ADVERTISEMENT

ಕುದೂರು: ಶಿವೋಪಾಸನೆಯ ತಾಣ ಅಂತರಗಂಗೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 4:18 IST
Last Updated 9 ಮಾರ್ಚ್ 2024, 4:18 IST
ಪ್ರಸನ್ನ ಗಂಗಾಧರೇಶ್ವರ
ಪ್ರಸನ್ನ ಗಂಗಾಧರೇಶ್ವರ   

ಕುದೂರು: ರಾಜ್ಯದಲ್ಲಿರುವ ಎರಡು ಅಂತರಗಂಗೆಗಳ ಪೈಕಿ ಒಂದು ಕೋಲಾರ ಜಿಲ್ಲೆಯಲ್ಲಿದ್ದರೆ, ಮತ್ತೊಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಪಟ್ಟಣದಲ್ಲಿದೆ. ಇಲ್ಲಿನ ಪ್ರಸನ್ನ ಗಂಗಾಧರೇಶ್ವರ ದೇಗುಲವು ಶಿವ ಭಕ್ತರಿಗೆ ಹಾಗೂ ಶಿವೋಪಾಸನೆಗೆ ಸೂಕ್ತ ತಾಣವಾಗಿದೆ.

ದೇಗುಲದ ಹಿನ್ನೆಲೆ: ಕ್ರಿ.ಶ. 1520ರಲ್ಲಿ ನಿರ್ಮಾಣವಾಯಿತೆನ್ನಲಾದ ಈ ದೇಗುಲದಲ್ಲಿ ಪ್ರಕೃತಿದತ್ತವಾಗಿ ಅಂತರಗಂಗೆ ಹರಿಯುತ್ತಿತ್ತು. 1980ರಲ್ಲಿ ದೇಗುಲದ ಜೀವನೋದ್ಧಾರದ ಬಳಿಕ ಅಂತರಗಂಗೆ ಬತ್ತಿ ಹೋಗಿದ್ದು, ಈಗ ಕೃತಕವಾಗಿ ನೀರನ್ನು ಹರಿಸಲಾಗುತ್ತಿದೆ.

ದೇಗುಲದ ಐತಿಹ್ಯದ ಪ್ರಕಾರ ಬಂಜೆಯೊಬ್ಬಳು ತನಗೆ ಮಕ್ಕಳಾದರೆ, ಅದನ್ನು ನಿನಗೆ ಅರ್ಪಿಸುವುದಾಗಿ ಅಂತರಗಂಗೆಗೆ ಹರಕೆ ಹೊತ್ತುಕೊಳ್ಳುತ್ತಾಳೆ. ದೈವ ಕೃಪೆಯಿಂದ ಆಕೆಗೆ ಮಗುವಾಗುತ್ತದೆ. ವರುಷ ತುಂಬಿದ ಬಳಿಕ ಒಲ್ಲದ ಮನಸ್ಸಿನಿಂದ ತಾಯಿಯು ಮಗುವನ್ನು ಶಿವಗಂಗೆಯ ಪಾತಾಳಗಂಗೆ ಬಳಿ ಇರುವ ವೀರಭದ್ರ ದೇವರಿಗೆ ಪೂಜೆ ಸಲ್ಲಿಸಿ, ಬಾಳೆಎಲೆಯ ಮೇಲೆ ಮಗುವನ್ನು ಇಟ್ಟು ಪಾತಾಳ ಗಂಗೆಗೆ ಬಿಟ್ಟು ಮರಳುತ್ತಾಳೆ. ಕೌತುಕವೆಂಬಂತೆ ಆ ಮಗು ಬಾಳೆ ಎಲೆಯ ಸಮೇತ ಕುದೂರಿನ ಅಂತರಗಂಗೆಯಲ್ಲಿ ತೇಲಿತು ಎಂಬುದು ಕ್ಷೇತ್ರದ ಕಥೆ ಹೇಳುತ್ತದೆ.

ADVERTISEMENT

ಸಪ್ತಲಿಂಗಗಳ ಕ್ಷೇತ್ರ: ಅಂತರಗಂಗೆ ಪ್ರಸನ್ನ ಗಂಗಾಧರೇಶ್ವರ ದೇವಾಲಯ ಹಲವು ವಿಶೇಷತೆಗಳಿಂದ ಕೂಡಿದ್ದು, ಇಲ್ಲಿ ಸಪ್ತ ಲಿಂಗಗಳಿವೆ. ಕಾಶಿ ವಿಶ್ವನಾಥ, ವೈದ್ಯನಾಥೇಶ್ವರ, ಮಲ್ಲಿಕಾರ್ಜುನ, ನಂಜುಂಡೇಶ್ವರ, ಮಂಜುನಾಥ, ಪ್ರಸನ್ನ ಗಂಗಾಧರೇಶ್ವರ, ನೀಲಕಂಠೇಶ್ವರನ ರೂಪದಲ್ಲಿ ಶಿವನನ್ನು ಇಲ್ಲಿ ಆರಾಧಿಸಲಾಗುತ್ತದೆ.

