ADVERTISEMENT

ಚನ್ನಪಟ್ಟಣ: ಪೆಟ್ರೋಲ್‌ ಬಂಕ್‌ ನೌಕರನಿಂದ ಹಣ ಕಿತ್ತು ಪರಾರಿಯಾಗಿದ್ದ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 16:14 IST
Last Updated 16 ನವೆಂಬರ್ 2024, 16:14 IST
ಚನ್ನಪಟ್ಟಣದ ಪೆಟ್ರೋಲ್ ಬಂಕ್ ನ ನೌಕರನ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ನಾಲ್ಕು ಆರೋಪಿಗಳ ಜೊತೆ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ
ಚನ್ನಪಟ್ಟಣದ ಪೆಟ್ರೋಲ್ ಬಂಕ್ ನ ನೌಕರನ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ನಾಲ್ಕು ಆರೋಪಿಗಳ ಜೊತೆ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ   

ಚನ್ನಪಟ್ಟಣ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿರುವ ಗಾಂಧಿ ಭವನದ ಪಕ್ಕದ ಪೆಟ್ರೋಲ್ ಬಂಕ್ ನೌಕರನ ಮೇಲೆ ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದ ಬೆಂಗಳೂರಿನ ನಾಲ್ವರು ಆರೋಪಿಗಳನ್ನು ಇಲ್ಲಿಯ ಪುರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬೆಂಗಳೂರಿನ ಲಕ್ಕಸಂದ್ರದ ಮಹಮ್ಮದ್ ಸೂಫಿಯಾನ್, ಉಮ್ರಾಜ್ ಪಾಷಾ, ಮೊಹಮ್ಮದ್ ಅಷ್ರಾ, ಸೈಯ್ಯದ್ ಶೋಹೆಬ್ ಬಂಧಿತರು. ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಚಾಕುವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ನ.7 ರಂದು ಮುಂಜಾನೆ ಬೆಂಗಳೂರು–ಮೈಸೂರು ಹೆದ್ದಾರಿಯ ಪೆಟ್ರೋಲ್ ಬಂಕ್‌ಗೆ ತೆರಳಿದ್ದ ಆರೋಪಿಗಳು ಬಂಕ್ ನೌಕರನಿಗೆ ಐದು ಸಾವಿರ ನಗದು ಕೊಡುವಂತೆ ಮತ್ತು ಅದಕ್ಕೆ ಬದಲಾಗಿ ಮೊಬೈಲ್‌ ವಾಲೆಟ್‌ನಿಂದ ಹಣ ವರ್ಗಾಯಿಸುವುದಾಗಿ ಹೇಳಿದ್ದರು. 

ಅದನ್ನು ನಂಬಿದ ನೌಕರ ಬ್ಯಾಗ್‌ನಿಂದ ಹಣ ತೆಗೆದು ಕೊಡಲು ಮುಂದಾದಾಗ ಮೊಬೈಲ್‌ನಿಂದ ಹಣ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ  ಎಂದು ಯುವಕರ ತಂಡ ನಾಟಕವಾಡಿತ್ತು. ಆಗ ಹಣ ನೀಡಲು ನಿರಾಕರಿಸಿದ ಬಂಕ್‌ ನೌಕರ ಹಣವನ್ನು ಮತ್ತೆ ಬ್ಯಾಗ್‌ನೊಳಗೆ ಹಾಕಿಕೊಂಡಿದ್ದ.

ಆರೋಪಿಗಳು ಚಾಕುವಿನಿಂದ ಆತನ ಮೇಲೆ ಹಲ್ಲೆ ಮಾಡಿ ಬ್ಯಾಗ್‌ನಲ್ಲಿದ್ದ ₹22 ಸಾವಿರ ನಗದು ಕಿತ್ತುಕೊಂಡು ಪರಾರಿಯಾಗಿದ್ದರು.
ಚನ್ನಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಸರ್ಕಲ್ ಇನ್‌ಸ್ಪೆಕ್ಟರ್‌ ರವಿಕಿರಣ್ ನೇತೃತ್ವದ ತಂಡ ಬೆಂಗಳೂರಿನ ಲಕ್ಕಸಂದ್ರದಲ್ಲಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.