ರಾಮನಗರ: ಶಿಕ್ಷಣ ಕ್ಷೇತ್ರ ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ರೀತಿಯ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ನಗರದಲ್ಲಿರುವ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು–ಮೈಸೂರು ರಸ್ತೆಯಲ್ಲಿರುವ ಕಚೇರಿ ಎದುರು ಜಮಾಯಿಸಿದ ಪರಿಷತ್‌ನ ಸದಸ್ಯರು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದಾದ್ಯಂತ ಬಸ್‌ಗಳಲ್ಲಿ ಜಾಗದ ಕೊರತೆಯಿಂದಾಗಿ, ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರದಾಡುವಂತಾಗಿದೆ. ಹಾಗಾಗಿ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ವಿದ್ಯಾರ್ಥಿನಿಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಹಾಸ್ಟೆಲ್ ಪ್ರವೇಶ ಪ್ರಕ್ರಿಯೆ ವಿಳಂಬ ಮಾಡದೆ ಶಾಲಾ–ಕಾಲೇಜುಗಳ ಆರಂಭವಾದ ತಕ್ಷಣ ಶುರು ಮಾಡಬೇಕು. ಸಕಾಲದಲ್ಲಿ ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ಜಾರಿಗೊಳಿಸಬೇಕು. ತ್ವರಿತವಾಗಿ ಶೈಕ್ಷಣಿಕ ಬಸ್ ಪಾಸ್ ವಿತರಿಸಬೇಕು ಎಂದು ಆಗ್ರಹಿಸಿದರು.
ಹಾಸ್ಟೆಲ್‌ಗಳಿಗೆ ಮೂಲಸೌಕರ್ಯ ಒದಗಿಸಬೇಕು. ಬಾಡಿಗೆ ಕಟ್ಟಡದಲ್ಲಿರುವ ವಿದ್ಯಾರ್ಥಿನಿಲಯಗಳಿಗೆ ಶಾಶ್ವತ ಕಟ್ಟಡ ಒದಗಿಸಿ ಸ್ಥಳಾಂತರಿಸಬೇಕು. ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನದಿಂದ ಸಿಗುವ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು ಎಂದರು.
ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಶಾಸಕ ಇಕ್ಬಾಲ್ ಹುಸೇನ್ ಅವರು, ಪರಿಷತ್ ಸದಸ್ಯರಿಂದ ಮನವಿ ಸ್ವೀಕರಿಸಿದರು. ತಮ್ಮ ಬೇಡಿಕೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪರಿಷತ್‌ನ ಸುಹಾಸ್, ಜ್ಞಾನೇಶ್, ಮಯೂರ್, ಭುವನ್, ಗಿರಿ, ಶಿವರಾಜ್ ಹಾಗೂ ಸುಮಂತ್, ವಿಷ್ಣು, ಸ್ಕಂದ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.