ರಾಮನಗರ: ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಮಿತಿ ಮೀರಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ನಿಗಾ ಇಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಳವಡಿಸಿರುವ ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾ ತನ್ನ ಕೆಲಸ ನಿಲ್ಲಿಸಿದೆ.
ತಾಲ್ಲೂಕಿನ ಬಿಡದಿ ಹೊರವಲಯದ ತಿರುವಿನ ಬಳಿ ಕ್ಯಾಮೆರಾ ಅಳವಡಿಸಲಾಗಿತ್ತು. ಮೈಸೂರು ಕಡೆಯಿಂದ ಬರುವ ವಾಹನಗಳು ತಿರುವು ಹಾದು ಹೋದಾಗ, ಅವುಗಳ ವೇಗ ಎಷ್ಟಿದೆ ಎಂಬುದು ಕ್ಯಾಮೆರಾದಲ್ಲಿ ದಾಖಲಾಗಿ, ನಂತರ ಸಾರ್ವಜನಿಕವಾಗಿ ಡಿಸ್‌ಪ್ಲೇ ಆಗುತ್ತಿತ್ತು. ಜೊತೆಗೆ, ವಾಹನದ ನಂಬರ್ ಪ್ಲೇಟ್ ಚಿತ್ರವೂ ಸೆರೆಯಾಗುತ್ತಿತ್ತು.
ಕ್ಯಾಮೆರಾದಲ್ಲಿ ದಾಖಲಾಗುವ ಮಾಹಿತಿ ಮೇರೆಗೆ ವಾಹನದ ವಿವರವನ್ನು ಪೊಲೀಸರು ಸುಲಭವಾಗಿ ಸುಲಭವಾಗಿ ಕಲೆ ಹಾಕುತ್ತಾರೆ. ನಿಯಮ ಮೀರಿ ವೇಗವಾಗಿ ಸಂಚರಿಸುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ಸಂಗ್ರಹಿಸುತ್ತಾರೆ. ಇದು ಸಂಚಾರ ಪೊಲೀಸರನ್ನು ರಸ್ತೆಗಿಳಿಸದೆ ಎಐ ಕ್ಯಾಮೆರಾ ಮೂಲಕವೇ ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇಟ್ಟು, ಸವಾರರು ನಿಯಮ ಪಾಲಿಸುವಂತೆ ಮಾಡಲು ಸುಲಭ ಮಾರ್ಗವಾಗಿತ್ತು.
ವೇಗಕ್ಕಿಲ್ಲ ಮಿತಿ: ಎಐ ಕ್ಯಾಮೆರಾ ಕೈ ಕೊಟ್ಟಿರುವುದರಿಂದ ವಾಹನ ಸವಾರರು ಹೆದ್ದಾರಿಯಲ್ಲಿ ಸದ್ಯ ನಿಗದಿಪಡಿಸಿರುವ ಪ್ರತಿ ಗಂಟೆಗೆ 100 ಕಿ.ಮೀ. ವೇಗದ ಮಿತಿ ಮೀರಿ ಸಂಚರಿಸುತ್ತಿದ್ದಾರೆ. ಮುಂಚೆ ಕ್ಯಾಮೆರಾ ಭಯದಿಂದ ವೇಗದ ಮಿತಿಯೊಳಗೆ ಸಂಚರಿಸುತ್ತಿದ್ದವರಿಗೆ ಈಗ ಲಗಾಮು ಇಲ್ಲದಂತಾಗಿದೆ.
ಹೆದ್ದಾರಿಯು ಸಂಚಾರಕ್ಕೆ ಮುಕ್ತವಾದ ಒಂಬತ್ತು ತಿಂಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 158 ಜನ ಮೃತಪಟ್ಟಿದ್ದರು. ಈ ಬಗ್ಗೆ, ‘ಪ್ರಜಾವಾಣಿ’ಯ ವಿಶೇಷ ವರದಿ ಗಮನ ಸೆಳೆದಿತ್ತು. ಆಗ ಹೆದ್ದಾರಿ ಸುರಕ್ಷತೆಗೆ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಅದರ ಬೆನ್ನಲ್ಲೇ, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಹೆದ್ದಾರಿ ಪರಿಶೀಲನೆ ನಡೆಸಿದ್ದರು. ನಿಯಮ ಉಲ್ಲಂಘನೆ ತಡೆಗಾಗಿ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಸಂಚಾರ ಪೊಲೀಸರಿಗೆ ಸೂಚಿಸಿದ್ದರು.
ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸರೊಂದಿಗೂ ಎಡಿಜಿಪಿ ಸಭೆ ನಡೆಸಿದ್ದರು. ಆಗ ಜಿಲ್ಲಾ ಪೊಲೀಸರು ಅಪಘಾತಗಳಿಗೆ ಕಾರಣ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರಕ್ಕೆ ನೀಡಿದ್ದ ವರದಿ ಬಗ್ಗೆ ಗಮನ ಸೆಳೆದಿದ್ದರು. ಅಪಘಾತ ತಡೆಗಾಗಿ ಎಐ ಕ್ಯಾಮೆರಾ ಅಳವಡಿಕೆ ಸೇರಿದಂತೆ ವಿವಿಧ ಕ್ರಮಗಳನ್ನು ಸೂಚಿಸಿದ್ದರು.
ಆಗ ಪ್ರಾಧಿಕಾರದವರು ರಾಮನಗರ, ಮಂಡ್ಯ ಹಾಗೂ ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಕ್ಯಾಮೆರಾ ಅಳವಡಿಸಿದ್ದರು. ಜೊತೆಗೆ ಹೆದ್ದಾರಿಯುದ್ದಕ್ಕೂ ಕ್ಯಾಮೆರಾ ಅಳವಡಿಸಲು ಟೆಂಡರ್ ಕರೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ, ಇನ್ನೂ ಆ ಕೆಲಸವಾಗಿಲ್ಲ.
ಕ್ಯಾಮೆರಾ ಕಾರ್ಯಾಚರಣೆ ಸ್ಥಗಿತ ಕುರಿತು ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ಯು ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ಅವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.
ಹೆದ್ದಾರಿಯಲ್ಲಿ ನಿಯಮ ಉಲ್ಲಂಘಿಸಿ ಅತಿ ವೇಗವಾಗಿ ಸಂಚರಿಸುವ ವಾಹನಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ರಾಮನಗರ ಸಂಚಾರ ಠಾಣೆ ಪೊಲೀಸರು ಕಳೆದ ಮೂರೂವರೆ ತಿಂಗಳಲ್ಲಿ 1807 ಪ್ರಕರಣಗಳನ್ನು ದಾಖಲಿಸಿದ್ದಾರೆ. ಉಲ್ಲಂಘನೆ ಮಾಡುವವರಿಗೆ ₹1 ಸಾವಿರ ದಂಡ ಸಹ ವಿಧಿಸುತ್ತಿದ್ದಾರೆ. ಅತಿ ವೇಗದ ಮೇಲೆ ನಿಗಾ ಇಡಲು ಬಿಡದಿ ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಮೂರು ಇಂಟರ್‌ಸೆಪ್ಟರ್ ವಾಹನಗಳಿವೆ. ಹೆದ್ದಾರಿ ಪ್ರಾಧಿಕಾರದವರು ಇನ್ನೂ ಸರಿಯಾಗಿ ಎಐ ಕ್ಯಾಮೆರಾ ಹಾಕಿಲ್ಲದಿರುವುದರಿಂದ ನಮ್ಮ ವಾಹನಗಳ ಮೂಲಕವೇ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.