ADVERTISEMENT

ರಾಮನಗರ | ಆರೋಗ್ಯ ವಿ.ವಿ ಕ್ಯಾಂಪಸ್‌ಗೆ ಮತ್ತೆ ಭೂಮಿ ಪೂಜೆ ಭಾಗ್ಯ

ವೈದ್ಯಕೀಯ ಕಾಲೇಜು ಸ್ಥಳಾಂತರದ ಗೊಂದಲದ ನಡುವೆಯೇ ಶಂಕುಸ್ಥಾಪನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2023, 4:58 IST
Last Updated 27 ಸೆಪ್ಟೆಂಬರ್ 2023, 4:58 IST
ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದ ಪೋಸ್ಟರ್
ರಾಮನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದ ಪೋಸ್ಟರ್   

ರಾಮನಗರ: ಜಿಲ್ಲಾ ಕೇಂದ್ರಕ್ಕೆ ಮಂಜೂರಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜು ಎಲ್ಲಿರಲಿದೆ ಎಂಬ ಗೊಂದಲದ ನಡುವೆಯೇ, ವಿಶ್ವವಿದ್ಯಾಲಯಕ್ಕೆ ಮತ್ತೊಮ್ಮೆ ಭೂಮಿಪೂಜೆ ಭಾಗ್ಯ ಒಲಿದು ಬಂದಿದೆ. ಈದ್ ಮಿಲಾದ್ ಹಬ್ಬದ ದಿನವಾದ ಸೆ. 28ರಂದು ಅರ್ಚಕರಹಳ್ಳಿಯಲ್ಲಿ ಕಾರ್ಯಕ್ರಮ ನಿಗದಿಯಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್, ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಗಣ್ಯರಿಗೆ ಸ್ಥಳೀಯ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಸ್ವಾಗತ ಕೋರುವ ಡಿಜಿಟಲ್ ಪೋಸ್ಟರ್‌ಗಳು ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು, ಇದೇ ವರ್ಷದ ಮಾರ್ಚ್‌ 27ರಂದು ವಿಶ್ವವಿದ್ಯಾಲಯ ಮತ್ತು ಕಾಲೇಜಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಕಾಲೇಜಿಗೆ ವಿಧಾನಸೌಧ ನಿರ್ಮಾತೃ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಹೆಸರನ್ನು ನಾಮಕರಣ ಮಾಡಿದ್ದರು.

ADVERTISEMENT

ಭಾರಿ ವಿರೋಧ: ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್‌ನಲ್ಲಿ, ಡಿ.ಕೆ. ಸಹೋದರರು ತಮ್ಮ ಪ್ರಭಾವ ಬಳಸಿ ವಿಶ್ವವಿದ್ಯಾಲಯ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಜಿಲ್ಲಾ ಕೇಂದ್ರದಿಂದ ಕಾಲೇಜ ಸ್ಥಳಾಂತರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್, ಇಕ್ಬಾಲ್ ಹುಸೇನ್ ಅವರು ಕಾಲೇಜು ಸ್ಥಳಾಂತರವಾಗುವುದಿಲ್ಲ ಎಂದು ಸಮಜಾಯಿಷಿ ನೀಡುತ್ತಲೇ ಬಂದಿದ್ದರು. ಆ ಮೂಲಕ, ಕಾಲೇಜು ಎಲ್ಲಿರಲಿದೆ? ನಿಜಕ್ಕೂ ಸ್ಥಳಾಂತರವಾಗಲಿದೆಯೇ ಎಂಬುದರ ಬಗ್ಗೆ ಮತ್ತಷ್ಟ ಗೊಂದಲ ಸೃಷ್ಟಿಯಾಗಿತ್ತು.

ಇದರ ನಡುವೆಯ ಸಚಿವ ಶರಣಪ್ರಕಾಶ ಪಾಟೀಲ ಅವರು, ‘ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣವಾಗಲಿದ್ದು, ಬಜೆಟ್‌ನಲ್ಲಿ ಘೋಷಿಸಿದಂತೆ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಆಗಲಿದೆ’ ಎಂದು ಆ. 21ರಂದು ಸ್ಪಷ್ಟಪಡಿಸಿದ್ದರು.

ಯಶಸ್ವಿಯಾಗಿದ್ದ ಬಂದ್: ಈ ಹೇಳಿಕೆ ಬೆನ್ನಲ್ಲೇ, ಕಾಲೇಜು ಸ್ಥಳಾಂತರಕ್ಕೆ ವಿರೋಧ ಹೆಚ್ಚಾಯಿತು. ಬಿಜೆಪಿ, ಜೆಡಿಎಸ್, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ–ಸಂಸ್ಥೆ ಮತ್ತು ಸಂಘಟನೆಗಳನ್ನೊಳಗೊಂಡ ಕೆಂಗಲ್ ಹನುಮಂತಯ್ಯ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಸ್ಥಳಾಂತರ ಖಂಡಿಸಿ ಸೆ. 8ರಂದು ಸಮಿತಿ ಕರೆ ಕೊಟ್ಟಿದ್ದ ರಾಮನಗರ ಬಂದ್ ಯಶಸ್ವಿಯಾಗಿತ್ತು.

