ಕನಕಪುರ: ಮಾಳಗಾಳು ಗ್ರಾಮದಲ್ಲಿ ಒಕ್ಕಲಿಗ ಸಮುದಾಯದ ಯುವಕರ ಗುಂಪೊಂದು ಭಾನುವಾರ ರಾತ್ರಿ ಪರಿಶಿಷ್ಟ ಜಾತಿ ಯುವಕನ ಮುಂಗೈ ಕತ್ತರಿಸಿ ಹಾಕಿದೆ.
ದಲಿತರ ಕಾಲೊನಿಗೆ ನುಗ್ಗಿದ ಗುಂಪು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವೈರಮುಡಿ ಅವರ ಪುತ್ರ ಅನೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಅನೀಶ್ ಎಡಗೈ ತುಂಡಾಗಿದ್ದು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅವರ ಮಾವ, ಪಿಎಲ್‌ಡಿ ಬ್ಯಾಂಕ್ ಉದ್ಯೋಗಿ ಲಕ್ಷ್ಮಣ್ ಹಾಗೂ ಗೋವಿಂದರಾಜು ಕನಕಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರು ಸೇರಿದಂತೆ ಏಳು ಮಂದಿ ಮೇಲೆ ಗುಂಪು ಹಲ್ಲೆ ನಡೆಸಿದೆ. ಮನೆ ಮುಂದೆ ನಿಲ್ಲಿಸಿದ್ದ ಎರಡು ಆಟೊಗಳನ್ನು ಜಖಂಗೊಳಿಸಿದೆ.
ಒಕ್ಕಲಿಗ ಸಮುದಾಯದ ಹರ್ಷ ಅಲಿಯಾಸ್ ಕೈಮ, ಕರುಣೇಶ, ರಾಹುಲ್, ಶಿವ, ಶಶಾಂಕ, ಸುಬ್ಬ, ದರ್ಶನ್ ಹಾಗೂ ಇತರರ ವಿರುದ್ಧ ಎಸ್‌ಸಿ/ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೊಲೆ ಯತ್ನ ಆರೋಪದಡಿ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಮಾಳಗಾಳು, ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರ ಸ್ವಗ್ರಾಮವಾಗಿದೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಮಾರಕಾಸ್ತ್ರಗಳಿಂದ ಹಲ್ಲೆ
ದಲಿತ ಸಮುದಾಯದ ಯುವಕರಿಬ್ಬರು ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದರು. ಅದೇ ರಸ್ತೆಯಲ್ಲಿ ಹೊರಟಿದ್ದ ಒಕ್ಕಲಿಗ ಸಮುದಾಯದ ಯುವಕರ ಗುಂಪು ರಸ್ತೆಯಲ್ಲಿ ಏಕೆ ನಿಂತಿರುವಿರಿ ಎಂದು ಜಗಳ ತೆಗೆದಿದೆ.
ಭಾನುವಾರ ರಾತ್ರಿ ದಲಿತರ ಕಾಲೊನಿಗೆ (ಎನ್.ಕೆ. ಕಾಲೊನಿ) ನುಗ್ಗಿದ ಒಕ್ಕಲಿಗ ಸಮುದಾಯದ ಯುವಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ.
ಪ್ರಮುಖ ಆರೋಪಿ ಹರ್ಷ ರೌಡಿಶೀಟರ್ ಆಗಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಿಂದ ಆತನನ್ನು ತುಮಕೂರಿಗೆ ಗಡಿಪಾರು ಮಾಡಲಾಗಿತ್ತು. ಆದರೂ, ಆಗಾಗ ಊರಿಗೆ ಬಂದು ಹೋಗುತ್ತಿದ್ದ ಆತನೇ ತನ್ನ ಸಹಚರರೊಂದಿಗೆ ಈ ಕೃತ್ಯ ಎಸಗಿದ್ದಾನೆ ಎಂದು ಲಕ್ಷ್ಮಣ್ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.
ದಲಿತರ ಕಾಲೊನಿಯಲ್ಲಿ ಆತಂಕ
ಕಾಲೊನಿ ನಿವಾಸಿಗಳು ಹಾಗೂ ಪರಿಶಿಷ್ಟ ಸಮುದಾಯದ ಕುಟುಂಬಗಳು ಈ ಹಲ್ಲೆಯಿಂದಾಗಿ ಆತಂಕದಲ್ಲಿವೆ. ನಗರಸಭೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಬಳಿ ತೆರಳಿದ ದಲಿತ ಮುಖಂಡರು ‘ದಲಿತರಿಗೆ ರಕ್ಷಣೆ ಕೊಡಿ’ ಎಂದು ಮನವಿ ಮಾಡಿದರು.
ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ನಗರಸಭೆ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಸ್ದಳದಲ್ಲೇ ಪೊಲೀಸರಿಗೆ ಕರೆ ಮಾಡಿದ ಜಿಲ್ಲಾಧಿಕಾರಿ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ವಾರದ ಹಿಂದೆ (ಜುಲೈ 17) ತಾಲ್ಲೂಕಿನ ತಾಮಸಂದ್ರ ವೃತ್ತದಲ್ಲಿ ಮನೆ ಮುಂದೆ ಶಾಮಿಯಾನ ಹಾಕಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಭೋವಿ ಸಮುದಾಯದವರ ಮನೆಗಳಿಗೆ ನುಗ್ಗಿದ್ದ ತಿಗಳ ಸಮುದಾಯದವರು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದರು.
ಜಾತಿ ದೌರ್ಜನ್ಯದಿಂದಾಗಿ ಬಿಗುವಿನ ವಾತಾವರಣವಿರುವ ಮಾಳಗಾಳು ಎನ್.ಕೆ. ಕಾಲೊನಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡುವ ಜೊತೆಗೆ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆಲಾಬೂ ರಾಮ್ ಐಜಿಪಿ ಕೇಂದ್ರ ವಲಯ
ಆರೋಪಿಗಳ ಬಂಧನಕ್ಕೆ ನಾಲ್ಕು ತಂಡ ರಚಿಸಲಾಗಿದೆ. ಜಿಲ್ಲೆಯಿಂದ ತುಮಕೂರಿಗೆ ಗಡಿಪಾರಾಗಿದ್ದ ರೌಡಿಯೊಬ್ಬ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆಕಾರ್ತಿಕ್ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕನಕಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಲೆ ಹಲ್ಲೆ ದರೋಡೆ ಜೀವ ಬೆದರಿಕೆ ಪ್ರಕರಣ ಸಾಮಾನ್ಯವಾಗಿದ್ದು ಪೊಲೀಸರು ಕೈ ಕಟ್ಟಿ ಕುಳಿತಿದ್ದಾರೆ. ಇದೇ ಕಾರಣಕ್ಕೆ ಜಾತಿ ದೌರ್ಜನ್ಯ ಪ್ರಕರಣ ಹೆಚ್ಚಾಗಿವೆಮಲ್ಲಿಕಾರ್ಜುನ್ ಅಧ್ಯಕ್ಷ ಧಮ್ಮ ದೀವಿಗೆ ಟ್ರಸ್ಟ್ ಕನಕಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.