ರಾಮನಗರ: ನಗರದ ಬೆಂಗಳೂರು– ಮೈಸೂರು ರಸ್ತೆಯ ಗಾಂಧಿನಗರ ವೃತ್ತದ ಬಳಿ ಇರುವ ಹಂಪ್ಸ್ (ರಸ್ತೆಯುಬ್ಬು) ವಾಹನಗಳ ವೇಗ ನಿಯಂತ್ರಣಕ್ಕೆ ಕಡಿವಾಣ ಹಾಕುವ ಬದಲು, ಅಪಘಾತದ ಹಾಟ್‌ಸ್ಪಾಟ್ ಆಗಿದೆ. ಅವೈಜ್ಞಾನಿಕವಾಗಿ ಹಾಕಿರುವ ಹಂಪ್ಸ್‌ನಿಂದಾಗಿ, ನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿವೆ. ವಾಹನ ಸವಾರರು ಸಣ್ಣಪುಟ್ಟ ಗಾಯಗೊಂಡು ಆಸ್ಪತ್ರೆ ಸೇರುವುದು ಸಾಮಾನ್ಯವಾಗಿದೆ.
ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗವು, ಇತ್ತೀಚೆಗೆ ರಸ್ತೆಗೆ ಡಾಂಬರೀಕರಣ ಮಾಡಿತ್ತು. ಜೊತೆಗೆ, ಗಾಂಧಿನಗರ ಬಳಿಯ ಕೋತಿ ಆಂಜನೇಯ ದೇವಸ್ಥಾನದ ಎದುರಿಗೆ ಇರುವ ಯೂ ಟರ್ನ್ ರಸ್ತೆ, ಅನತಿ ದೂರದಲ್ಲಿರುವ ರೋಟರಿ ವೃತ್ತ ಸೇರಿದಂತೆ ನಗರ ಹಾದು ಹೋಗಿರುವ ರಸ್ತೆಯ ಎಲ್ಲಾ ಯೂ ಟರ್ನ್‌ನಲ್ಲಿ ಹೊಸದಾಗಿ ದೊಡ್ಡ ಹಂಪ್ಸ್‌ಗಳನ್ನು ಹಾಕಿದೆ.
ಎರಡೂ ಕಡೆಯಿಂದ ವೇಗವಾಗಿ ಬರುವ ವಾಹನಗಳ ವೇಗಕ್ಕೆ ಯೂ ಟರ್ನ್ ಬಳಿ ಕಡಿವಾಣ ಹಾಕಲು ಹಾಕಿದ ಹಂಪ್ಸ್‌ಗಳು, ಇದೀಗ ಅಪಘಾತಕ್ಕೆ ಕಾರಣವಾಗಿವೆ. ಎಸ್‌ಪಿ ಕಚೇರಿ ವೃತ್ತದಿಂದ ಮೈಸೂರು ಕಡೆಗೆ ಹೋಗುವ ಕೆಳಭಾಗದ ರಸ್ತೆಯು ಇಳಿಜಾರಿನಂತಿದ್ದು, ದ್ವಿಚಕ್ರ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ವೇಗವಾಗಿ ಬರುತ್ತವೆ.
ಸವಾರರಿಗೆ ಎದುರಿಗಿರುವ ಹಂಪ್ಸ್‌ನ ಯಾವ ಮುನ್ಸೂಚನೆಯೂ ಸಿಗದಿರುವುದರಿಂದ ವೇಗವಾಗಿ ಬಂದು, ವಾಹನಗಳನ್ನು ನೆಗೆಸುತ್ತಾರೆ. ಕೆಲವರು ತೀರಾ ಸಮೀಪ ಬಂದಾಗ ವೇಗ ನಿಯಂತ್ರಿಸಲು ಒಮ್ಮೆಲೆ ಬ್ರೇಕ್ ಹಾಕುತ್ತಾರೆ. ಆಗ ಎದುರಿನ ವಾಹನಕ್ಕೆ ಅಥವಾ ಯೂಟರ್ನ್ ತೆಗೆದುಕೊಳ್ಳುವ ವಾಹನಕ್ಕೆ ಡಿಕ್ಕಿ ಹೊಡೆಯುವುದು ಸಾಮಾನ್ಯವಾಗಿದೆ. ಇಲ್ಲದಿದ್ದರೆ, ವಾಹನದೊಳಗಿದ್ದವರ ನೆತ್ತಿ ಮೇಲ್ಬಾಗಕ್ಕೆ ಸ್ಪರ್ಶಿಸುವಷ್ಟು ವಾಹನ ಜಿಗಿಯುತ್ತದೆ.
