ADVERTISEMENT

ಬಿಡದಿ | ರಸ್ತೆ ಬದಿ ಐರಾವತ ಬಸ್‌ ಡಿಕ್ಕಿ: 11 ಮಂದಿಗೆ ಗಾಯ

ನಿದ್ರೆ ಮಂಪರಿನಲ್ಲಿದ್ದ ಚಾಲಕ: ಪಕ್ಕದ ರಸ್ತೆಗೆ ಬಂದು ನಿಂತ ಬಸ್

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 14:11 IST
Last Updated 27 ಜೂನ್ 2024, 14:11 IST
ಬಿಡದಿ ಹೊರವಲಯದ ಕೇತಗಾನಹಳ್ಳಿ ಸಮೀಪದ ಬೆಂಗಳೂರು–ಮೈಸೂರು ಹೆದ್ದಾರಿ ಬಳಿ ಸಂಭವಿಸಿದ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಐರಾವತ ಬಸ್‌ ಜಖಂಗೊಂಡಿರುವುದು
ಬಿಡದಿ ಹೊರವಲಯದ ಕೇತಗಾನಹಳ್ಳಿ ಸಮೀಪದ ಬೆಂಗಳೂರು–ಮೈಸೂರು ಹೆದ್ದಾರಿ ಬಳಿ ಸಂಭವಿಸಿದ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಐರಾವತ ಬಸ್‌ ಜಖಂಗೊಂಡಿರುವುದು   

ಬಿಡದಿ: ಪಟ್ಟಣದ ಹೊರವಲಯದ ಕೇತಗಾನಹಳ್ಳಿಯ ಬೆಂಗಳೂರು–ಮೈಸೂರು ಹೆದ್ದಾರಿಯ ಸೇತುವೆ ಬಳಿ ಗುರುವಾರ ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಐರಾವತ ಬಸ್‌ ರಸ್ತೆ ಬದಿಯ ಸಿಮೆಂಟ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಾಲಕ, ನಿರ್ವಾಹಕ ಸೇರಿದಂತೆ 11 ಮಂದಿಗೆ ಗಾಯವಾಗಿದೆ.

ಬೆಳಿಗ್ಗೆ 4.30ರ ಸುಮಾರಿಗೆ ಘಟನೆ ನಡೆದಿದೆ. ಕೇರಳದ ಕ್ಯಾಲಿಕಟ್‌ನಿಂದ ಹೊರಟು ಬೆಂಗಳೂರಿಗೆ ಬಸ್ ಬರುತ್ತಿತ್ತು. ಕೇತಗಾನಹಳ್ಳಿ ಸೇತುವೆ ಬಳಿ ಬರುತ್ತಿದ್ದಂತೆ ನಿದ್ದೆ ಮಂಪರಿನಲ್ಲಿದ್ದ ಚಾಲಕ ಹೆದ್ದಾರಿ ಬದಿಯ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದ್ದಾನೆ. ಜೋರಾಗಿ ಕೇಳಿಬಂದ ಶಬ್ದದಿಂದ ಎಚ್ಚೆತ್ತುಕೊಂಡ ಚಾಲಕ, ತಕ್ಷಣ ಬಸ್‌ ಅನ್ನು ಪಕ್ಕಕ್ಕೆ ತಿರುಗಿಸಿದ್ದಾನೆ.

ಆಗ ಬಸ್ ರಸ್ತೆ ವಿಭಜಕದ ಮೇಲೆ ಹಾದು ಮಧ್ಯೆ ಅಳವಡಿಸಿದ್ದ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು, ಬೆಂಗಳೂರು ಕಡೆಗೆ ಹೋಗುವ ರಸ್ತೆಗೆ ಬಂದು ನಿಂತಿದೆ. ಈ ವೇಳೆ ಕಾರೊಂದಕ್ಕೆ ಸಣ್ಣದಾಗಿ ಬಸ್ ತಾಗಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಬಸ್ ಮುಂಭಾಗದಲ್ಲಿದ್ದ ಚಾಲಕ, ನಿರ್ವಾಹಕ ಹಾಗೂ ಮುಂಭಾಗದಲ್ಲಿದ್ದ 9 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಬಿಡದಿ ಠಾಣೆ ಪೊಲೀಸರು ತಿಳಿಸಿದರು.

ADVERTISEMENT

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಅಪಘಾತದಿಂದಾಗಿ ಬಸ್‌ನ ಮುಂಭಾಗ ಮತ್ತು ಲಗೇಜ್ ಇಡುವ ಭಾಗ ಜಖಂಗೊಂಡಿದೆ. ಕಾರಿಗೆ ಸ್ವಲ್ಪ ಹಾನಿಯಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಹೊತ್ತು ಸಂಚಾರಕ್ಕೆ ತೊಂದರೆಯಾಯಿತು. ಟೋಯಿಂಗ್ ವಾಹನ ಕರೆಸಿ ಬಸ್‌ ಅನ್ನು ತೆರವುಗೊಳಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.