ಚನ್ನಪಟ್ಟಣ: ಕನ್ನಡ ಚಿತ್ರರಂಗದ ನಟಿ ಪ್ರಿಯಾಂಕಾ ಉಪೇಂದ್ರ ಅವರು ಸೋಮವಾರ ತಾಲ್ಲೂಕಿನ ಹಲವು ಶಾಲೆಗಳಿಗೆ ಭೇಟಿ ನೀಡಿ, ತಾವು ಅಭಿನಯಿಸಿದ ಮಿಸ್ ನಂದಿ ಚಲನಚಿತ್ರದ ಬಗ್ಗೆ ಪ್ರಚಾರ ನಡೆಸಿದರು.
ಕನ್ನಡ ಶಾಲೆಗಳ ಸಬಲೀಕರಣ ಕಥೆ ಹಿನ್ನೆಲೆ ಹೊಂದಿರುವ ಮಿಸ್ ನಂದಿನಿ ಚಲನಚಿತ್ರವು ಇದೇ 6ರಂದು ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಅವರು, ತಾಲ್ಲೂಕಿನ ಬೈರಾಪಟ್ಟಣದ ಸರ್ಕಾರಿ ಪ್ರೌಢಶಾಲೆ, ಮತ್ತೀಕೆರೆ-ಶೆಟ್ಟಿಹಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯ, ಚಕ್ಕೆರೆ ಮೊರಾರ್ಜಿ ವಸತಿ ಶಾಲೆ, ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಹೊನ್ನಾಯಕನಹಳ್ಳಿ ಮೊರಾರ್ಜಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ನಗರದ ಸೇಂಟ್ ಆನ್ಸ್ ಬಾಲಕಿಯರ ಅನುದಾನಿತ ಪ್ರೌಢಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಭೇಟಿ ನೀಡಿ, ಚಿತ್ರದ ಪ್ರಚಾರ ಕೈಗೊಂಡರು.
ಈ ವೇಳೆ ಮಾತನಾಡಿದ ನಟಿ ಪ್ರಿಯಾಂಕಾ, ‘ಸರ್ಕಾರಿ ಶಾಲೆಗಳು ಉಳಿಯಬೇಕು, ಬೆಳೆಯಬೇಕು. ಸರ್ಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ಕಥೆ ಇಟ್ಟುಕೊಂಡು ಚಿತ್ರ ನಿರ್ಮಿಸಲಾಗಿದೆ. ಇದರಲ್ಲಿ ಶಿಕ್ಷಕಿಯಾಗಿ ಅಭಿನಯಿಸಿದ್ದೇನೆ. ಎಲ್ಲರೂ ಸರ್ಕಾರಿ ಶಾಲೆಗಳು ಹಾಗೂ ಕನ್ನಡ ಚಲನಚಿತ್ರಗಳನ್ನು ಬೆಂಬಲಿಸಬೇಕು. ವಿದ್ಯಾರ್ಥಿಗಳು ನೋಡಲೇಬೇಕಾದ ಚಿತ್ರ’ ಇದು ಎಂದು ವಿವರಿಸಿದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನಟಿ ಪ್ರಿಯಾಂಕಾ ಭೇಟಿ ನೀಡಿದ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ಹಾಜರಿದ್ದು, ಚಲನಚಿತ್ರಕ್ಕೆ ಶುಭ ಕೋರಿದರು.
ಮಿಸ್ ನಂದಿನಿ ಚಿತ್ರದ ನಿರ್ದೇಶಕ ಗುರುದತ್ತ, ಖಳ ನಾಯಕ ರತನ್, ಲಯನ್ ಸಂಸ್ಥೆಯ ಭವ್ಯ, ಕಾಲೇಜಿನ ಪ್ರಾಂಶುಪಾಲ ಶಿವಾನಂದ್, ಉಪ ಪ್ರಾಂಶುಪಾಲ ಕೆ. ವೀರಭದ್ರಯ್ಯ, ಬಿಇಒ ಕಚೇರಿಯ ಅಧೀಕ್ಷಕ ಪ್ರಶಾಂತ್ ಶರ್ಮ, ಶಿಕ್ಷಣ ಸಂಯೋಜಕ ಗಂಗಾಧರ ಮೂರ್ತಿ, ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.