ಇದಕ್ಕೆ ಪೂರಕವಾಗಿ ದೇಗುಲದಲ್ಲಿ ಕಾಶಿ ವಿಶಾಲಾಕ್ಷಿ, ಪಾರ್ವತಿ, ಸುಬ್ರಹ್ಮಣ್ಯ, ಕಾಲಭೈರವೇಶ್ವರ, ಅಭಯ ಆಂಜನೇಯ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿನಿತ್ಯ ದೇಗುಲದಲ್ಲಿ ನಾನಾ ರೀತಿಯ ಪೂಜೆಗಳು ನಡೆಯುತ್ತಿರುತ್ತದೆ. ದೇವಾಲಯದಲ್ಲಿರುವ ಷಣ್ಮುಖನ ವಿಗ್ರಹದ ಕೆತ್ತನೆ ಅಪರೂಪವಾಗಿದ್ದು, ಶಿಲ್ಪದ ಮುಂದೆ ಮತ್ತು ಹಿಂದೆ ಒಂದೇ ರೀತಿಯ ಕೆತ್ತನೆ ಕಾಣಬಹುದು. ಸಾಮಾನ್ಯವಾಗಿ ಷಣ್ಮುಖನಿಗೆ ಐದು ಮುಖಗಳಿದ್ದರೆ, ಇಲ್ಲಿನ ಷಣ್ಮುಖನ ಮೂರ್ತಿಗೆ ಮುಂದೆ ಐದು, ಹಿಂದೆ ಮುಖದಲ್ಲಿ ಐದು ಮುಖವನ್ನು ಕೆತ್ತಿರುವ ಶಿಲ್ಪಿ ಕಲಾ ನೈಪುಣ್ಯತೆ ಮೆರೆದಿರುವುದನ್ನು ಕಾಣಬಹುದಾಗಿದೆ.

ಶಿವರಾತ್ರಿಯಂದು ವಿಶೇಷ ಪೂಜೆ: ಅಂತರಗಂಗೆಯ ಪ್ರಸನ್ನ ಗಂಗಾಧರೇಶ್ವರನಿಗೆ ಶಿವರಾತ್ರಿಯಂದು ವಿಶೇಷ ಪೂಜೆ ನೆರವೇರಲಿದೆ. ಶಿವನ ಸಪ್ತ ಲಿಂಗಗಳಿಗೆ ಬೆಳಗ್ಗಿನಿಂದಲೇ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಭಸ್ಮಾಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ ನಡೆಸಿ ಬಳಿಕ ನಾನಾ ಬಗೆಯಲ್ಲಿ ಅರ್ಚನೆ ಸಲ್ಲಿಸಲಾಗುತ್ತದೆ. ಶಿವರಾತ್ರಿ ಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಶಿವರಾತ್ರಿ ಅಂಗವಾಗಿ ಇಡೀ ದೇಗುಲವನ್ನು ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ.

ಹಲವು ವಿಶೇಷತೆಗಳಿಂದ ಕಂಗೊಳಿಸುವ ಅಂತರಗಂಗೆಯ ಪ್ರಸನ್ನ ಗಂಗಾಧರೇಶ್ವರ ದೇವಾಲಯವನ್ನು ಇಲ್ಲಿನ ಗ್ರಾಮಸ್ಥರೆಲ್ಲರೂ ಸೇರಿ ಜೀರ್ಣೋದ್ಧಾರ ಮಾಡಿದ್ದಾರೆ. ನಾನಾ ವಿಶೇಷತೆಗಳ ಆಗರವಾಗಿರುವ ಈ ದೇವಾಲಯಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ ಎನ್ನುತ್ತಾರೆ ಅರ್ಚಕ ರೇಣುಕೇಶ್ ಆರಾಧ್ಯ.

ಜೀರ್ಣೋದ್ದಾರದ ಬಳಿಕ ಇಲ್ಲಿನ ದೇವಾಲಯದ ಸುತ್ತಲ ಗೋಡೆಗಳ ಮೇಲೆ ಕನ್ನಡ ಖ್ಯಾತ ಕವಿಗಳ ಕವನದ ಸಾಲುಗಳು, ಸುಂದರ ನುಡಿ ಮುತ್ತುಗಳನ್ನು ಬರೆಸಲಾಗಿದೆ. ದೇವಾಲಯದ ಅವರಣದಲ್ಲಿ ಸುಂದರ ಉದ್ಯಾನ ನಿರ್ಮಿಸಲಾಗಿದೆ.

ಕುದೂರಿನ ಐತಿಹಾಸಿಕ ಹಿನ್ನೆಲೆಯ ಅಂತರಗಂಗೆಯ ಕಲ್ಯಾಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.