ADVERTISEMENT

‘ಅಕ್ರಮ ಬಯಲು ಆತಂಕ: ಕಾರ್ಯದರ್ಶಿ ನೇಮಕಕ್ಕೆ ವಿರೋಧ’

ಅಣ್ಣಹಳ್ಳಿ: ರೈತರ ದಾರಿ ತಪ್ಪಿಸುತ್ತಿರುವ ಜೆಡಿಎಸ್ ಬೆಂಬಲಿತ ರೋಲ್‌ಕಾಲ್ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 15:05 IST
Last Updated 3 ಜನವರಿ 2024, 15:05 IST
ರಾಮನಗರ ತಾಲ್ಲೂಕಿನ ಅಣ್ಣಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹೊಸ ಕಾರ್ಯದರ್ಶಿ ನೇಮಕಾತಿಗೆ ಸಂಬಂಧಿಸಿದಂತೆ, ನೇಮಕಾತಿ ಪರವಾಗಿರುವ ಗ್ರಾಮದ ಹಾಲು ಉತ್ಪಾದಕರು ರಾಮನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು
ರಾಮನಗರ ತಾಲ್ಲೂಕಿನ ಅಣ್ಣಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹೊಸ ಕಾರ್ಯದರ್ಶಿ ನೇಮಕಾತಿಗೆ ಸಂಬಂಧಿಸಿದಂತೆ, ನೇಮಕಾತಿ ಪರವಾಗಿರುವ ಗ್ರಾಮದ ಹಾಲು ಉತ್ಪಾದಕರು ರಾಮನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು   

ರಾಮನಗರ: ‘ಅಣ್ಣಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಿಯಮಾನುಸಾರವೇ ಹೊಸ ಕಾರ್ಯದರ್ಶಿ ನೇಮಕವಾಗಿದೆ. ಇದರಿಂದ, ತಮ್ಮ ಅಕ್ರಮಗಳು ಬಯಲಿಗೆ ಬರುತ್ತವೆಂಬ ಕಾರಣಕ್ಕೆ ಜೆಡಿಎಸ್ ಬೆಂಬಲಿತ ರೋಲ್‌ಕಾಲ್ ಹೋರಾಟಗಾರರು ಬಡವರ ಹಾಲನ್ನು ರಸ್ತೆಗೆ ಸುರಿಸಿ, ರೈತರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಗ್ರಾಮದ ಹಾಲು ಉತ್ಪಾದಕ ಹಾಗೂ ನೇಮಕಾತಿ ಪರವಾಗಿರುವ ಗುಂಪಿನ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದರು.

‘ಅಕ್ರಮದ ಕಾರಣಕ್ಕಾಗಿ ಸಂಘವು 2009ರಲ್ಲಿ ಸೂಪರ್‌ಸೀಡ್ ಆಗಿದ್ದರಿಂದ, ಆಡಳಿತ ಮೇಲ್ವಿಚಾರಣೆಗೆ ವಿಶೇಷಾಧಿಕಾರಿ ನೇಮಿಸಲಾಯಿತು. ಆಗ, ಸಂಘದಲ್ಲಿ ಹಾಲು ಪರೀಕ್ಷಕರಾಗಿದ್ದ 7ನೇ ತರಗತಿ ಓದಿರುವ ರಾಜಕುಮಾರ್‌ ಅವರನ್ನು ಅರ್ಹತೆ ಇಲ್ಲದಿದ್ದರೂ, ಹಂಗಾಮಿ ಕಾರ್ಯದರ್ಶಿಯಾಗಿ 3 ವರ್ಷ ಮುಂದುವರಿಸಲಾಯಿತು’ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜಕುಮಾರ್ ನೇಮಕಕ್ಕೆ ಸಹಕಾರ ಸಂಘಗಳ ಇಲಾಖೆಯ ಅನುಮೋದನೆ ಇರಲಿಲ್ಲ. ಜೆಡಿಎಸ್‌ ಬೆಂಬಲಿಗರ ಪರವಾಗಿದ್ದ ರಾಜಕುಮಾರ್ ಹಾಲಿಗೆ ನೀರು‌ ಮಿಶ್ರಣ ಮಾಡಿಕೊಂಡು ಬರುವವರ ಪರವಾಗಿದ್ದು, ತೂಕದಲ್ಲೂ ವ್ಯತ್ಯಾಸ ಮಾಡುತ್ತಿರುವ ಆರೋಪಗಳಿವೆ. ಅವರ ಜಾಗಕ್ಕೆ ಅಗತ್ಯ ವಿದ್ಯಾರ್ಹತೆ ಹೊಂದಿರುವ ನಿತ್ಯಾನಂದ ನೇಮಕವಾಗಿರುವುದು ಅಕ್ರಮ ಎಸಗಿಕೊಂಡು ಬಂದವರ ನಿದ್ದೆಗೆಡಿಸಿದೆ’ ಎಂದು ದೂರಿದರು.

ADVERTISEMENT

‘ನಿತ್ಯಾನಂದ ನೇಮಕಾತಿಯನ್ನು ಸಹಕಾರ ಸಂಘಗಳ ವಿವಿಧ ಹಂತದ ಅಧಿಕಾರಿಗಳು ಅನುಮೋದಿಸಿದ್ದಾರೆ. ಅವರು ಸಹ 11 ತಿಂಗಳ ಹಂಗಾಮಿ ಕಾರ್ಯದರ್ಶಿಯಾಗಿರುತ್ತಾರೆ. ಅವರ ವಿರುದ್ಧ ಯಾವುದಾರೂ ಆರೋಪಗಳಿದ್ದರೆ ಸಾಬೀತುಪಡಿಸಲಿ. ಬೇಕಿದ್ದರೆ, ನೇಮಕಾತಿ ರದ್ದುಗೊಳಿಸಲು ಕೋರ್ಟ್ ಮೊರೆ ಹೋಗಲಿ’ ಎಂದು ಸವಾಲು ಹಾಕಿದರು.

