ಹಾರೋಹಳ್ಳಿ: ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳಿದ್ದರೂ, ಅವು ಜನರ ಬಳಕೆಗೆ ಮುಕ್ತವಾಗಿಲ್ಲ. ಇದರಿಂದಾಗಿ ತಾಲ್ಲೂಕು ಕೇಂದ್ರದ ಖಾಲಿ ಜಾಗಗಳು, ಕಾಂಪೌಂಡ್, ಕಟ್ಟಡಗಳ ಗೋಡೆಗಳು ಸಾರ್ವಜನಿಕರ ಮೂತ್ರ ವಿಸರ್ಜನೆಯ ತಾಣವಾಗಿದೆ. ಇದರಿಂದಾಗಿ ಕೆಲ ಜಾಗಗಳು ಗಬ್ಬೆದ್ದು ನಾರುತ್ತಿದ್ದು, ಇಲ್ಲಿ ಜನರು ಮೂಗು ಹಿಡಿದುಕೊಂಡು ಓಡಾಡಬೇಕಿದೆ.
ಸ್ವಚ್ಛ ಭಾರತ ಮಿಷನ್, ನಿರ್ಮಲ ಭಾರತ್ ಅಭಿಯಾನ ಸೇರಿದಂತೆ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಶೌಚಾಲಯಗಳನ್ನ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಪಟ್ಟಣಗಳಲ್ಲಿರುವ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವುದಕ್ಕಾಗಿ ಶೌಚಾಲಯಗಳನ್ನು ನಿರ್ಮಿಸುತ್ತದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಶೌಚಾಲಯಗಳನ್ನು ಕಟ್ಟಿದ್ದರೂ ಅವುಗಳ ಪ್ರಯೋಜನ ಜನರಿಗೆ ಸಿಗುತ್ತಿಲ್ಲ.
ನಿಲ್ದಾಣದಲ್ಲಷ್ಟೇ ಇದೆ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹೊರತುಪಡಿಸಿದರೆ ಬೇರೆಲ್ಲೂ ಸಾರ್ವಜನಿಕ ಶೌಚಾಲಯ ಬಳಕೆಯಾಗುತ್ತಿಲ್ಲ. ಪುರುಷರು ಮತ್ತು ಮಹಿಳೆಯರು ಇದೊಂದು ಜಾಗ ಬಿಟ್ಟರೆ ಬೇರೆಲ್ಲೂ ಶೌಚಾಲಯದ ವ್ಯವಸ್ಥೆ ಇಲ್ಲ. ಇಲ್ಲಿಯೂ ಸರಿಯಾದ ನಿರ್ವಹಣೆ ಇಲ್ಲದಿರುವುದರಿಂದ ಶೌಚಾಲಯ ದುರ್ನಾತ ಬೀರುತ್ತಿದೆ. ಆದರೂ ಜನ ವಿಧಿ ಇಲ್ಲದೆ ತುರ್ತು ‘ನೇಚರ್ ಕಾಲ್‘ಗೆ ಹೋಗಲೇ ಬೇಕಿದೆ.
ಹಾರೋಹಳ್ಳಿಯ ಮಾರುಕಟ್ಟೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಬಳಿ 2018-19ಸಾಲಿನಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿ ಎರಡು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಇದುವರೆಗೆ ಬಳಕೆಗೆ ಮುಕ್ತಗೊಳಿಸಿಲ್ಲ. ಇದರಿಂದಾಗಿ ಅವು ಅವ್ಯವಸ್ಥೆಯ ತಾಣಗಳಾಗಿ ಹಾಳಾಗಿ ಗಬ್ಬು ನಾರುತ್ತಿವೆ.
ಏನು ತೊಂದರೆ?: ‘ಆರು ವರ್ಷಗಳ ಹಿಂದೆ ಜನನಿಬಿಡ ಪ್ರದೇಶಗಳಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ. ಕಾರಣ ಮಾತ್ರ ನಿಗೂಢ. ನಿತ್ಯ ಪಟ್ಟಣಕ್ಕೆ ನೂರಾರು ಬಂದು ಹೋಗುತ್ತಾರೆ. ಅಂತಹವರು ತಮ್ಮ ಜಲಬಾಧೆ ತೀರಿಸಿಕೊಳ್ಳಲು ಪರಿತಪಿಸಬೇಕಾದ ಸ್ಥಿತಿ ಪಟ್ಟಣದಲ್ಲಿದೆ’ ಎಂದು ಸ್ಥಳೀಯ ನಿವಾಸಿ ಅರುಣ್ ಬೇಸರ ವ್ಯಕ್ತಪಡಿಸಿದರು.
