ರಾಮನಗರ: ಯುವ ಜನೋತ್ಸವ–2024 ಪ್ರಯುಕ್ತ ರೋಟರಿ ಸಿಲ್ಕ್ ಸಿಟಿ ತಂಡವು ಏಡ್ಸ್ ಮತ್ತು ಎಚ್‌ಐವಿ ನಿಯಂತ್ರಣ ಜಾಗೃತಿ ಮ್ಯಾರಥಾನ್ ಆಯೋಜಿಸಿತ್ತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಬೆಳ್ಳಿ ರಕ್ತ ನಿಧಿ, ಲಯನ್ಸ್ ಕ್ಲಬ್ ಹಾಗೂ ಚನ್ನಪಟ್ಟಣದ ಜೀವಾಮೃತ ರಕ್ತ ಕೇಂದ್ರದ ಸಹಯೋಗದಲ್ಲಿ ನಡೆದ ಮ್ಯಾರಥಾನ್‌ಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಚಾಲನೆ ನೀಡಲಾಯಿತು.
ನಂತರ ಮಾತನಾಡಿದ ಜಿಲ್ಲಾ ಆರೋಗ್ಯ ಕುಟುಂಬ ಅಧಿಕಾರಿ ಡಾ. ಕುಮಾರ್, ‘ಮಾರಕ ಏಡ್ಸ್ ರೋಗದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಅಗತ್ಯ. ಸುರಕ್ಷಿತ ಲೈಂಗಿಕ ಸಂಪರ್ಕದಿಂದ ಏಡ್ಸ್ ರೋಗಕ್ಕೆ ಕಾರಣವಾಗಬಲ್ಲ ಎಚ್‌ಐವಿ ಸೋಂಕು ಹರಡದಂತೆ ತಡೆಯಬಹುದು’ ಎಂದು ಹೇಳಿದರು.
‘ಎಚ್ಐವಿ ಸೋಂಕು ಪತ್ತೆಯಾದಾಗ ಭಯಪಡದೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ಪಡೆಯುವ ಜೊತೆಗೆ ಪೌಷ್ಠಿಕ ಆಹಾರ ಸೇವನೆ ಹಾಗೂ ಔಷಧ ಸೇವಿಸಬೇಕು. ರೋಗದ ಕುರಿತು ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು’ ಎಂದು ಸಲಹೆ ನೀಡಿದರು.
‘ಅಸುರಕ್ಷಿತ ಲೈಂಗಿಕ ಕ್ರಿಯೆ, ಮತ್ತೊಬ್ಬರಿಗೆ ಬಳಕೆ ಮಾಡಿದ ಸಿರಿಂಜ್ ಅನ್ನು ಮರು ಬಳಕೆ ಮಾಡುವುದು, ಪರೀಕ್ಷೆ ಮಾಡದ ರಕ್ತದ ಬಳಕೆಯಿಂದ ಎಚ್‍ಐವಿ ಸೋಂಕು ಹರಡುತ್ತದೆ. ಎಚ್‌ಐವಿ ಸೋಂಕಿತ ಗರ್ಭಿಣಿ ಸೂಕ್ತ ಚಿಕಿತ್ಸೆ ಪಡೆದರೆ ಮಗುವಿಗೆ ಸೋಂಕು ಹರಡುವುದನ್ನು ತಡೆಯಬಹುದು’ ಎಂದು ಅಭಿಪ್ರಾಯಪಟ್ಟರು.
ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ, ಶ್ರೀಧರ್ ಕೆ.ಎನ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷ್ ಸೊಸೈಟಿ ಮೇಲ್ವಿಚಾರಕಿ ನಳಿನಾ, ಫಯಾಜ್ ಅಹಮ್ದ್, ಜೀವಾಮೃತ ರಕ್ತನಿಧಿಯ ಚಂದ್ರೇಗೌಡ, ಬೆಳ್ಳಿ ಬ್ಲಡ್ ಬ್ಯಾಂಕ್‌ನ ರಾಮಲಿಂಗಯ್ಯ, ಗಿರೀಶ್ ಎಚ್.ಎಸ್, ರವಿಕುಮಾರ್ ಬಿ.ಎನ್, ಗೋಪಾಲ್, ಶಿವರಾಜ್, ಸುನೀಲ್, ಸುಹಾಸ್, ಗೋವಿಂದ ರಾಜು, ರಾಜಶೇಖರ ಪಾಟೀಲ್ ಹಾಗೂ ಕುಮಾರ್ ಆರ್. ಇದ್ದರು.
ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾದ ಮ್ಯಾರಥಾನ್ ಬಿ.ಎಂ ರಸ್ತೆ ಮಾರ್ಗವಾಗಿ ಎಸ್‌ಪಿ ಕಚೇರಿ ವೃತ್ತ, ಬಿಜಿಎಸ್ ವೃತ್ತ, ರಾಯರದೊಡ್ಡಿ ವೃತ್ತದ ಮಾರ್ಗವಾಗಿ ಬಂದು ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತ್ಯಗೊಂಡಿತ್ತು. 200ಕ್ಕೂ ಹೆಚ್ಚು ಮಂದಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.