ಮತ್ತೊಬ್ಬ ಹಾಲು ಉತ್ಪಾದಕ ಶಿವಾನಂದ ಮಾತನಾಡಿ, ‘ಸಂಘದ ಹಿತಾಸಕ್ತಿಗೆ ತದ್ವಿರುದ್ದವಾಗಿ ನಡೆಯುತ್ತಿರುವ ಬೆಳವಣಿಗೆಗಳ ಹಿಂದೆ ಶಿವರಾಜ್ ಮತ್ತು ಸಂಗಡಿಗರು ಇದ್ದಾರೆ. ಸ್ವಹಿತಾಸಕ್ತಿಗಾಗಿ ಜೆಡಿಎಸ್ ಕಾರ್ಯಕರ್ತರನ್ನು ಸೇರಿಸಿಕೊಂಡು ರಾಜಕೀಯ ಮಾಡುತ್ತಾ ಊರಿನ ನೆಮ್ಮದಿ ಕದಡುತ್ತಿದ್ದಾರೆ. ಸಂಘದಲ್ಲಿ ಹಾಲು ತೆಗೆದುಕೊಳ್ಳಲು ಯಾರೂ ನಿರಾಕರಿಸಿಲ್ಲ. ಪೊಲೀಸರು ಹೇಳಿದರೂ ಅವರೇ ಹಾಕಿಲ್ಲ. ಪರಿಸ್ಥಿತಿ ಹೀಗಿದ್ದರೂ, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಗ್ರಾಮದ ಮುಖಂಡರಾದ ಚಿಕ್ಕಮರಿಯಪ್ಪ ಮತ್ತು ಈಗಿನ ಬಮೂಲ್ ನಿರ್ದೇಶಕ ಪಿ. ನಾಗರಾಜ್ ಅವರ ಶ್ರಮದಿಂದಾಗಿ ಸಂಘವು 2018ರಲ್ಲಿ ಸುಮಾರು ₹25 ಲಕ್ಷದಲ್ಲಿ ಎರಡಂತಸ್ತಿನ ಸ್ವಂತ ಕಟ್ಟಡ ಹೊಂದಿತು. ಅಂದಿನಿಂದ ಸಂಘವು ಸುಸ್ಥಿತಿಯಲ್ಲಿದೆ. ಸಂಘದ ಖಾತೆಯಲ್ಲಿ ಸದ್ಯ ಬಟಾವಡೆ ಮಾಡಿ ಸುಮಾರು ₹7 ಲಕ್ಷ ಹಣ ಉಳಿದಿದೆ. ಮತ್ತೊಂದು ಬ್ಯಾಂಕ್‌ನಲ್ಲಿ ₹21 ಲಕ್ಷ ಠೇವಣಿ ಇದೆ. ಪ್ರತಿ ವರ್ಷ ಉತ್ಪಾದಕರಿಗೆ ಬೋನಸ್ ನೀಡಿದ ನಂತರ, ಸುಮಾರು ₹6 ಲಕ್ಷ ಹಣ ಸಂಘದಲ್ಲಿ ಉಳಿತಾಯವಾಗುತ್ತಿದೆ’ ಎಂದು ತಿಳಿಸಿದರು.

‘1993ರಲ್ಲಿ ಸಂಘ ಸ್ಥಾಪನೆಯಾದಾಗಿನಿಂದ 17 ವರ್ಷ ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿದ್ದವರು ಸಂಘದ ಅಭಿವೃದ್ಧಿಗೆ ಯಾವುದೇ ರೀತಿಯ ಕೊಡುಗೆ ನೀಡಿಲ್ಲ. ಬ್ಯಾಂಕ್‌ ಖಾತೆಯಲ್ಲಿ ಶೂನ್ಯ ಉಳಿತಾಯವಿರುವಂತೆ ನೋಡಿಕೊಂಡಿದ್ದ ಜೆಡಿಎಸ್ ಬೆಂಬಲಿತ ಆಡಳಿತ ಮಂಡಳಿಯವರು ಸಂಘದ ಷೇರುದಾರರ ವಿವರ, ರಸೀತಿ ಹಾಗೂ ಲೆಕ್ಕಪತ್ರ ಪುಸ್ತಕವನ್ನು‌ ಸಹ ಸರಿಯಾಗಿ ಇಟ್ಟಿಲ್ಲ. ಹೊಸ ಕಾರ್ಯದರ್ಶಿ ನೇಮಕವಾದರೆ ಇವೆಲ್ಲದರ ಲೆಕ್ಕ ಕೊಡಬೇಕೆಂಬ ಆತಂಕ ಅವರನ್ನು ಕಾಡುತ್ತಿದೆ’ ಎಂದರು.

ಗ್ರಾಮದ ಹಾಲು ಉತ್ಪಾದಕರಾದ ಚಂದ್ರಶೇಖರ್, ನಾಗರಾಜ್, ಪ್ರಕಾಶ್, ಕಾಳಪ್ಪ, ಕೆ. ಭೀಮಯ್ಯ, ಲಕ್ಷ್ಮಣ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.