ಚನ್ನಪಟ್ಟಣ: ಹಾಲು ಉತ್ಪಾದಕರು ಸಂಘಕ್ಕೆ ನೀಡುವ ಉತ್ತಮ ಗುಣಮಟ್ಟದ ಹಾಲು ಸಂಘದ ಸದೃಢತೆಯನ್ನು ಕಾಪಾಡುತ್ತದೆ ಎಂದು ಗೋವಿಂದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ಎಚ್. ನಾಗರಾಜು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಗೋವಿಂದಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ರೈತರು ಸ್ವಾವಲಂಬಿ ಬದುಕು ಸಾಗಿಸಲು ಹೈನುಗಾರಿಕೆ ಉತ್ತಮ ಉಪ ಕಸುಬಾಗಿದೆ. ರೈತರ ಕಷ್ಟದಲ್ಲಿ ಕೈ ಹಿಡಿದಿರುವುದೆ ಹೈನುಗಾರಿಕೆ. ಹಾಲು ಉತ್ಪಾದಕ ರೈತರು ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡಿ ಆರ್ಥಿಕವಾಗಿ ಬೆಳವಣಿಗೆ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಬಮೂಲ್ ಚನ್ನಪಟ್ಟಣ ಶಿಬಿರದ ವಿಸ್ತರಣಾಧಿಕಾರಿ ಝರೀನಾ ಮಾತನಾಡಿ, ಗುಣಮಟ್ಟದ ಹಾಲು ಉತ್ಪಾದನೆಗೆ ರಾಸುಗಳಿಗೆ ಸಮ ಪ್ರಮಾಣದಲ್ಲಿ ಆಹಾರ ನೀಡಬೇಕು. ಇಲ್ಲವಾದಲ್ಲಿ ಫ್ಯಾಟ್ ನಲ್ಲಿ ಏರಿಳಿತ ಕಂಡು ಬರುತ್ತದೆ. ರಾಸುಗಳಿಗೆ ಹಸಿರು ಮೇವಿನ ಜೊತೆಗೆ, ಒಣ ಹುಲ್ಲು, ಪೌಷ್ಟಿಕ ಆಹಾರ ಫೀಡ್ಸ್ ಅನ್ನು ಸಮ ಪ್ರಮಾಣದಲ್ಲಿ ನೀಡಬೇಕು. ಇದರಿಂದ ರಾಸುಗಳಿಗೆ ಕ್ಯಾಲ್ಸಿಯಂ ಇನ್ನಿತರ ಖನಿಜಾಂಶಗಳು ದೊರಕುತ್ತವೆ. ಆಗ ಗುಣಮಟ್ಟದ ಹಾಲು ದೊರೆಯುತ್ತದೆ ಎಂದರು.
ಸಂಘದ ಸಿಇಒ ಜಿ.ಅರ್. ಚಂದ್ರಶೇಖರ್ ಸಂಘದ ಪ್ರಸಕ್ತ ಸಾಲಿನ ವರದಿಯನ್ನು ಮಂಡಿಸಿದರು. ಉಪಾಧ್ಯಕ್ಷ ಮಹದೇವಯ್ಯ, ನಿರ್ದೇಶಕರಾದ ಜಿ.ಕೆ. ಪುಟ್ಟೇಗೌಡ, ಜಿ.ಎನ್. ಸಿದ್ದಪ್ಪಾಜಿ, ದ್ಯಾವಯ್ಯ, ಜಿ.ಸಿ. ತಿಮ್ಮೇಗೌಡ, ಜಿ.ಎಂ. ದೇವರಾಜು, ನರಸಿಂಹಯ್ಯ, ಭಾಗ್ಯಮ್ಮ, ಜಯಮ್ಮ, ಹಾಲು ಪರೀಕ್ಷಕ ಜಿ.ಪಿ. ಚಂದ್ರು, ಸಹಾಯಕ ಜಿ.ಕೆ. ದಿಲೀಪ್. ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.