ADVERTISEMENT

ರಾಮನಗರ | ಡೆಂಗಿ ಆತಂಕ: ಎಲ್ಲೆಡೆ ಕಟ್ಟೆಚ್ಚರ

ಜಿಲ್ಲೆಯಾದ್ಯಂತ 53 ಪ್ರಕರಣ ವರದಿ: ಸ್ವಚ್ಛತೆ ಕುರಿತು ಆರೋಗ್ಯ ಇಲಾಖೆ ಜಾಗೃತಿ

ಓದೇಶ ಸಕಲೇಶಪುರ
Published 4 ಜುಲೈ 2024, 4:28 IST
Last Updated 4 ಜುಲೈ 2024, 4:28 IST
ಡೆಂಗಿ ಹಿನ್ನೆಲೆಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ. ಶಶಿಧರ್ ಹಾಗೂ ಸಿಬ್ಬಂದಿ, ಚನ್ನಪಟ್ಟಣದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ನೀರನ್ನು ಪರಿಶೀಲಿಸಿದರು 
ಡೆಂಗಿ ಹಿನ್ನೆಲೆಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ. ಶಶಿಧರ್ ಹಾಗೂ ಸಿಬ್ಬಂದಿ, ಚನ್ನಪಟ್ಟಣದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ನೀರನ್ನು ಪರಿಶೀಲಿಸಿದರು    

ರಾಮನಗರ: ಮುಂಗಾರು ಮಳೆ ಬೆನ್ನಲ್ಲೇ, ಜಿಲ್ಲೆಯಲ್ಲಿ ಸಾಂಕ್ರಾಮಿಕ ಡೆಂಗಿ ರೋಗದ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯಲ್ಲಿ ಇದುವರೆಗೆ 53 ಪ್ರಕರಣಗಳು ಪತ್ತೆಯಾಗಿದ್ದು, ವರದಿಯಾಗದ ಇನ್ನೂ ಅನೇಕ ಪ್ರಕರಣಗಳಿರುವ ಅನುಮಾನ ವ್ಯಕ್ತವಾಗಿದೆ.

ಜಿಲ್ಲಾ ಕೇಂದ್ರವಾದ ರಾಮನಗರದಲ್ಲೇ ಅತಿ ಹೆಚ್ಚು 16 ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಮಾಗಡಿಯಲ್ಲಿ 14, ಕನಕಪುರ 11, ಚನ್ನಪಟ್ಟಣ 9 ಹಾಗೂ ಹಾರೋಹಳ್ಳಿಯಲ್ಲಿ 3 ಮಂದಿ ಡೆಂಗಿಯಿಂದ ಬಳಲುತ್ತಿದ್ದಾರೆ. ಮಳೆಗಾಲದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ರೋಗದ ನಿಯಂತ್ರಣಕ್ಕೆ ಜಿಲ್ಲಾಡಳಿತವು ವಿವಿಧ ಕ್ರಮಗಳನ್ನು ಕೈಗೊಂಡಿದೆ.

ವಿಶೇಷ ನಿಗಾ: ‘ಜಿಲ್ಲೆಯಾದ್ಯಂತ ವರದಿಯಾಗುವ ಪ್ರಕರಣಗಳನ್ನು ಆಧರಿಸಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ವಿಶೇಷ ನಿಗಾ ಇಟ್ಟು ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ. ರೋಗಿಗಳ ಸಂಖ್ಯೆ ಆಧರಿಸಿ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಆಗಾಗ ಬರುವ ಜ್ವರದ ಕಾರಣಕ್ಕೆ ಆಸ್ಪತ್ರೆಗೆ ಬರುವವರನ್ನು ಕಡ್ಡಾಯವಾಗಿ ರಕ್ತಪರೀಕ್ಷೆ ಮಾಡಿಸಿ, ಡೆಂಗಿ ಕುರಿತು ಖಚಿತಪಡಿಸಿಕೊಳ್ಳಲಾಗುತ್ತಿದೆ. ಜನರು ಸಹ ಜ್ವರ ಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಆಸ್ಪತ್ರೆಗೆ ತೋರಿಸಬೇಕು. ಕಡಿಮೆಯಾಗದಿದ್ದರೆ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ಬಾರದಂತೆ ತಡೆಯಲು ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸ್ವಚ್ಛತೆಗೆ ಒತ್ತು: ‘ಸ್ಥಳೀಯ ಆಡಳಿತ ಸಂಸ್ಥೆಗಳ ಸಹಯೋಗದಲ್ಲಿ ರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕಾಗಿ ನಗರ, ಪಟ್ಟಣ ಹಾಗೂ ಗ್ರಾಮ ಮಟ್ಟದಲ್ಲಿ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವ ಮೂಲಕ ಡೆಂಗಿಗೆ ಕಾರಣವಾಗುವ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಪೂರಕವಾಗಿ ಲಾರ್ವಾ ಸಮೀಕ್ಷೆ ಸಹ ಮಾಡಲಾಗುತ್ತಿದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ. ಶಶಿಧರ್ ಹೇಳಿದರು.

