ರಾಮನಗರ: ಜಿಲ್ಲೆಯಲ್ಲಿ ಎಚ್1ಎನ್1 ಜ್ವರ ನಿಧಾನವಾಗಿ ಉಲ್ಬಣಿಸುತ್ತಿದ್ದು, ತಿಂಗಳಲ್ಲಿ ಒಟ್ಟು 4 ಜನರಿಗೆ ಸೋಂಕು ತಗುಲಿದೆ. ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿನ ಹೊಸದೊಡ್ಡಿ ಗ್ರಾಮದ ಪುಟ್ಟಮ್ಮ ಎಂಬ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿಯೂ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ 3 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಜಿಲ್ಲೆಯ ಮೂರು ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಟ್ಯಾಮಿಫ್ಲ್ಯೂ ಮಾತ್ರೆ ಸಹಿತ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಗಳ ವ್ಯವಸ್ಥೆ ಮಾಡಲಾಗಿದೆ. ರೋಗ ಪೀಡಿತರಿಂದ ಗಂಟಲಿನ ಸ್ರಾವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.
ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ (ಪ್ರತಿ ತಾಲ್ಲೂಕಿಗೆ 100 ರಂತೆ) ಚಿಕಿತ್ಸೆಗೆ ಅಗತ್ಯವಿರುವ Oseltamivir 75mg ಮಾತ್ರೆಗಳನ್ನು ದಾಸ್ತಾನು ಇರಿಸಲಾಗಿದೆ. ಶಂಕಿತರ ಗಂಟಲಿನ ದ್ರವ ಮಾದರಿ ಸಂಗ್ರಹಿಸಲು ಅಗತ್ಯವಿರುವ ವೈರಲ್ ಟ್ರಾನ್ಸ್ ಪೋರ್ಟ್ ಮೀಡಿಯಾ (ವಿ ಟಿ ಮ್ ಅಂಡ್ ಸ್ವಾಬ್) ಗಳು ಆಸ್ಪತ್ರೆಯಲ್ಲಿ ಲಭ್ಯ ಇದೆ.
‘ಪ್ರಕರಣ ವರದಿಯಾದ ತಕ್ಷಣ ರೋಗಿಯ ಮನೆ ಮತ್ತು ಸುತ್ತಮುತ್ತ ಆರೋಗ್ಯ ಕಾರ್ಯಕರ್ತರು ಐಎಲ್ ಐ ಕಲ್ಚರ್ ಬಗ್ಗೆ ಸಕ್ರಿಯ ಸಮೀಕ್ಷೆ ನಡೆಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್. ಪ್ರಸನ್ನಕುಮಾರ್ ತಿಳಿಸಿದರು.
ಜ್ವರ, ಕೆಮ್ಮು, ನೆಗಡಿ ಕಂಡು ಬಂದಲ್ಲಿ ತಕ್ಷಣವೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕಿತರಿಂದ ಇತರರು ಅಂತರ ಕಾಯ್ದುಕೊಳ್ಳಬೇಕು ಎಂದರು.
ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದರೆ ಅಪಾಯದಿಂದ ಪಾರಾಗಬಹುದು ಎಂದು ಸಲಹೆ ನೀಡಿದರು.
ಪ್ರತ್ಯೇಕ ವಾರ್ಡ್ : ಜಿಲ್ಲಾ ಆಸ್ಪತ್ರೆಯಲ್ಲಿ ಎಚ್‌್್1ಎನ್1 ಗೆ ಸಂಬಂಧಿಸಿದಂತೆ 5 ಬೆಡ್‌ಗಳ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ರೋಗವನ್ನು ತಡೆಗಟ್ಟಲು ಆಸ್ಪತ್ರೆಗೆ ಬರುವವರಿಗೆಲ್ಲರಿಗೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಜೆ. ವಿಜಯನರಸಿಂಹ ತಿಳಿಸಿದರು.
