ADVERTISEMENT

ಪರಿಶಿಷ್ಟರ ಸಭೆ ಕರೆಯಲು ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 4:45 IST
Last Updated 1 ಮಾರ್ಚ್ 2023, 4:45 IST
ಮಾಗಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕಾಂಗ್ರೆಸ್‌ ಎಸ್‌.ಸಿ ಮತ್ತು ಎಸ್‌.ಟಿ ಘಟಕದ ಅಧ್ಯಕ್ಷ ಬ್ಯಾಲಕೆರೆ ಚಿಕ್ಕರಾಜು ಮಾತನಾಡಿದರು
ಮಾಗಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕಾಂಗ್ರೆಸ್‌ ಎಸ್‌.ಸಿ ಮತ್ತು ಎಸ್‌.ಟಿ ಘಟಕದ ಅಧ್ಯಕ್ಷ ಬ್ಯಾಲಕೆರೆ ಚಿಕ್ಕರಾಜು ಮಾತನಾಡಿದರು   

ಮಾಗಡಿ: ‘ಒಂದು ವಾರದೊಳಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದುಕೊರತೆ ಸಭೆ ಕರೆಯದಿದ್ದರೆ ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ತಾಲ್ಲೂಕು ಕಾಂಗ್ರೆಸ್‌ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ಅಧ್ಯಕ್ಷ ಬ್ಯಾಲಕೆರೆ ಚಿಕ್ಕರಾಜು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ಕರೆದು ಸಮಸ್ಯೆ ಆಲಿಸಬೇಕು. 2022ರ ಫೆ. 7ರಂದು ಸಭೆ ನಡೆದಿತ್ತು. ಶಾಸಕ ಎ. ಮಂಜುನಾಥ್‌ ಅವಧಿಯಲ್ಲಿ ಕೇವಲ ಆರು ಸಭೆಗಳು ನಡೆದಿವೆ. ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳಲ್ಲಿ ದಲಿತರ ಮನೆಗಳಿಗೆ ಇ– ಖಾತೆ ಮಾಡಿಕೊಡುತ್ತಿಲ್ಲ. ದಲಿತರಿಗೆ ನಿವೇಶನ ಅಥವಾ ಮನೆಗಳನ್ನು ನಿರ್ಮಿಸಿ ಕೊಟ್ಟಿಲ್ಲ. ಸ್ಮಶಾನಕ್ಕೆ ಸ್ಥಳ ಗುರುತಿಸಿಲ್ಲ ಎಂದರು.

ADVERTISEMENT

ಬಗರ್‌ ಹುಕುಂ ಸಾಗುವಳಿ ಮಾಡಿಕೊಂಡಿದ್ದ ದಲಿತರಿಗೆ ಹಕ್ಕುಪತ್ರ ನೀಡಿಲ್ಲ. ಪಟ್ಟಣದ ಟಿಎಪಿಸಿಎಂಎಸ್‌, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನಿರ್ಮಿಸಿರುವ ಅಂಗಡಿ ಮಳಿಗೆಗಳು ಮತ್ತು ಬೆಳಗುಂಬದ ವಿ.ಎಸ್‌.ಎಸ್‌.ಎನ್‌ ಕಟ್ಟಡದ ಮಳಿಗೆಗಳನ್ನು ದಲಿತರಿಗೆ ಹಂಚಿಕೆ ಮಾಡಿಲ್ಲ. ತಾಲ್ಲೂಕಿನಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಮುಜರಾಯಿ ದೇವಾಲಯಗಳಿಗೆ ಇಂದಿಗೂ ದಲಿತರಿಗೆ ಪ್ರವೇಶವಿಲ್ಲ ಎಂದು ದೂರಿದರು.

ಶ್ರೀಮಂತರಿಗೆ ಬಿಪಿಎಲ್‌ ಪಡಿತರ ಚೀಟಿ ನೀಡಿದ್ದಾರೆ. ಆದರೆ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟರಿಗೆ ನೀಡಿಲ್ಲ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ. ಜಯರಾಮ್‌ ಮಾತನಾಡಿ, ‘ಶಾಸಕರು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಪರಿಶಿಷ್ಟರು ಮೃತಪಟ್ಟರೆ ಶವ ಸಂಸ್ಕಾರಕ್ಕೆ ಸ್ಮಶಾನವಿಲ್ಲ. ಪೊಲೀಸ್‌ ಠಾಣೆಗಳಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದ್ದು ಬಿಟ್ಟರೆ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿಲ್ಲ’ ಎಂದು ಟೀಕಿಸಿದರು.

ಪಟ್ಟಣದ ಪೌರಸೇವಾ ನೌಕರರಿಗೆ ಮೀಸಲಿದ್ದ ವಸತಿ ಗೃಹಗಳನ್ನು ಕೆಡವಿ ಉದ್ಯಾನ ನಿರ್ಮಿಸಲಾಯಿತು. ಅವರಿಗೆ ಇಂದಿಗೂ ನಿವೇಶನ ನೀಡಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಅರ್ಹರಿಗೆ ಸೌಲಭ್ಯ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಹೋರಾಟಗಾರ ದೊಡ್ಡಿ ಲಕ್ಷ್ಮಣ್‌ ಮಾತನಾಡಿದರು. ಮತ್ತಿಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೆಳ್ಳಿಯಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.