ADVERTISEMENT

ಪ್ರವಾಸಕ್ಕೆ ಹೊರಟ್ಟಿದ್ದವರ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ: ಯುವತಿ ಸಾವು

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 16:07 IST
Last Updated 26 ಜನವರಿ 2024, 16:07 IST
   

ರಾಮನಗರ: ನಗರದ ಹೊರವಲಯದ ನೇಟಸ್ ಶಾಲೆ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಯುವತಿಯೊಬ್ಬಳು ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ. ತಮಿಳುನಾಡಿನ ಕಾಂಜೀವರಂ ಜಿಲ್ಲೆಯ ವರ್ಷಾ (17) ಮೃತ ಯುವತಿ.

ದಿನೇಶ್ ಕುಮಾರ್, ಪತ್ನಿ ಯುವರಾಣಿ, ಶರ್ಮಾನ್, ಕೆ. ರಮೇಶ್, ಗೀತಾ ಹಾಗೂ ಗಣೇಶ್ ಗಾಯಾಳುಗಳು. ಎಲ್ಲರಿಗೂ ರಾಮನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ, ಶರ್ಮಾನ್ ಸ್ಥಿತಿ ಗಂಭೀರವಾಗಿದೆ ಎಂದು ರಾಮನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

ರಜೆ ಇದ್ದಿದ್ದರಿಂದಾಗಿ ಕುಟುಂಬದವರು ಮೈಸೂರು ಪ್ರವಾಸ ಕೈಗೊಂಡಿದ್ದರು. ರಾತ್ರಿ ಕಾಂಜೀವರಂನಿಂದ ಕಾರಿನಲ್ಲಿ ಹೊರಟಿದ್ದರು. ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದ ಚಾಲಕ ಬೆಳಿಗ್ಗೆ 4ರ ಸುಮಾರಿಗೆ ನಿದ್ರೆ ಮಂಪರಿನಲ್ಲಿ ರಸ್ತೆ ವಿಭಜಕಕ್ಕೆ ಗುದ್ದಿದ್ದಾನೆ. ಡಿಕ್ಕಿಯ ರಸಭಕ್ಕೆ ಕಾರು ಪಲ್ಟಿಯಾಗಿದ್ದು, ವರ್ಷಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ನಜ್ಜುಗುಜ್ಜಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಬಾಲಕನ ಶವ ಪತ್ತೆ: ನಗರದ ರೈಲು ನಿಲ್ದಾಣದಿಂದ ಅನತಿ ದೂರದಲ್ಲಿರುವ ರೈಲು ಹಳಿ ಸಮೀಪ ಸುಮಾರು 6 ವರ್ಷದ ಅಪರಿಚಿತ ಬಾಲಕನ ಶವ ಶುಕ್ರವಾರ ಪತ್ತೆಯಾಗಿದೆ.

ಹಳಿಯಿಂದ ಅನತಿ ದೂರದಲ್ಲಿ ಸಣ್ಣ ಹಳ್ಳವಿದೆ. ಅದರ ಬಳಿ ಬೆಳೆದಿರುವ ಗಿಡಗಳ ಮಧ್ಯೆ ಬಾಲಕನ ಶವ ಮಕಾಡೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂಜೆ ಶವವನ್ನು ಗಮನಿಸಿದ ಸ್ಥಳೀಯರೊಬ್ಬರು ಠಾಣೆ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿ ಶವವನ್ನು ಪರಿಶೀಲಿಸಿ, ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಯಾರೊ ಬಾಲಕನನ್ನು ಕೊಲೆ ಮಾಡಿ, ಶವವನ್ನು ಇಲ್ಲಿ ಎಸೆದಿರುವ ಸಾಧ್ಯತೆ ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ರಾಮನಗರ ಪುರ ಠಾಣೆ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.