ಮಾಗಡಿ: ತಾಲ್ಲೂಕಿನ ಕಾಳಾರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ವಾಯು ಮಾಲಿನ್ಯ ನಿಯಂತ್ರಿಸಿ ಎಂಬ ದ್ಯೇಯ ವಾಕ್ಯದೊಂದಿಗೆ ವಿಶ್ವಪರಿಸರ ದಿನ ಆಚರಿಸಲಾಯಿತು.
ಕೆವಿಕೆ ಮುಖ್ಯಸ್ಥೆ ಡಾ.ಸವಿತಾ .ಎಸ್.ಎಂ. ಮಾತನಾಡಿ, ‘ಜೀವಿಗಳು ಊಟ, ನೀರು ಇಲ್ಲದೆ ಸ್ವಲ್ಪ ದಿನ ಬದುಕಬಹುದು ಆದರೆ ಗಾಳಿ ಇಲ್ಲದೆ ಬದುಕಲಾರ. ಉಸಿರಾಡಲು ಆಮ್ಲಜನಕ ಒದಗಿಸುವ ಏಕೈಕ ವಸ್ತು ಎಂದರೆ ಮರಗಿಡಗಳು. ಸಸಿಗಳನ್ನು ಬೆಳೆಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.
ಶಾಲಾ ಮಕ್ಕಳು ಮತ್ತು ರೈತ, ರೈತ ಮಹಿಳೆಯರಿಗೆ ತಿಳಿಸಿದರು ಮತ್ತು ಕೃಷಿ ವಿಜ್ಞಾನ ಕೇಂದ್ರದ ನರ್ಸರಿಯಲ್ಲಿ ಬೆಳೆದ ಗಿಡಗಳನ್ನು ಶಾಲಾ ಆವರಣದಲ್ಲಿ ನೆಡಲು ಗಿಡಗಳನ್ನು ವಿತರಿಸಿದರು.
ಸುಸ್ಥಿರ ಕೃಷಿ ಮತ್ತು ಭೂ ನಿರ್ವಹಣೆಯ ವಿಸ್ತರಣಾ ನಿರ್ವಹಣಾಧಿಕಾರಿ ಮತ್ತು ಐ.ಆರ್.ಐ.ಡಿ.ಎಸ್. ನ ತರಬೇತಿ ಅಧಿಕಾರಿ ಗೋವಿಂದರಾಜು ಮಾತನಾಡಿ ನೀರು ಮತ್ತು ಮಣ್ಣಿನ ಸಂರಕ್ಷಣೆಯಾದರೆ ಪರಿಸರ ಸಂರಕ್ಷಣೆಯಾದಂತೆ, ಭೂ ತಾಯಿಯನ್ನು ತಂಪಾಗಿಡಲು ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿ ಉಳಿಸಿ ಎಂದು ಶಾಲಾ ಮಕ್ಕಳಿಗೆ ಕಥೆಯ ಮೂಲಕ ಮನದಟ್ಟು ಮಾಡಿಕೊಟ್ಟರು.
ಶಾಲೆಯ ಮುಖ್ಯೋಪಾಧ್ಯಾಯ ಕುಮಾರಸ್ವಾಮಿ ಮಾತನಾಡಿ, ಸುತ್ತಲಿನ ಜಾಗವನ್ನು ಶುಚಿಯಾಗಿಸಲು ಕೈಜೋಡಿಸೋಣ ಎಂದರು.
ಕಾಳಾರಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ವಿಜ್ಞಾನಿ ಪ್ರೀತು, ಡಾ.ಲತಾ ಆರ್. ಕುಲಕರ್ಣಿ ಅವರು ಪ್ಲಾಸ್ಟಿಕ್ ಬಳಕೆ, ರಸ ವಿಂಗಡಣೆ, ಕಸ ವಿಲೇವಾರಿ ಕುರಿತು ಮಾಹಿತಿ ನೀಡಿದರು.
ಬ್ರಹ್ಮಾನಂದ, ಆಂಜನೇಯ, ಚಂದ್ರಕಲಾ, ಗೀತಾ, ಮಂಜಮ್ಮ ಮತ್ತು ಗ್ರಾಮದ ರೈತರು, ಕಾಳಾರಿಯ ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಭಾಗವಹಿಸಿದ್ದರು. ಸಸಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.