ರಾಮನಗರ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೂ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಶನಿವಾರ ಚನ್ನಪಟ್ಟಣದಲ್ಲಿ ಅದ್ದೂರಿಯಾಗಿ 57ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಚನ್ನಪಟ್ಟಣದ ಎಸ್‌ಎಲ್‌ಎನ್ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗೇಶ್ವರ್ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ 57 ಕೆ.ಜಿ. ತೂಕದ ಕೇಕ್ ಕತ್ತರಿಸಿದರು. ಆದರೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಪರಸ್ಪರ ದೈಹಿಕ ಅಂತರ ನಿಯಮ ಪಾಲನೆ ಮಾತ್ರ ಕಣ್ಮರೆ ಆಗಿತ್ತು. ಸಿಪಿವೈಗೆ ಕೇಕ್ ತಿನ್ನಿಸಲು ಹಾಗೂ ಫೋಟೊ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇದೇ
ಸಂದರ್ಭ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದ್ದು, 200 ಯುನಿಟ್‌ಗೂ ಹೆಚ್ಚು ರಕ್ತ ಸಂಗ್ರಹವಾಯಿತು. ಯೋಗೇಶ್ವರ್ ಪತ್ನಿ ಶೀಲಾ ಸಹ ರಕ್ತದಾನ ಮಾಡಿದರು.
ಕ್ಷಮೆ ಯಾಚನೆ: ಘಟನೆ ಕುರಿತು ಯೋಗೇಶ್ವರ್ ಮಾಧ್ಯಮದ ಮುಂದೆ ವಿಷಾದ ವ್ಯಕ್ತಪಡಿಸಿದರು. ‘ಕೊರೊನಾ ಸಂದರ್ಭದಲ್ಲಿ ಇಂತಹ ಅದ್ದೂರಿ ಆಚರಣೆ ಬೇಡವಾಗಿತ್ತು. ಆದರೆ ನನ್ನ ಅಭಿಮಾನಿಗಳು ಉತ್ಸಾಹದಲ್ಲಿ ಈ ಆಚರಣೆ ಹಮ್ಮಿಕೊಂಡಿದ್ದಾರೆ. ಇದರಿಂದ ಆಗಿರುವ ತೊಂದರೆಗೆ ಕ್ಷಮೆ ಯಾಚಿಸುತ್ತೇನೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.