ADVERTISEMENT

ಮಾಗಡಿ: ತಾತ್ಕಾಲಿಕ ಗುಡಾರಗಳಲ್ಲಿ ಅಲೆಮಾರಿಗಳ ವಾಸ

ಅಲೆಮಾರಿಗಳಿಗೆ ಗೋಮಾಳದ ಭೂಮಿ ನೀಡಲು ಆಗ್ರಹ

ದೊಡ್ಡಬಾಣಗೆರೆ ಮಾರಣ್ಣ
Published 31 ಜನವರಿ 2024, 6:33 IST
Last Updated 31 ಜನವರಿ 2024, 6:33 IST
ಮಾಗಡಿ ಪಟ್ಟಣದ ಹೊಸಪೇಟೆ ಬಳಿ ಗುಡಾರಗಳಲ್ಲಿ ನೆಲೆಸಿರುವ ಅಲೆಮಾರಿಗಳು
ಮಾಗಡಿ ಪಟ್ಟಣದ ಹೊಸಪೇಟೆ ಬಳಿ ಗುಡಾರಗಳಲ್ಲಿ ನೆಲೆಸಿರುವ ಅಲೆಮಾರಿಗಳು    

ಮಾಗಡಿ: ಹೊಸಪೇಟೆ ಹೊರವಲಯದ ಬಯಲಿನಲ್ಲಿ ತಾತ್ಕಾಲಿಕ ಗುಡಾರಗಳಲ್ಲಿ ವಾಸವಾಗಿರುವ ಅಲೆಮಾರಿ, ಅರೆಅಲೆಮಾರಿ ಕುಟುಂಬಗಳು ಚಳಿ, ಗಾಳಿ, ಬಿಸಿಲಿನಲ್ಲಿ ಹಸುಗೂಸನ್ನು ಎದೆಗೆ ಅವುಚಿಕೊಂಡಿರುವ ಬಾಣಂತಿ, ಗರ್ಭಿಣಿಯರ ಸ್ಥಿತಿ ನೋಡುಗರಲ್ಲಿ ಕಂಬನಿ ತರಿಸುತ್ತಿದೆ.

ತಾಲ್ಲೂಕಿನ ಸಾತನೂರು ಗೇಟ್, ಅಗಲಕೋಟೆ ಹ್ಯಾಂಡ್ ಪೋಸ್ಟ್, ದೋಣಕುಪ್ಪೆ ಗೇಟ್, ಕುದೂರಿನ ಕೆರೆಯಂಗಳ, ಸುಗ್ಗನಹಳ್ಳಿ ಲಕ್ಷ್ಮಿನರಸಿಂಹ ದೇಗುಲ, ಗುಂಡುತೋಪು ಇತರೆಡೆಗಳಲ್ಲಿ ಅಲೆಮಾರಿ ಶಿಳ್ಳೇಕ್ಯಾತ, ಬುಡುಬುಡುಕೆ, ಟೋಕ್ರಿ, ಮಂಡರು, ಹಾವಾಡಿಗ, ದೊಂಬಿದಾಸ, ದೊಂಬರು, ಕೊರಮ, ಕೊರಚ, ಕುರುಮಾಮ, ಕಿಂದರಿಜೋಗಿ ಸಮುದಾಯದವರು ಜೀವನ ಸಾಗಿಸುತ್ತಿದ್ದಾರೆ.

ಅಲೆಮಾರಿಗಳಲ್ಲಿ ಮತದಾನದ ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್‌ಗಳಿವೆ. ಪಡಿತರ ಚೀಟಿ ಇಲ್ಲ. ಅಧಿಕಾರಿಗಳನ್ನು ಕೇಳಿದರೆ, ವಾಸಸ್ಥಳ ದೃಢೀಕರಣ ತನ್ನಿ ಎಂದು ಸಬೂಬು ಹೇಳುತ್ತಾರೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವಾಸಸ್ಥಳ ದೃಢೀಕರಣ ಕೊಡುವುದಿಲ್ಲ. ಪ್ರತಿ ಚುನಾವಣೆಯಲ್ಲೂ ಮತಚಲಾಯಿಸಿದ್ದೇವೆ. ಆದರೂ ಗ್ರಾಮದಲ್ಲಿ ಖಾಯಂ ಆಗಿ ನೆಲೆಸಲು ಬೇಕಾದ ದಾಖಲೆಗ ಕೊಡುತ್ತಿಲ್ಲ ಎಂದು ಅಲೆಮಾರಿ ಆಂಜನೇಯ ನೊಂದು ನುಡಿಯುತ್ತಾರೆ.

ADVERTISEMENT

ಅನ್ಯಾಯ: ತಾಲ್ಲೂಕಿನ ಗೇರಹಳ್ಳಿ ಬಳಿ 25 ವರ್ಷಗಳಿಂದ ಸರ್ಕಾರಿ ಗೋಮಾಳದಲ್ಲಿ ಗುಡಿಸಲು ಹಾಕಿಕೊಂಡು 5 ಅಲೆಮಾರಿ ಕುಟುಂಬ ವಾಸವಿದೆ. ಸರ್ಕಾರಿ ಗೋಮಾಳ ಮಂಜೂರು ಮಾಡುವಂತೆ ಕಂದಾಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇವೆ. ಅಧಿಕಾರಿಗಳು ಗ್ರಾಮಸ್ಥರು ಜಮೀನು ಕೊಡಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಬೂಬು ಹೇಳಿ ಅಲೆಮಾರಿಗಳಿಗೆ ಅನ್ಯಾಯ ಮಾಡಿದ್ದಾರೆ. ಸರ್ಕಾರ ಅಲೆಮಾರಿಗಳಿಗೆ ಗೋಮಾಳದಲ್ಲಿ ಭೂಮಿ ಮಂಜೂರು ಮಾಡಿ ಬದುಕಲು ನೆಲೆ ಒದಗಿಸಿಕೊಡಬೇಕು ಎಂದು ಜಿಲ್ಲಾ ಅಲೆಮಾರಿ ಜಾಗೃತಿ ಸಮಿತಿ ಸದಸ್ಯ ಮಾರಯ್ಯ ದೊಂಬಿದಾಸ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.