ರಾಮನಗರ: ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದರಿಂದ ಅರ್ಕಾವತಿ ನದಿ ಮೈದುಂಬಿ ಹರಿಯುತ್ತಿದೆ. ನೀರಿನ ಮಟ್ಟ ಏರಿಕೆಯಾಗಿರುವುದರಿಂದ ರಾಮನಗರ ತಾಲ್ಲೂಕಿನ ವಿವಿಧೆಡೆ ನದಿಗೆ ಅಡ್ಡವಾಗಿರುವ ಸಣ್ಣ ಸೇತುವೆಗಳು ಹಾಗೂ ಒಡ್ಡುಗಳು ಮುಳುಗಡೆಯಾಗಿವೆ.
ಕೂನಗಲ್ ಮತ್ತು ಕೆ.ಪಿ. ದೊಡ್ಡಿ ನಡುವಣ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿದ್ದು, ಎರಡೂ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ವಿದ್ಯಾರ್ಥಿಗಳು, ರೈತರು ಸೇರಿದಂತೆ ಸ್ಥಳೀಯರು ಮೂರ್ನಾಲ್ಕು ಕಿ.ಮೀ. ಬಳಸಿಕೊಂಡು ಬರಬೇಕಾಗಿದೆ. ಪಾಲಾಬೋವಿದೊಡ್ಡಿ ಸೇರಿದಂತೆ ನದಿ ಆಸುಪಾಸಿನ ಗ್ರಾಮಗಳ ರೈತರು ನದಿಯಾಚೆಗಿನ ಜಮೀನಿಗೆ ಹೋಗಲು ನಿರ್ಮಿಸಿದ್ದ ತಾತ್ಕಾಲಿಕ ಒಡ್ಡುಗಳು ಕೊಚ್ಚಿ ಹೋಗಿವೆ.
ನದಿಯಂಚಿನಲ್ಲಿರುವ ತೆಂಗಿನ ತೋಟ, ಅಡಿಕೆ ತೋಟ, ರೇಷ್ಮೆ ತೋಟ ಹಾಗೂ ಇತರ ಜಮೀನುಗಳಿಗೆ ನದಿ ನೀರು ನುಗ್ಗಿದ್ದು, ಬೆಳೆಗಳು ಜಲಾವೃತವಾಗಿವೆ. ರಾಮನಗರದ ಬಾಲಗೇರಿಯಲ್ಲಿ ನದಿಯಂಚಿನಲ್ಲಿರುವ ಎರಡ್ಮೂರು ಮನೆಯಂಗಳಕ್ಕೆ ನೀರು ಹರಿದು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅವರಿಗೆ ನಗರಸಭೆ ಸೂಚನೆ ನೀಡಿದೆ.
ಸೇತುವೆ ಕಾಮಗಾರಿ ಸ್ಥಗಿತ: ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದ್ದರಿಂದ ನಗರದ ಶೆಟ್ಟಿಹಳ್ಳಿ ಬೀದಿಯಿಂದ ಜಿಗೇನಹಳ್ಳಿ ಕಡೆಗೆ ಸಂಪರ್ಕ ಕಲ್ಪಿಸಲು ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸುತ್ತಿದ್ದ ಸೇತುವೆ ಕಾಮಗಾರಿ ಸ್ಥಗಿತಗೊಂಡಿದೆ. ಈಗಾಗಲೇ ನಿರ್ಮಿಸಿದ್ದ ಕೆಲ ಕಂಬಗಳು ಸಹ ಮುಳುಗಡೆಯಾಗಿವೆ. ಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆಯಾಗುವ ಮಾಹಿತಿ ಸಿಗುತ್ತಿದ್ದಂತೆ ಗುತ್ತಿಗೆದಾರ ಕೆಲಸ ನಿಲ್ಲಿಸಿದ್ದಾರೆ ಎಂದು ನಗರಸಭೆ ಮೂಲಗಳು ತಿಳಿಸಿವೆ.
