ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ರಾಗಿಹಳ್ಳಿ ಬಳಿ ಶನಿವಾರ ಸಂಜೆ ಪೊಲೀಸರು ಕೊಲೆ ಯತ್ನ ಪ್ರಕರಣದ ಕಾಲಿಗೆ ಗುಂಡು ಗುಂಡಿಕ್ಕಿ ಬಂಧಿಸಿದ್ದಾರೆ.
ಕುಸಿದು ಬಿದ್ದ ರೌಡಿಶೀಟರ್ ಆನೇಕಲ್‌ನ ವೆಂಕಟರಾಜು ಅಲಿಯಾಸ್ ತುಕಡಿ (26) ಎಂಬಾತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಸೇರಿಸಿದ್ದಾರೆ.
ಪುರಸಭಾ ಸದಸ್ಯ ರವಿ ಕೊಲೆ ಪ್ರಕರಣದ ಆರೋಪಿ ಕಾರ್ತಿಕ್ ಎಂಬಾತನ ಕಾಲಿಗೆ ಪೊಲೀಸರು ಕಳೆದ ಬುಧವಾರ ಗುಂಡಿಕ್ಕಿ ಬಂದಿಸಿದ್ದರು. ಅದಾದ ನಾಲ್ಕು ದಿನಗಳಲ್ಲಿಯೇ ಮತ್ತೊಬ್ಬ ರೌಡಿಶೀಟರ್ ಗುಂಡೇಟು ತಿಂದಿದ್ದಾನೆ.
ವೆಂಕಟರಾಜು ಎರಡು ತಿಂಗಳ ಹಿಂದೆ ಶೆಟ್ಟಹಳ್ಳಿ ಬಳಿ ಕೊಲೆ ಯತ್ನ ನಡೆಸಿದ್ದ. ಈ ಸಂಬಂಧ ಪೊಲೀಸರು ವೆಂಕಟರಾಜು ಬಂಧನಕ್ಕಾಗಿ ಬಲೆ ಬೀಸಿದ್ದರು. ತಲೆಮರೆಯಿಸಿಕೊಂಡಿದ್ದ ಆತ ರಾಗಿಹಳ್ಳಿ ಬಳಿ ಇರುವ ಮಾಹಿತಿ ಜಾಡು ಹಿಡಿದು ಪೊಲೀಸರು ದಾಳಿ ನಡೆಸಿದ್ದರು.
ಆರೋಪಿ ಬಂಧನಕ್ಕೆ ಮುಂದಾದಾಗ ವೆಂಕಟರಾಜು ಅಲಿಯಾಸ್ ತುಕಡಿ ಮಾರಕಾಸ್ತ್ರಗಳಿಂದ ದಾಳಿ ಮಾಡಲು ಯತ್ನಿಸಿದ. ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಸಹ ಪೊಲೀಸ್ ಪೇದೆ ವಿನಯ್ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಆಗ ಜಿಗಣಿ ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್, ರೌಡಿಶಿಟರ್ ಎಡಗಾಲಿಗೆ ಗುಂಡು ಹಾರಿಸಿದರು. ಗಾಯಗೊಂಡ ವೆಂಕಟರಾಜು ಕುಸಿದು ಬಿದ್ದ. ಆರೋಪಿ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ವಿವಿಧ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಎಸ್‌ಪಿ ನಾಗರಾಜು, ಡಿವೈಎಸ್‌ಪಿ ಮೋಹನ್ ಕುಮಾರ್, ಬನ್ನೇರುಘಟ್ಟ ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್, ಅತ್ತಿಬೆಲೆ ಸರ್ಕಲ್ ಇನ್‌ಸ್ಪೆಕ್ಟರ್ ಮುರಳಿ, ಸೂರ್ಯಸಿಟಿ ಸರ್ಕಲ್ ಇನ್‌ಸ್ಪೆಕ್ಟರ್ ಸಂಜೀವ್ ಮಹಾಜನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.