ಬಂದ್ ಸಂದರ್ಭದಲ್ಲಿ ಹೋರಾಟಗಾರರು ಕಾಲೇಜು ಸ್ಥಳಾಂತರ ಕೈ ಬಿಡುವಂತೆ ಸರ್ಕಾರಕ್ಕೆ 15 ದಿನ ಗಡುವು ಕೊಟ್ಟಿದ್ದರು. ಇದೀಗ ಆ ಗಡುವು ಸಹ ಮುಗಿದಿದೆ. ಸಮಿತಿ ಸಹ ತನ್ನ ಮುಂದಿನ ನಡೆ ಕುರಿತು ತಿಳಿಸಿಲ್ಲ. ಇದೆಲ್ಲದರ ನಡುವೆಯೇ ಮತ್ತೆ ವಿಶ್ವವಿದ್ಯಾಲಯಕ್ಕೆ
ಭೂಮಿಪೂಜೆ ಕಾರ್ಯಕ್ರಮ ನಡೆಯುತ್ತಿದೆ.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜು ರಾಮನಗರದಲ್ಲೇ ಇರಲಿದೆ. ಎರಡಕ್ಕೂ ಭೂಮಿಪೂಜೆ ನಡೆಸಿ ಕಾಮಗಾರಿ ಆರಂಭಿಸಲಾಗುವುದು.
- ಎಚ್.ಎ. ಇಕ್ಬಾಲ್ ಹುಸೇನ್, ಶಾಸಕ
ಆರೋಗ್ಯ ವಿಶ್ವವಿದ್ಯಾಲಯಕ್ಕೆ ಈಗಾಗಲೇ ಭೂಮಿ ಪೂಜೆ ನಡೆದಿದೆ. ಮತ್ತೆ ಭೂಮಿ ಪೂಜೆ ಕಾರ್ಯಕ್ರಮ ಮಾಡುತ್ತಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ.
ಡಾ. ಎಂ.ಕೆ. ರಮೇಶ್, ಕುಲಪತಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

ಜಿಲ್ಲಾಡಳಿತ ವಿ.ವಿ.ಗೇ ಗೊತ್ತಿಲ್ಲ!

ಸ್ಥಳೀಯ ಶಾಸಕರ ಭೂಮಿಪೂಜೆ ಕಾರ್ಯಕ್ರಮದ ಪೋಸ್ಟರ್ ಹರಿದಾಡುತ್ತಿರುವ ಕುರಿತು ‘ಪ್ರಜಾವಾಣಿ’ಯು ಜಿಲ್ಲಾಡಳಿತ ಮತ್ತು ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದಾಗ ಈ ಕುರಿತು ನಮಗೇನೂ ಗೊತ್ತಿಲ್ಲ ಎಂಬ ಆಶ್ಚರ್ಯಕರ ಪ್ರತಿಕ್ರಿಯೆ ಬಂತು.

‘ಜಿಲ್ಲಾಡಳಿತದ ಗಮನಕ್ಕೆ ಇದುವರೆಗೆ ಕಾರ್ಯಕ್ರಮದ ಮಾಹಿತಿ ಬಂದಿಲ್ಲ. ಬಹುಶಃ ವಿಶ್ವವಿದ್ಯಾಲಯದವರೇ ಮಾಡುತ್ತಿರಬೇಕು. ಅವರನ್ನೇ ವಿಚಾರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಹೇಳಿದರು. ‘ರಾಮನಗರದಲ್ಲಿ ವಿ.ವಿ ಕ್ಯಾಂಪಸ್ ನಿರ್ಮಾಣಕ್ಕೆ ಮತ್ತೆ ಭೂಮಿ ಪೂಜೆ ನಡೆಯುವುದಾದರೆ ವಿಶ್ವವಿದ್ಯಾಲಯದ ಗಮನಕ್ಕೆ ಮೊದಲು ಬರಬೇಕಿತ್ತು. ಸ್ಥಳೀಯವಾಗಿ ಅಲ್ಲಿ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ. ರಮೇಶ್ ತಿಳಿಸಿದರು.

ಅಗತ್ಯವಿದ್ದರೆ ರಾಮನಗರಕ್ಕೂ ಕಾಲೇಜು ಎಂದಿದ್ದ ಸಿ.ಎಂ ಭಾರತ ಜೋಡೊ ಯಾತ್ರೆಗ ಒಂದು ವರ್ಷವಾದ ನೆನಪಿನಾರ್ಥ ರಾಮನಗರದಲ್ಲಿ ಸೆ. 7ರಂದು ನಡೆದಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ‘ಕನಕಪುರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದ್ದು ಅಗತ್ಯವಿದ್ದರೆ ರಾಮನಗರದಲ್ಲೂ ಮಾಡುತ್ತೇವೆ’ ಎಂದಿದ್ದರು. ಇದೇ ವೇದಿಕೆಯಲ್ಲಿ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಕಾಲೇಜು ಕನಕಪುರ ಮತ್ತು ರಾಮನಗರದಲ್ಲೂ ಇರುತ್ತದೆ. ವಿಶ್ವವಿದ್ಯಾಲಯ ಬೇರೆ ಕಾಲೇಜು ಬೇರೆ. ರಾಮನಗರ ಕ್ಷೇತ್ರಕ್ಕೆ 3 ಕಿ.ಮೀ. ಇರುವ ಮರಳವಾಡಿಯಲ್ಲಿ ಕಾಲೇಜು ತಲೆ ಎತ್ತಲಿದೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.