‘ಸುಮಾರು ಎರಡು ವರ್ಷದ ಬಳಿಕ ಅರ್ಕಾವತಿ ಈ ಮಟ್ಟಿಗೆ ಮೈದುಂಬಿ ಹರಿಯುತ್ತಿದೆ. ಇಲ್ಲೊಂದು ನದಿ ಇತ್ತು ಎಂಬುದು ಕಾಣದಂತೆ ಕಳೆಗಳು ನದಿಯೊಡಲನ್ನು ಆವರಿಸಿಕೊಂಡಿದ್ದವು. ನದಿಯಂಚಿನ ರೈತರು ಸಹ ನದಿಗೆ ಇಷ್ಟೊಂದು ನೀರು ಬರುವುದಿಲ್ಲ ಎಂದುಕೊಂಡು ಅಕ್ಕಪಕ್ಕವೇ ಸೊಪ್ಪು ಸೇರಿದಂತೆ ಕೆಲ ಬೆಳೆಗಳನ್ನು ಬೆಳೆದಿದ್ದರು. ಈಗ ಅವೆಲ್ಲವೂ ನೀರು ಪಾಲಾಗಿದೆ’ ಎಂದು ತಾಲ್ಲೂಕಿನ ಪಾಲಾಬೋವಿದೊಡ್ಡಿಯ ರೈತ ಆದೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ತೆಂಗು, ಅಡಿಗೆ ಜಲಾವೃತ: ‘ನದಿಯಂಚಿನಲ್ಲಿರುವ ತೆಂಗು, ಅಡಿಕೆ ಹಾಗೂ ರೇಷ್ಮೆ ತೋಟಕ್ಕೆ ನೀರು ನುಗ್ಗಿದೆ. ಆದಷ್ಟು ಬೇಗ ನೀರು ಹರಿದು ಹೋದರೆ ಅಥವಾ ಹಿಂಗಿದರೆ ಪರವಾಗಿಲ್ಲ. ಮೂರ್ನಾಲ್ಕು ದಿನ ಹಾಗೆಯೇ ಇದ್ದರೆ ಬೆಳೆಗಳು ಅತಿಯಾದ ಶೀತದಿಂದಾಗಿ ರೋಗಕ್ಕೆ ತುತ್ತಾಗಲಿವೆ’ ಎಂದು ತಾಲ್ಲೂಕಿನ ಕೂನಗಲ್‌ನ ವಾಸು ಹೇಳಿದರು.
ಬಾಕ್ಸ್...
ಬಾಲಗೇರಿ: ಮನೆಗಳ ಸ್ಥಳಾಂತರ
ತುಂಬಿ ಹರಿಯುತ್ತಿರುವ ಅರ್ಕಾವತಿ ನದಿಯ ನೀರು ನಗರದ ಬಾಲಗೇರಿಯ ನದಿಯಂಚಿನಲ್ಲಿರುವ ಎರಡು ಮನೆಗಳ ಅಂಗಳದವರೆಗೆ ಬಂದಿದೆ. ನದಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಗರಸಭೆಯು ಎರಡೂ ಮನೆಗಳಲ್ಲಿ ವಾಸವಾಗಿರುವ ಕುಟುಂಬಗಳನ್ನು ಸಮೀಪದ ಸರ್ಕಾರಿ ಶಾಲೆಗೆ ಸ್ಥಳಾಂತರ ಮಾಡಿದೆ. ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಬಾಲಗೇರಿಯ ಎರಡು ಮನೆಗಳ ಸಮೀಪ ನೀರು ಬಂದಿದೆ. ನೀರಿನ ಮಟ್ಟ ಹೆಚ್ಚಾದರೆ ಇನ್ನೂ ನಾಲ್ಕೈದು ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಸಮೀಪದ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆದು, ಎರಡು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಇತರ ಕುಟುಂಬಗಳಿಗೂ ಸ್ಥಳಾಂತರವಾಗುವಂತೆ ಸೂಚನೆ ನೀಡಲಾಗಿದೆ. ಜಲಾಶಯದಿಂದ ಇನ್ನೂ 2 ಸಾವಿರ ಕ್ಯುಸೆಕ್ ನೀರು ಬಿಡುವ ಮಾಹಿತಿ ಇದೆ. ಮತ್ತಷ್ಟು ಕುಟುಂಬಗಳಿಗೆ ತೊಂದರೆಯಾದರೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪರಿಹಾರ ಕೇಂದ್ರ ತೆರೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಡಾ. ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಬಾಕ್ಸ್...
ಜಲಾಶಯಕ್ಕೆ ಡಿ.ಸಿ ಭೇಟಿ
ಮಂಚನಬೆಲೆ ಜಲಾಶಯಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಂಗಳವಾರ ಭೇಟಿ ನೀಡಿ. ಜಲಾಶಯದ ಮೇಲ್ಬಾಗದ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ, ಹೆಚ್ಚಿನ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ನದಿಪಾತ್ರದ ಪ್ರದೇಶಗಳ ಮೇಲಾಗಿರುವ ಪರಿಣಾಮದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
‘ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಜಲಾಶಯಕ್ಕೆ 2000 ಕ್ಯೂಸೆಕ್ ನೀರಿನ ಒಳ ಹರಿವಿದ್ದು, 4000 ಕ್ಯೂಸೆಕ್ ಹೊರ ಹರಿವಿದೆ. ಜಲಾಶಯದ ಮೇಲ್ಬಾಗದಲ್ಲಿ ಹೆಚ್ಚು ಮಳೆಯಾದರೆ ಮತ್ತಷ್ಟು ನೀರು ಹರಿದು ಬರಲಿದೆ. ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸಿ, ನೀರಿನ ಮಟ್ಟವನ್ನು ಪರಿಶೀಲಿಸಬೇಕು. ಈ ಬಗ್ಗೆ ನನಗೆ ಮಾಹಿತಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾವೇರಿ ನೀರಾವರಿ ನಿಗಮದ ಮಂಚನಬೆಲೆ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುಮೇರಾ ಹಾಷ್ಮಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ್, ಮಾಗಡಿ ಪೊಲೀಸ್ ಠಾಣೆ ಎಸ್‌ಐ ಮೋಹನ್ ಹಾಗೂ ಸ್ಥಳೀಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.