‘ತಾಲ್ಲೂಕು ಕಚೇರಿ, ಪೊಲೀಸ್ ಠಾಣೆ, ಭೂ ದಾಖಲೆಗಳ ಇಲಾಖೆ, ಶಿಶು ಯೋಜನಾಭಿವದ್ಧಿ ಇಲಾಖೆ, ಕಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಬೆಸ್ಕಾಂ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಬರುವ ನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಜನರು ಶೌಚಾಲಯಕ್ಕಾಗಿ ಖಾಲಿ ಜಾಗ ಹುಡಕಬೇಕು. ಇಲ್ಲವೇ ಯಾವುದಾದರೂ ಕಟ್ಟಡದ ಮರೆಗೆ ಹೋಗಬೇಕಿದೆ’ ಎಂದರು.
ಹೆಣ್ಮಕ್ಕಳ ಸಮಸ್ಯೆ ಹೇಳಲಾಗದು: ಪುರುಷರು ಶೌಚಕ್ಕಾಗಿ ಯಾವುದಾದರೂ ಜಾಗ ಹುಡುಕಿಕೊಂಡು ಹೋಗಿ ಬರುತ್ತಾರೆ. ಆದರೆ, ಹೆಣ್ಣು ಮಕ್ಕಳು ಆ ರೀತಿ ಮಾಡಲು ಅಂಜುತ್ತಾರೆ. ಸಾರ್ವಜನಿಕ ಶೌಚಾಲಯಗಳು ಇಲ್ಲದಿರುವುದರಿಂದ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುತ್ತಾರೆ. ವಿದ್ಯಾರ್ಥಿನಿಯರು, ಮಹಿಳೆಯರು, ವ್ಯಾಪಾರಸ್ಥರು ತಮ್ಮ ಸಮಸ್ಯೆ ಹೇಳಿಕೊಳ್ಳಲಾಗದ ಸ್ಥಿತಿ ಇದೆ.
‘ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಮಹಿಳಾ ಮತ್ತು ಪುರುಷರ ಶೌಚಾಲಯಗಳನ್ನು ನಿರ್ಮಿಸಬೇಕು. ಸದ್ಯ ಶೌಚಕ್ಕೆ ಬಸ್ ನಿಲ್ದಾಣ ಬಿಟ್ಟರೆ ಬೇರಾವ ಜಾಗವೂ ಇಲ್ಲ. ಇಲ್ಲಿನ ಹೋಟೆಲ್‌ಗಳಲ್ಲಿ ಸಹ ಬಿಡುವುದಿಲ್ಲ. ಅನಗತ್ಯ ಕೆಲಸಗಳಿಗೆ ದುಡ್ಡು ವೆಚ್ಚ ಮಾಡುವ ಸರ್ಕಾರದವರು ಜನರಿಗೆ ಅಗತ್ಯವಿರುವ ಶೌಚಾಲಯಕ್ಕೆ ಗಮನ ಹರಿಸಬೇಕು’ ಎಂದು ಮಹಿಳೆಯೊಬ್ಬರು ಒತ್ತಾಯಿಸಿದರು.
ಯಾರೂ ಹೊರಗಿನ ಜಾಗದಲ್ಲಿ ಶೌಚಕ್ಕೆ ಬಳಸಲು ಇಷ್ಟಪಡುವುದಿಲ್ಲ. ಇದು ಅಸಹ್ಯ ಅವಮಾನಕರ ಮತ್ತು ಅನಾರೋಗ್ಯಕರ ಕೂಡ. ಆದರೆ ಅದಕ್ಕೆ ಅವಕಾಶವಿಲ್ಲದಂತೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು– ಭಾನುಪ್ರಕಾಶ್ ಸ್ಥಳೀಯ ನಿವಾಸಿ ಹಾರೋಹಳ್ಳಿ
ಶೌಚಾಲಯಗಳನ್ನು ನಿರ್ಮಿಸಿಯೂ ಇಷ್ಟು ಯಾಕೆ ಬಳಕೆಗೆ ಬಿಟ್ಟಿಲ್ಲ ಎಂಬುದಕ್ಕೆ ಪಟ್ಟಣ ಪಂಚಾಯಿತಿಯವರು ಉತ್ತರ ನೀಡಬೇಕು. ಕೂಡಲೇ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ಬಳಕೆಗೆ ಮುಕ್ತವಾಗಿಸಬೇಕು– ನಾಗರಾಜು ಸಾಮಾಜಿಕ ಕಾರ್ಯಕರ್ತ ಹಾರೋಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.