ದೇವಸ್ಥಾನದಲ್ಲಿ ಮದುವೆ ಊಟ ಸೇವಿಸಿ 22 ಮಂದಿ ಅಸ್ವಸ್ಥ</p></div>

ರಾಮನಗರ ಬಳಿಯ ಜೈಪುರದ ದೇವಸ್ಥಾನದಲ್ಲಿ ಮದುವೆ ಊಟ ಸೇವಿಸಿ 22 ಮಂದಿ ಅಸ್ವಸ್ಥ

   

ರಾಮನಗರ: ತಾಲ್ಲೂಕಿನ ಜೈಪುರ ಗ್ರಾಮದ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಸೋಮವಾರ ನಡೆದ ಮದುವೆ ಕಾರ್ಯಕ್ರಮದಲ್ಲಿ ಊಟ ಸೇವಿಸಿದ 22ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಸಹ ಇದ್ದಾರೆ.

ಮಧ್ಯಾಹ್ನ ಮದುವೆಯಲ್ಲಿ ಅವರೆಕಾಳು, ಪಾಯಸ, ಅನ್ನ, ಸಾಂಬಾರು ಊಟ ನೀಡಲಾಗಿತ್ತು. ಊಟ ಸೇವಿಸಿದವರಿಗೆ ಸಂಜೆಯ ಹೊತ್ತಿಗೆ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ರಾಮನಗರ ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.

ADVERTISEMENT

‘ಅಸ್ವಸ್ಥರಾದವರಿಗೆ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ. ಗ್ರಾಮಕ್ಕೆ ತೆರಳಿ ಆಹಾರದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿ ಕೊಡಲಾಗುವುದು. ವರದಿ ಬಂದ ಬಳಿಕ ಘಟನೆಗೆ ಕಾರಣ ಗೊತ್ತಾಗಲಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮಾ ‘ಪ್ರಜಾವಾಣಿ’ಗೆ ತಿಳಿಸಿದರು.

145 ಮಂದಿ ಮನೆಗೆ

ಜಿಲ್ಲೆಯ ಚನ್ನಪಟ್ಟಣದ ಸಾತನೂರು ವೃತ್ತದ ಬಳಿಯ ಟಿಪ್ಪು ನಗರದಲ್ಲಿ ಭಾನುವಾರ ಮದುವೆ ಕಾರ್ಯಕ್ರಮದಲ್ಲಿ ಊಟ ಸೇವಿಸಿ ಅಸ್ವಸ್ಥರಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದ 145 ಮಂದಿ ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

‘ಚನ್ನಪಟ್ಟಣದ ವಧು ಹಾಗೂ ಮಾಗಡಿಯ ವರನ ಮದುವೆ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಊಟ ಸೇವಿಸಿ ಐಸ್ ಕ್ರೀಂ ಸೇವಿಸಿದವರಲ್ಲಿ ಸಂಜೆ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಈ ಪೈಕಿ ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಗೆ 60 ಮಂದಿ, ಮಾಗಡಿ ಆಸ್ಪತ್ರೆಗೆ 50 ಹಾಗೂ ರಾಮನಗರ ಜಿಲ್ಲಾಸ್ಪತ್ರೆಗೆ 35 ಮಂದಿ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಎಲ್ಲರೂ ಗುಣಮುಖರಾಗಿದ್ದಾರೆ. ಆಹಾರ ಮತ್ತು ಐಸ್‌ ಕ್ರೀಂ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ. ವರದಿ ಬಂದ ಬಳಿಕ ಅಸ್ವಸ್ಥತೆಗೆ ಕಾರಣ ಗೊತ್ತಾಗಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.