ನಿರ್ಲಕ್ಷ್ಯ: ಎಚ್1ಎನ್1 ಜಿಲ್ಲೆಯಲ್ಲಿ ಉಲ್ಬಣಗೊಳ್ಳುತ್ತಿದೆ. ಆದರೆ ಅಧಿಕಾರಿಗಳು ಚುನಾವಣೆಯ ನೀತಿ ಸಂಹಿತೆ ಇದೆ ಎಂದು ಹೇಳಿಕೊಂಡು ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗುತ್ತಿಲ್ಲ ಎಂದು ವಿವೇಕಾನಂದನಗರದ ಸತೀಶ್ ಆರೋಪಿಸಿದರು.
ಈಗಾಗಲೇ ಒಬ್ಬರು ಈ ರೋಗದಿಂದ ಮೃತಪಟ್ಟಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ಗ್ರಾಮಗಳಲ್ಲಿ, ನಗರ ವ್ಯಾಪ್ತಿಯಲ್ಲಿ ಎಚ್1ಎನ್1 ರೋಗವನ್ನು ತಡೆಗಟ್ಟುವ ಯಾವುದೇ ಕಾರ್ಯಕ್ರಮವನ್ನು ರೂಪಿಸಿಲ್ಲ ಎಂದು ದೂರಿದರು.
ಸರ್ಕಾರದ ಸುತ್ತೋಲೆಯ ಪ್ರಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರಗಳನ್ನು ಮಾಡುವಂತೆ ಸರ್ಕಾರದ ಆದೇಶವಿದ್ದರೂ ಸುಮ್ಮನಿದ್ದಾರೆ ಎಂದರು.
ಇದೇ 22ರಿಂದ ಶಾಲೆಗಳು ಪುನಃ ಪ್ರಾರಂಭವಾಗಿವೆ. ಬೆಳಗ್ಗಿನ ಪ್ರಾರ್ಥನಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಎಚ್1ಎನ್1 ಜ್ವರದ ಲಕ್ಷಣಗಳು, ಹರಡುವಿಕೆ, ನಿಯಂತ್ರಣ ಕ್ರಮ ಕುರಿತು ಅರಿವು ಮೂಡಿಸುವ ಪ್ರಯತ್ನ ಆಗಬೇಕು ಎಂದು ಚಾಮುಂಡಿಪುರದ ಚಂದ್ರಶೇಖರ್ ತಿಳಿಸಿದರು.
ರೋಗದ ಲಕ್ಷಣಗಳಿವು
ತೀವ್ರ ಸ್ವರೂಪದ ಜ್ವರ, ಕೆಮ್ಮು ಮತ್ತು ಹಳದಿ ಕಫ, ಉಸಿರಾಟದ ತೊಂದರೆ, ನೆಗಡಿ, ಗಂಟಲು ಕೆರೆತ, ಮೈಕೈ ನೋವು, ಅತಿ ಭೇದಿ, ವಾಂತಿ ಉಂಟಾಗುವುದು ಎಚ್1ಎನ್1 ಲಕ್ಷಣಗಳಾಗಿವೆ ಎಂದು ಆರ್‌ಸಿಎಚ್ ಅಧಿಕಾರಿ ಡಾ.ಆರ್.ಎನ್. ಲಕ್ಷ್ಮೀಪತಿ ತಿಳಿಸಿದರು.
ಕೆಮ್ಮಿದಾಗ, ಸೀನಿದಾಗ ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಇದು ಹರಡುತ್ತದೆ. ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು, ವೈಯುಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಈ ರೋಗ ಹರಡುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ರೋಗ ಪತ್ತೆ ವಿವರ
ತಾಲ್ಲೂಕು ಮಲೇರಿಯ–ಡೆಂಗಿ–ಚಿಕುನ್ ಗುನ್ಯಾ– ಮಿದುಳುಜ್ವರ–ಆನೆಕಾಲು
ಚನ್ನಪಟ್ಟಣ 1– 1– 1– 0 –1–1
ಕನಕಪುರ 1– 2 –0– 1–0– 8
ಮಾಗಡಿ 2 –1– 5– 0– 0–7
ರಾಮನಗರ 2– 7– 1– 1– 0 –26
ಒಟ್ಟು 6 –11 –7–2 –1– 52
(ಜನವರಿ 2018 ರಿಂದ ಸೆಪ್ಟೆಂಬರ್ ವರೆಗೆ ದಾಖಲಾಗಿರುವ ಪ್ರಕರಣಗಳು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.