ಮಾಗಡಿ: ಪಟ್ಟಣದಲ್ಲಿ ರಂಗನಾಥಸ್ವಾಮಿ ಜಾತ್ರೆ ಅಂಗವಾಗಿ ಹೊಸಪೇಟೆ ತಿಗಳ ಜನಾಂಗದ ಅರವಟಿಗೆಯಲ್ಲಿ ಶನಿವಾರ ರಂಗನಾಥಸ್ವಾಮಿ ಮತ್ತು ಅಗ್ನಿಬನ್ನಿರಾಯಸ್ವಾಮಿ ಭಾವಚಿತ್ರವಿಟ್ಟು ಪೂಜೆ ಸಲ್ಲಿಸುವ ಮೂಲಕ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಆಚರಿಸಲಾಯಿತು.
ಮುಖಂಡ ನಾರಾಯಣಪ್ಪ ಮಾತನಾಡಿ, ‘ತಿಗಳ ಸಮುದಾಯದ ವರು ಭೂಮಿ ನಂಬಿಕೊಂಡು ಜೀವನ ಮಾಡುತ್ತಿದ್ದೇವೆ. ದವಸ ಧಾನ್ಯ, ಹೂವು, ಹಣ್ಣು, ತರಕಾರಿ ಬೆಳೆದು ಸಮಾಜದ ಸಕಲ ಸಮುದಾಯಗಳಿಗೆ ನೆರವಾಗುತ್ತಿದ್ದೇವೆ. ಸಮುದಾಯದ ಸಾಂಸ್ಕೃತಿಕ ವೀರ ಅಗ್ನಿಬನ್ನಿರಾಯಸ್ವಾಮಿ ಮತ್ತು ರಂಗನಾಥ ಸ್ವಾಮಿಯನ್ನು ಮನೆ ದೇವರೆಂದು ಆರಾಧಿಸುತ್ತಿದ್ದೇವೆ’ ಎಂದರು.
ರಂಗನಾಥ ಸ್ವಾಮಿ ತಿಗಳ ಜನಾಂಗದ ಸೇವಾ ಸಮಿತಿ, ಚಾರಿಟಬಲ್ ಟ್ರಸ್ಟ್ ರಚಿಸಿಕೊಂಡು ಸಮಾಜಮುಖಿ ಕೆಲಸ ಮಾಡಲಾಗುತ್ತಿದೆ. ಜಾತ್ರೆಗೆ ಬರುವ ಭಕ್ತರೆಲ್ಲರಿಗೂ ಮೂರು ದಿವಸ ಕೊತ್ತು ಹಲಸಿನ ಕಾಯಿ, ಅವರೆಕಾಳು ಸಾಂಬಾರು, ರಾಗಿಮುದ್ದೆ, ಪಾಯಸ, ಸಿಹಿಬೂಂದಿಯ ಜೊತೆಗೆ ನೀರು ಮಜ್ಜಿಗೆ, ಪಾನಕ ನೀಡುವುದು ತಲೆಮಾರುಗಳಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.
ಮುಖಂಡರಾದ ಆಣೆಕಾರ ನರಸಿಂಹಯ್ಯ, ಶಿವಲಿಂಗಯ್ಯ, ನರಸಿಂಹಮೂರ್ತಿ, ಪರಮಶಿವಯ್ಯ, ಸಿದ್ದರಾಜು, ರಂಗನಾಥ್, ಗುರುಸಿದ್ದಪ್ಪ, ಲಿಂಗರಾಜು, ಹನುಮಂತಯ್ಯ ಜನಪದ ಹಬ್ಬದ ಬಗ್ಗೆ ಮಾತನಾಡಿದರು.
ಮುಖಂಡರಾದ ಮುದ್ರೆ ಶೆಟ್ಟಳ್ಳಪ್ಪ, ರಮೇಶ್, ಅಂಕಯ್ಯ, ಪ್ರಕಾಶ್, ಭೈರಪ್ಪ, ನರಸಿಂಹಮೂರ್ತಿ, ಹಿರಣಯ್ಯ, ಕೃಷ್ಣಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.