‘ಸೊಳ್ಳೆಗಳು ಹೆಚ್ಚಾಗಿ ಉತ್ಪತ್ತಿಯಾಗುವ ಸ್ಥಳಗಳಾದ ರಾಜಕಾಲುವೆ, ಚರಂಡಿ, ಒಳ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ, ನಿತ್ಯ ತ್ಯಾಜ್ಯ  ವಿಲೇವರಿ ಮಾಡುವಂತೆ ನಗರಸಭೆ, ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಷ್ಟೇ ಅಲ್ಲದೆ, ಇಲಾಖಾವಾರು ಹಾಗೂ ಸಂಸ್ಥೆವಾರು ಸಹ ಅರಿವು ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ರೋಗದ ಲಕ್ಷಣಗಳು: ‘ವಿಪರೀತ ಜ್ವರ, ಮೈ ಮೇಲೆ ಕೆಂಪು ಗಂದೆ ಕಾಣಿಸಿಕೊಳ್ಳುವುದು, ಕಣ್ಣಿನ ಹಿಂಭಾಗ ನೋವು, ತಲೆ ನೋವು, ಮಾಂಸಖಂಡಗಳ ನೋವು ಡೆಂಗಿ ಲಕ್ಷಣಗಳಾಗಿವೆ. ರೋಗ ತೀವ್ರಗೊಂಡಾಗ ರೋಗಿ ಬಾಯಿ, ಮೂಗು ಹಾಗೂ ವಸಡುಗಳಿಂದ ರಕ್ತಸ್ರಾವವಾಗುತ್ತದೆ. ಚರ್ಮದ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಾಣಿಸಿಕೊಳ್ಳುತ್ತವೆ’ ಎಂದರು.

‘ರೋಗ ಹರಡುವ ಸೊಳ್ಳೆಗಳು ನೀರು ಶೇಖರಣೆ ಪರಿಕರಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಮಣ್ಣಿನ ಮಡಿಕೆಗಳನ್ನು ವಾರಕೊಮ್ಮೆ ಸ್ವಚ್ಛಗೊಳಿಸಬೇಕು. ಟೈಯರ್, ಎಳನೀರು ಚಿಪ್ಪು, ಒಡೆದ ಪ್ಲಾಸ್ಟಿಕ್ ವಸ್ತುಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿರುತ್ತದೆ. ಆದ್ದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪಟ್ಟಿ...ಎಲ್ಲಿ, ಎಷ್ಟು ಪ್ರಕರಣ?

ತಾಲ್ಲೂಕು; ಪ್ರಕರಣ

ರಾಮನಗರ;16

ಚನ್ನಪಟ್ಟಣ;9

ಹಾರೋಹಳ್ಳಿ;3

ಮಾಗಡಿ;14

ಕನಕಪುರ;11

ಒಟ್ಟು; 53

ಡೆಂಗಿ ಚಿಕಿತ್ಸೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಸನ್ನದ್ಧ ಸ್ಥಿತಿಯಲ್ಲಿವೆ. ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಜ್ವರದ ಕಾರಣಕ್ಕೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ರಕ್ತಪರೀಕ್ಷೆ ಮಾಡಲಾಗುತ್ತಿದೆ
ಡಾ. ನಿರಂಜನ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಮನಗರ
‘ಖಾಸಗಿ ಆಸ್ಪತ್ರೆಗಳ ಮೇಲೂ ನಿಗಾ’
‘ಖಾಸಗಿ ಆಸ್ಪತ್ರೆಗೆ ಜ್ವರದ ಕಾರಣಕ್ಕಾಗಿ ಬರುವ ರೋಗಿಗಳ ಮೇಲೂ ನಿಗಾ ಇಡಲಾಗುತ್ತಿದೆ. ಜಿಲ್ಲೆಯಾದ್ಯಂತ ಇರುವ ಖಾಸಗಿ ಆಸ್ಪತ್ರೆಗಳ ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿ ರೋಗಿಗಳ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಖಾಸಗಿಯವರು ರ‍್ಯಾಪಿಡ್ ಕಿಟ್ ಬಳಸಿ ಡೆಂಗಿ ಪರೀಕ್ಷೆ ನಡೆಸಿದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತಪರೀಕ್ಷೆ ಖಚಿತಪಡಿಸಿಕೊಳ್ಳಲಾಗುತ್ತದೆ. ರ‍್ಯಾಪಿಡ್‌ ಪರೀಕ್ಷೆಗಿಂತ ರಕ್ತಪರೀಕ್ಷೆಯೇ ಹೆಚ್ಚು ನಿಖರ. ಖಾಸಗಿ ಆಸ್ಪತ್ರೆಗೆ ಬರುವ ರೋಗಿಗೆ ಡೆಂಗಿ ಪಾಸಿಟಿವ್ ಬಂದರೆ ಅವರ ಮಾಹಿತಿ ಪಡೆದು ಜಿಲ್ಲಾಸ್ಪತ್ರೆಯಲ್ಲಿ ರಕ್ತಪರೀಕ್ಷೆ ಮಾಡಲಾಗುತ್ತದೆ. ನಮ್ಮಲ್ಲೂ ದೃಢಪಟ್ಟರೆ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಇಳಿಕೆಯಾಗಿವೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ. ಶಶಿಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.