ರಾಮನಗರ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ನಗರದ ವಿವಿಧೆಡೆ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೂ ಅಂಬೇಡ್ಕರ್ ಭಾವಚಿತ್ರವಿಟ್ಟು ಪೂಜಿಸುವ ಮೂಲಕ ಸಮಾನತೆಯ ಹರಿಕಾರನ ಜನ್ಮದಿನವನ್ನು ಆಚರಿಸಲಾಯಿತು. ಗಣ್ಯರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉಪನ್ಯಾಸಕ ಶಿವಣ್ಣ ಬಿ. ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಸಮಾನತೆ ಮತ್ತು ಪ್ರಗತಿಯ ಕನಸು ಕಂಡ ಮೇರು ನಾಯಕರಾದ ಅವರು, ನಮ್ಮೆಲ್ಲರ ಹೆಮ್ಮೆಯಾಗಿದ್ದಾರೆ. ಅಂಬೇಡ್ಕರ್ ಅವರ ಚಿಂತೆನೆಗಳು ಸರ್ವಕಾಲಕ್ಕೂ ಸ್ಫೂರ್ತಿಯಾಗಿವೆ. ಅಸಮಾನತೆಯಿಂದ ಕೂಡಿದ್ದ ಸಮಾಜಕ್ಕೆ ಸಂವಿಧಾನದ ಮೂಲಕ ಸಮಾನತೆಯ ಸ್ಪರ್ಶ ನೀಡಿದ ಮಹಾ ಚೇತನ’ ಎಂದು ಬಣ್ಣಿಸಿದರು.
‘ಅಂಬೇಡ್ಕರ್ ಅವರು ಕೇವಲ ಶೋಷಿತ ಸಮುದಾಯಗಳ ಪರವಾಗಷ್ಟೇ ಹೋರಾಡಲಿಲ್ಲ. ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು, ಕಾರ್ಮಿಕರು ಸೇರಿದಂತೆ ಈ ದೇಶದಲ್ಲಿ ಯಾರೆಲ್ಲಾ ಶೋಷಣೆಗೆ ಒಳಗಾಗಿದ್ದಾರೊ ಅವರೆಲ್ಲರ ಹಕ್ಕುಗಳಿಗಾಗಿ ಅಂಬೇಡ್ಕರ್ ಹೋರಾಡಿದರು. ಇಂತಹ ಮಹಾನ್ ವ್ಯಕ್ತಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ಇಡೀ ದೇಶದ ಹೆಮ್ಮೆ’ ಎಂದು ಹೇಳಿದರು.
‘ಅರ್ಥಶಾಸ್ತ್ರಜ್ಞರೂ ಆಗಿದ್ದ ಅಂಬೇಡ್ಕರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ ಕೊಡುಗೆ ನೀಡಿದ್ದಾರೆ. ಮಹಿಳೆಯರು ಮತ್ತು ಕಾರ್ಮಿಕರ ಹಕ್ಕುಗಳಿಗೆ ಸಾಂವಿಧಾನಿಕ ಮಾನ್ಯತೆ ಸಿಗುವಲ್ಲಿ ಅಂಬೇಡ್ಕರ್ ಪಾತ್ರ ದೊಡ್ಡದು. ಮಹಾನ್ ಜ್ಞಾನಿಯಾಗಿದ್ದ ಅವರ ವಿಚಾರಧಾರೆಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಭೌದ್ದ ಧರ್ಮಗುರು ಬೋಧಿಪಾಲ ಬಂತೇಜಿ ಅವರ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆ ಮುಖ್ಯ ರಸ್ತೆ ಹಾದು ಡಿ.ಸಿ ಕಚೇರಿ ತಲುಪಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸರೋಜಾ ದೇವಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ಉಪ ನಿರ್ದೇಕ ಶಿವಕುಮಾರ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಮುಖಂಡರಾದ ಶಿವಕುಮಾರಸ್ವಾಮಿ, ಚಲುವರಾಜು, ಶಿವಲಿಂಗಯ್ಯ, ಶಿವಶಂಕರ್, ಡಾ. ಗೋವಿಂದಯ್ಯ, ಮಾಗಡಿ ಜಯರಾಮಯ್ಯ, ಗೋಪಿ, ಕಿರಣ್, ಗೋವಿಂದರಾಜು, ಕೊತ್ತಿಪುರ ಗೋವಿಂದರಾಜು, ರೈಡ್ ನಾಗರಾಜು, ಶಿವಪ್ರಕಾಶ್, ಅಂಜನಾಪುರ ವಾಸು, ಗುರುಮೂರ್ತಿ, ಹನುಮಯ್ಯ, ಕೋಟೆ ಕುಮಾರ್, ಹರೀಶ್ ಬಾಲು ಹಾಗೂ ಇತರರು ಇದ್ದರು.
‘ಮತದಾನದ ಹಕ್ಕು ಕೊಟ್ಟ ಮಹನೀಯ’
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ಜಿ. ಗೋವಿಂದಯ್ಯ ‘ದೇಶದಲ್ಲಿ ಜಾತಿ–ಧರ್ಮ ಹಾಗೂ ಬಡವ–ಶ್ರೀಮಂತ ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಮತದಾನದ ಹಕ್ಕು ಕೊಟ್ಟ ಮಹನೀಯ ಅಂಬೇಡ್ಕರ್. ಮುಂಚೆ ಶ್ರೀಮಂತರು ಮತ್ತು ಮೇಲ್ಜಾತಿಯವರಿಗೆ ಮಾತ್ರ ಮೀಸಲಾಗಿದ್ದ ಮತದಾನದ ಹಕ್ಕನ್ನು ಸಾರ್ವತ್ರಿಕಗೊಳಿಸಿ ಅದಕ್ಕೆ ಸಂವಿಧಾನದ ಮಾನ್ಯತೆ ಕೊಟ್ಟವರು ಅಂಬೇಡ್ಕರ್. ಅದರಿಂದಾಗಿಯೇ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭು ಎಂಬ ಹೆಗ್ಗಳಿಕೆ ಬಂದಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.