ಗಂಭೀರ ಗಾಯ: ‘ನಾಲ್ಕು ದಿನಗಳ ಹಿಂದೆಯಷ್ಟೇ ಕಾರು ಚಾಲಕನೊಬ್ಬ ಹಂಪ್ಸ್ ಗಮನಿಸದೆ ವೇಗವಾಗಿ ಬಂದು, ನಿಯಂತ್ರಣ ಕಳೆದುಕೊಂಡು ಮುಂದಿದ್ದ ಆಟೊಗೆ ಡಿಕ್ಕಿ ಹೊಡೆದ. ಡಿಕ್ಕಿ ರಭಸಕ್ಕೆ ಆಟೊ ಪಲ್ಟಿಯಾಗಿ ಪ್ರಯಾಣಿಕರಿಗೆ ಗಂಭೀರವಾಗಿ ಮತ್ತು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾದವು’ ಎಂದು ಸಮೀಪದಲ್ಲಿ ಅಂಗಡಿ ಇಟ್ಟುಕೊಂಡಿರುವ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬೈಕ್‌ಗಳಿಗೆ ಪ್ರವೇಶವಿಲ್ಲದಿರುವುದರಿಂದ, ಟೂರಿಸ್ಟ್ ಬೈಕ್‌ನವರು ಸೇರಿದಂತೆ ಎಲ್ಲರೂ ಈ ರಸ್ತೆಯಲ್ಲೇ ಹೋಗುತ್ತಾರೆ. ವೇಗವಾಗಿ ಬರುವ ಬೈಕ್ ಸವಾರರು ಹಂಪ್ಸ್ ನೆಗೆಸಿ ಬಿದ್ದು ಎದ್ದು ಹೋಗಿರುವುದನ್ನು ಸಹ ನೋಡಿದ್ದೇವೆ. ಹಂಪ್ಸ್‌ನಿಂದಾಗಿ ಆಗುತ್ತಿರುವ ಈ ಸಮಸ್ಯೆಗೆ ಹೆದ್ದಾರಿ ಪ್ರಾಧಿಕಾರದವರೇ ಪರಿಹಾರ ಒದಗಿಸಬೇಕು’ ಎಂದು ಹೇಳಿದರು.
ಮುನ್ಸೂಚನೆ ಫಲಕ ಹಾಕಿ
‘ಹಂಪ್ಸ್ ಇರುವ ಕುರಿತು ಮುಂಚೆಯೇ ಸವಾರರಿಗೆ ಗೊತ್ತಾಗುವಂತೆ ಸೂಚನಾ ಫಲಕ ಅಳವಡಿಸಬೇಕು. ಹಂಪ್ಸ್ ಇರುವುದು ಎದ್ದು ಕಾಣುವಂತೆ ಅದಕ್ಕೆ ಬಿಳಿ ಅಥವಾ ಹಳದಿ ಬಣ್ಣವನ್ನು ಬಳಿಯಬೇಕು. ಇಲ್ಲದಿದ್ದರೆ ಹಂಪ್ಸ್‌ನಲ್ಲಿ ಕೆಂಪು ಲೈಟ್ ಬ್ಲಿಂಕ್ ಆಗುವಂತೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ’ ಎಂದು ಸ್ಥಳೀಯರಾದ ರಕ್ಷಿತ್ ಗೋವಿಂದಸ್ವಾಮಿ ಒತ್ತಾಯಿಸಿದರು. ಬೆನ್ನು ಹುಳುಕಿದ ಅನುಭವ ‘ಹಂಪ್ಸ್ ಅನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಅಗಲ ಮತ್ತು ಎತ್ತರ ನಿರ್ದಿಷ್ಟವಾಗಿರಬೇಕು. ಸವಾರರು ಹಂಪ್ಸ್ ಗಮನಿಸದೆ ವಾಹನ ಚಲಾಯಿಸಿದರೂ ಅದರಿಂದ ಅಪಘಾತವಾಗುವಂತಿರಬಾರದು. ಒಳಗೆ ಕುಳಿತವರಿಗೂ ತೊಂದರೆಯಾಗಬಾರದು. ನಗರದಲ್ಲಿ ಇತ್ತೀಚೆಗೆ ಹಾಕಿರುವ ಹಂಪ್ಸ್‌ಗಳನ್ನು ನೆಗೆಸಿದರೆ ಸೊಂಟ ಮತ್ತು ಬೆನ್ನು ಹುಳುಕಿದ ಅನುಭವವಾಗುತ್ತದೆ. ಹೆದ್ದಾರಿ ಪ್ರಾಧಿಕಾರದವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹಂಪ್ಸ್‌ಗಳನ್ನು ಸರಿಪಡಿಸಬೇಕು’ ಎಂದು ಅರ್ಕಾವತಿ ಬಡಾವಣೆಯ ನಾಗರಾಜು ಆಗ್ರಹಿಸಿದರು.
ಬೆನ್ನು ಉಳುಕಿದ ಅನುಭವ
‘ಹಂಪ್ಸ್ ಅನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಅಗಲ ಮತ್ತು ಎತ್ತರ ನಿರ್ದಿಷ್ಟವಾಗಿರಬೇಕು. ಸವಾರರು ಹಂಪ್ಸ್ ಗಮನಿಸದೆ ವಾಹನ ಚಲಾಯಿಸಿದರೂ ಅದರಿಂದ ಅಪಘಾತವಾಗುವಂತಿರಬಾರದು. ಒಳಗೆ ಕುಳಿತವರಿಗೂ ತೊಂದರೆ
ಯಾಗಬಾರದು.
ನಗರದಲ್ಲಿ ಇತ್ತೀಚೆಗೆ ಹಾಕಿರುವ ಹಂಪ್ಸ್‌ಗಳನ್ನು ನೆಗೆಸಿದರೆ, ಸೊಂಟ ಮತ್ತು ಬೆನ್ನು ಉಳುಕಿದ ಅನುಭವವಾಗುತ್ತದೆ. ಹೆದ್ದಾರಿ ಪ್ರಾಧಿಕಾರದವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಹಂಪ್ಸ್‌ಗಳನ್ನು ಸರಿಪಡಿಸಬೇಕು’ ಎಂದು ಅರ್ಕಾವತಿ ಬಡಾವಣೆಯ ನಾಗರಾಜು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.