ADVERTISEMENT

ಕಬ್ಬಾಳಮ್ಮ ದೇಗುಲದಲ್ಲಿ ಭಕ್ತನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 4:47 IST
Last Updated 7 ಜೂನ್ 2024, 4:47 IST
ಹಲ್ಲೆಗೊಳಗಾದ ಮಹೇಶ್‌
ಹಲ್ಲೆಗೊಳಗಾದ ಮಹೇಶ್‌   

ಕನಕಪುರ: ತಾಲ್ಲೂಕಿನ ಕಬ್ಬಾಳಮ್ಮ ದೇವಾಲಯದಲ್ಲಿ ದೇವಿಯ ದರ್ಶನಕ್ಕೆಂದು ಅತಿ ಗಣ್ಯರ ಸರದಿಯಲ್ಲಿ ನಿಂತಿದ್ದ ಭಕ್ತರೊಬ್ಬರಿಗೆ ದೇವಾಲಯದ ಭದ್ರತಾ ಸಿಬ್ಬಂದಿ ನಾಗರಾಜು ಎಂಬುವರು ಬೀಗದ ಕೀಯಿಂದ ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ. ತಾಲ್ಲೂಕಿನ ಕೋಡಿಹಳ್ಳಿಯ ಮಹೇಶ್ ಹಲ್ಲೆಗೊಳಗಾದವರು.

ಕೆ.ಆರ್. ಪೇಟೆ ಮೂಲದ ಮಹೇಶ್ ತಮ್ಮ ಮೇಲಿನ ಹಲ್ಲೆ ಖಂಡಿಸಿ, ಭದ್ರತಾ ಸಿಬ್ಬಂದಿ ವಿರುದ್ಧ ದೇವಾಲಯದಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ದೇವಾಲಯದ ಆಡಳಿತಾಧಿಕಾರಿ ಲಕ್ಷ್ಮಿನಾರಾಯಣ್ ಘಟನೆಗೆ ವಿಷಾದ ವ್ಯಕ್ತಪಡಿಸಿ, ನಾಗರಾಜು ಅವರಿಂದ ಮಹೇಶ್ ಬಳಿ ಕ್ಷಮೆ ಕೇಳಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಸಾತನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದರು. ಘಟನೆ ಕುರಿತು ಮಹೇಶ್ ಅವರು ನಾಗರಾಜು ವಿರುದ್ಧ ಪೊಲೀಸ್ ದೂರು ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಬ್ಬಾಳಮ್ಮನ ದರ್ಶನಕ್ಕೆ ಬಂದಿದ್ದೆ. ಸರದಿಯಲ್ಲಿದ್ದ ನನ್ನನ್ನು ತಡೆದ ಭದ್ರತಾ ಸಿಬ್ಬಂದಿ ಹಲ್ಲೆ ಕೂಡ ನಡೆಸಿದ. ಇಂತಹ ವರ್ತನೆ ಸರಿಯಲ್ಲ. ದೇವಾಲಯದಲ್ಲಿ ಇಂತಹ ಘಟನೆಗಳು ಜರುಗದಂತೆ ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕು’ ಎಂದು ಗಾಯಾಳು ಮಹೇಶ್ ಒತ್ತಾಯಿಸಿದರು. 

‘ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಸರದಿ ಸಾಲಿನಲ್ಲಿ ನೂಕುನುಗ್ಗಲು ಉಂಟಾಗಿ ಘಟನೆ ಸಂಭವಿಸಿದೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸುತ್ತೇವೆ. ಭಕ್ತರು ಸಮಾಧಾನದಿಂದ ದೇವರ ದರ್ಶನ ಪಡೆಯಬೇಕು’ ಎಂದು ಕಬ್ಬಾಳಮ್ಮ ದೇವಸ್ಥಾನದ ಸಿಇಒ ಲಕ್ಷ್ಮಿನಾರಾಯಣ್ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.